ಗದಗ

ಅರಹುಣಸಿ ಗ್ರಾಮದೇವಿ ಜಾತ್ರೆ ಇಂದು

Published On :

ಕನ್ನಡಪ್ರಭ ವಾರ್ತೆ, ರೋಣ, ಜು.7
ತಾಲೂಕಿನ ಅರಹುಣಸಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಗ್ರಾಮದೇವತೆ (ಅಕ್ಕತಂಗಿಯರ ಜಾತ್ರೆ)ಯ ಜಾತ್ರೆಯು ಜು. 8ರಂದು ಜರುಗಲಿದೆ.
ಶತಮಾನಗಳ ಹಿಂದೆ ಆದಿ ದೇವತೆಯಾದ ಶ್ರೀದೇವಿಯು ಇಲ್ಲಿ ಬಂದು ನೆಲೆಸಿದಳಂತೆ. ಭಕ್ತರು ದೇವಿಯ ಕೃಪೆಗೆ ಪಾತ್ರರಾಗಲು ಪ್ರತಿ ವರ್ಷ ಜಾತ್ರೆ ನಡೆಸುವುದಾಗಿ ನಿವೇದಿಸಿದರಂತೆ. ಆಗ ದೇವಿಯು ಅರ್ಚಕನ ಮೈಯಲ್ಲಿ ಬಂದು, ಊರಿಂದಾಚೆ (ಅರಹುಣಸಿ) 2 ಕಿ.ಮೀ. ದೂರದಲ್ಲಿರುವ ನನ್ನನ್ನು ಗ್ರಾಮದೊಳು ಕರೆದುಕೊಂಡು ಹೋಗಬೇಕೆಂದರೆ, ನನಗೆ ಹೆಜ್ಜೆಗೊಂದು ಪ್ರಾಣಿಯನ್ನು ಬಲಿ ಕೊಡುವಂತೆ ಕೇಳಿದಳಂತೆ. ಇದು ಅಸಾಧ್ಯವೆಂದು ಅರಿತ ಭಕ್ತರು ಪ್ರಾಣಿಯ ಬದಲಿಗೆ ಹೆಜ್ಜೆಗೊಂದು ತೆಂಗಿನಕಾಯಿ ಒಡೆಯುವುದಾಗಿ ಬೇಡಿಕೊಂಡರಂತೆ. ಅದಕ್ಕೆ ದೇವಿಯ ಒಪ್ಪಿಗೆ ಸಿಕ್ಕಿತಂತೆ.
ಅಂದಿನಿಂದ ಇಂದಿನವರೆಗೂ ದೇವತೆ (ಅಕ್ಕತಂಗಿಯರು)ಯರು ಇಟ್ಟ ಹೆಜ್ಜೆಯ ಲೆಕ್ಕದಂತೆ ಸುಮಾರು 5000 ಸಾವಿರಕ್ಕೂ ಹೆಚ್ಚು ಕಾಯಿಗಳನ್ನು ಇಲ್ಲಿ ಒಡೆಯಲಾಗುತ್ತಿದೆ. ಜಾತ್ರೆಯು ಗ್ರಾಮದಿಂದ 2 ಕಿ.ಮೀ ಆಚೆಗೆ ದೇವತೆ ನೆಲೆಸಿರುವ ಸ್ಥಳದಲ್ಲಿ ಸುತ್ತಲಿನ ಸಾವಿರಾರು ಗ್ರಾಮಗಳ ಭಕ್ತರ ಮಧ್ಯೆ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ವೈಶಿಷ್ಟ್ಯತೆ ಮತ್ತು ವಿಭಿನ್ನತೆಯಿಂದ ಜರುಗಲಿದೆ. ದೇವಿ ನೆಲೆಸಿದ ಸ್ಥಳದಿಂದ ಅಂಕ ತಂಗಿಯರು ತಲೆ ಮೇಲೆ ಕುಂಭವನ್ನು ಹೊತ್ತು ಗ್ರಾಮ ಪ್ರವೇಶಿಸುವದು ಮತ್ತೊಂದು ವಿಶೇಷವಾಗಿದೆ. ಒಂದೇ ಹೊಟ್ಟೆಯಲ್ಲಿ ಹುಟ್ಟಿದ ಅಂಕ ತಂಗಿಯರಿಗೆ ಮಾತ್ರ ಕುಂಭ ಹೊರುವ ಪದ್ಧತಿಯನ್ನು ತಲಾ ತಲಾಂತರದಿಂದ ನಡೆಸಿಕೊಂಡ ಪದ್ಧತಿ ಇಂದಿಗೂ ಜಾರಿಯಿದೆ ಎಂದು ಗ್ರಾಮದ ನನ್ನಯ್ಯಸ್ವಾಮಿಗಳು ಹಿರೇಮಠ ಕನ್ನಡಪ್ರಭಕ್ಕೆ ತಿಳಿಸಿದರು.
ನಾಟಕ ಪ್ರದರ್ಶನ:  ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರಾ ನಿಮಿತ್ತವಾಗಿ ಮಾರುತೇಶ್ವರ ತರುಣ ನಾಟ್ಯ ಸಂಘದ ವತಿಯಿಂದ ಕವಿ ಶೇಖರ ಕಂಬಾರ ವಿರಚಿತ 'ಬಡವ ಬಿಸಿದ ಕೊಡಲಿ' ಎಂಬ ಸಾಮಾಜಿಕ ನಾಟಕ ಜು 8ರಂದು ರಾತ್ರಿ 10.30ಕ್ಕೆ ಜರುಗಲಿದೆ. ಉದ್ಘಾಟನೆಯನ್ನು ಶಾಸಕ ಜಿ.ಎಸ್. ಪಾಟೀಲ ನೆರವೇರಿಸುವರು.  ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ವೇ.ಮೂ. ನನ್ನಯ್ಯಸ್ವಾಮಿ ಹಿರೇಮಠ ನೇತೃತ್ವ ವಹಿಸುವರು. ವೆಂಕನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಪಿಎಸ್‌ಐ ಡಿ.ಬಿ. ಪಾಟೀಲ, ಜಿ.ಪಂ. ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ತಾ.ಪಂ. ಸದಸ್ಯ ಧರ್ಮಣ್ಣ ಭೂಸಗೌಡ್ರ, ಕೆ.ಪಿ. ಪಾಟೀಲ ಮುಂತಾದವರು ಉಪಸ್ಥಿತರಿರುವರು ಎಂದು ಮಾರುತೇಶ್ವರ ನಾಟ್ಯ ತರುಣ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.