ದಂ ಎಳೆಯುವವರಿಗೆ ಅಂಜಿಕೆ ಇಲ್ಲ!
ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 3
ಸಾರ್ವಜನಿಕ ವಲಯದಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಕಾನೂನು ತಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಯಾರ ಭಯವೂ ಇಲ್ಲದೇ ತಾಲೂಕಿನ ಸರ್ಕಾರಿ ಕಾರ್ಯಾಲಯ, ಆಸ್ಪತ್ರೆ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಬಿಂದಾಸ್ ಆಗಿ ಧೂಮಪಾನ ನಡೆಯುತ್ತಿದೆ.
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ನೆಲೆಯಲ್ಲಿ ಇದನ್ನು ನಿಗ್ರಹಿಸಲು ಸರ್ಕಾರ ವಿವಿಧ ಕಸರತ್ತು ನಡೆಸುತ್ತಲೇ ಇರುತ್ತದೆ. ಆದರೆ ಧೂಮಪಾನಿಗಳಿಗೆ ದಂ ಎಳೆಯಬೇಕೆಂಬ ಮನಸ್ಸಾಯಿತೆಂದರೆ ಮುಗಿತು. ನಿಂತಲ್ಲೇ ಬೀಡಿ, ಸಿಗರೇಟ್ ಹಚ್ಚಿ ಹೊಗೆ ಬಿಡಲು ಶುರುವಿಡುತ್ತಾರೆ. ಹೀಗೆ ಮಾಡುವುದರಿಂದ ಧೂಮಪಾನಿಗಳಷ್ಟೇ ಹಾನಿಯನ್ನು ಅಕ್ಕ ಪಕ್ಕದಲ್ಲಿರುವವರು ಅನುಭವಿಸುತ್ತಾರೆ ಎಂದು ಆರೋಗ್ಯ ಸಮೀಕ್ಷೆ ಹೇಳಿದೆ.
ಬಸ್, ಪಾರ್ಕ್, ಆಸ್ಪತ್ರೆ ಮತ್ತಿತರ ಸ್ಥಳಗಳಲ್ಲಿ ದಂ ಎಳೆಯುವ ಜನರು ತಮ್ಮ ಜತೆಗೆ ಅಕ್ಕಪಕ್ಕದವರ ಆರೋಗ್ಯಕ್ಕೂ ಕೊಳ್ಳಿ ಇಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಬೇಕು ಎನ್ನುವುದು ಪ್ರಜ್ಞಾವಂತರ ಒತ್ತಾಯವಾಗಿತ್ತು. ಇದಕ್ಕೆ ಮಣಿದ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿಸಿ ಕಾನೂನು ರೂಪಿಸಿತ್ತು. ಶಾಲೆ-ಕಾಲೇಜು, ಆಸ್ಪತ್ರೆ, ಬಸ್-ರೈಲು ನಿಲ್ದಾಣ, ಸರ್ಕಾರಿ ಕಚೇರಿಗಳು ಧೂಮಪಾನಕ್ಕೆ ನಿಷೇಧ. ಅಲ್ಲಿ ದಂ ಎಳೆಯುವುದು ಶಿಕ್ಷಾರ್ಹ ಅಪರಾಧವೂ ಹೌದು.
ವಿಚಿತ್ರವೆಂದರೆ ಬಹುತೇಕ ಸರ್ಕಾರಿ ಕಾರ್ಯಾಲಯಗಳಲ್ಲಿರುವ ಶೌಚಗೃಹಗಳೇ ದಂ ಎಳೆಯುವವರ ತಾಣವಾಗಿವೆ. ಗುರುವಾರ ತಹಸೀಲ್ದಾರ್ ಕಾರ್ಯಾಲಯ, ತಾಲೂಕು ಆಸ್ಪತ್ರೆ ಆವರಣದಲ್ಲಿ ಧೂಮಪಾನ ಯಾರ ಹೆದರಿಕೆ ಇಲ್ಲದೇ ನಡೆದಿತ್ತು. ಸುತ್ತಲೂ ಹೋಮ ಹಾಕಿದಂತೆ ಹೊಗೆ ಏಳುತ್ತಿತ್ತು. ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಮತ್ತು ಆಫೀಸ್ ಕೆಲಸಕ್ಕೆ ಬಂದ ಜನ ಸೇದಿ ಬಿಸಾಡಿದ ಸಿಗರೇಟ್ ತುಣುಕುಗಳು ಇದಕ್ಕೆ ಸಾಕ್ಷಿಯಾದವು.
ಜೂ. 21ರಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಮತ್ತು ಪಟ್ಟಣ ಪಂಚಾಯಿತಿಗೆ ಆಕಸ್ಮಿಕ ಭೇಟಿ ನೀಡಿದಾಗ ಇಲಾಖೆಗಳಲ್ಲಿಯ ಅವ್ಯವಸ್ಥೆ ಮತ್ತು ಗಲೀಜು ಕಂಡು ಅಧಿಕಾರಿಗಳಿಗೆ ಸ್ವಚ್ಛತೆ ಕೈಗೊಳ್ಳುವಂತೆ ತಾಕೀತು ಮಾಡಿದ್ದರು. ಆದರೆ ಅಧಿಕಾರಿಗಳು ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ತಾವೇ ದಂ ಎಳೆಯುವ ಕಾರ್ಯದಲ್ಲಿ ತೊಡಗಿರುವುದು ಎಷ್ಟು ಸಮಂಜಸ ಎಂದು ಯೋಚಿಸುವಂತಾಗಿದೆ.
ಪ್ರಮುಖ ಸ್ಥಳಗಳಲ್ಲಿ 100 ಮೀಟರ್ ಅಂತರದಲ್ಲಿ ಬೀಡಿ-ಸಿಗರೇಟ್ ಮಾರಬಾರದು ಎಂಬ ನಿಯಮವಿದ್ದರೂ ಇದಕ್ಕೆ ಯಾವುದೇ ತಡೆ ಇರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಇರುವುದು ನಿಜ. ಆದರೆ, ಇದನ್ನು ಕಟ್ಟುನಿಟ್ಟಾಗಿ ಪಾಲನೆ ಅಧಿಕಾರಿಗಳಿಂದ ನಡೆಯುತ್ತಿಲ್ಲ.
ಉತಾರ ಪಡೆಯಲು, ಅಟಲಜೀ ಜನಸ್ನೇಹಿ ಕೇಂದ್ರಕ್ಕೆ, ಪಡಿತರ ಚೀಟಿ ಪಡೆಯಲು ಹಾಗೂ ಉಪನೋದಣಿ ಇಲಾಖೆಯೂ ಇಲ್ಲಿಯೇ ಇರುವುದರಿಂದ ನಿತ್ಯ 300ಕ್ಕೂ ಹೆಚ್ಚು ಜನ ಬರುತ್ತಿದ್ದು, ಸ್ವಲ್ಪ ಅವ್ಯವಸ್ಥೆಗೆ ಕಾರಣವಾಗಿದೆ. ಪೊಲೀಸ್ ಇಲಾಖೆಯವರ ಗಮನಕ್ಕೆ ತಂದು ಮೊದಲು ನೋಟಿಸ್ ನೀಡಲಾಗುವುದು. ಸುಧಾರಣೆ ಕಾಣದಿದ್ದಲ್ಲಿ ಕಾನೂನು ಪ್ರಕಾರ ರು. 150 ದಂಡ ವಿಧಿಸಲಾಗುವುದು.
-ಗಾಳಿ ಕೊಟ್ರೇಶ್ವರ್, ತಹಸೀಲ್ದಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

