ಗದಗ

ವಸತಿರಹಿತರ ಅನಿರ್ದಿಷ್ಟ ಧರಣಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 7
ಗದಗ-ಬೆಟಗೇರಿ ಗುಡಿಸಲು ನಿವಾಸಿಗಳ, ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳ ಹಾಗೂ ವಸತಿ ರಹಿತರ ಕುಟುಂಬಗಳ ಬೇಡಿಕೆ ಈಡೇರಿಸಲು ಆಗ್ರಹಿಸಿ ಸೋಮವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.
ಗದಗ-ಬೆಟಗೇರಿಯಲ್ಲಿ 30-40 ವರ್ಷಗಳಿಂದ ಸಾವಿರಾರು ಬಡ ಕುಟುಂಬಗಳು ಕೊಳಚೆ ಪ್ರದೇಶದ ಗುಡಿಸಲುಗಳಲ್ಲಿ, ಬಾಡಿಗೆ ಮನೆಗಳಲ್ಲಿ ಹಾಗೂ ನಗರದಲ್ಲಿ ಯಾವುದೇ ಮನೆಗಳು, ನಿವೇಶನ ಇಲ್ಲದೇ ವಸತಿರಹಿತರಾಗಿ ವಾಸಿಸುತ್ತಿವೆ. ನಗರಕ್ಕೆ ವಸತಿ ಸೌಲಭ್ಯಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ತಂದು ನೂರಾರು ಕೋಟಿ ಅನುದಾನ ಖರ್ಚು ಮಾಡಲಾಗಿದೆ.
ಆದರೆ, ಇಂದು ಸಾವಿರಾರು ಕುಟುಂಬಗಳು ಗುಡಿಸಲಲ್ಲಿ, ಬೀದಿ ಬದಿಗಳಲ್ಲಿ, ಬಾಡಿಗೆ ಮನೆಗಳಲ್ಲಿ ಕನಿಷ್ಠ ಮಟ್ಟದ ಸೌಲಭ್ಯಗಳಿಲ್ಲದೇ ಹೀನಾಯ ಜೀವನ ನಡೆಸುತ್ತಿದ್ದಾರೆ. 2 ವರ್ಷಗಳಿಂದ ನಗರದ ಸ್ಲಂ ಪ್ರದೇಶದ ಸಮಸ್ಯೆ ಮತ್ತು ವಸತಿ ರಹಿತರ ಬೇಡಿಕೆಗೆ ಆಗ್ರಹಿಸಿ ನಿರಂತರ ಹೋರಾಟಗಳನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ನೀಡುತ್ತ ಬರಲಾಗಿದೆ. ಆದರೆ, ಈವರೆಗೂ ಸ್ಲಂ ಸಮಿತಿಯ ಪದಾಧಿಕಾರಿಗಳ ಜತೆಗೆ ಸಭೆ ನಡೆಸುವುದಾಗಲಿ ಅಥವಾ ವಸತಿ ರಹಿತರ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯವಾಗಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಪ್ರತಿಭಟನಾಕಾರರು ಹೇಳಿದರು.
ಹಕ್ಕೊತ್ತಾಯಗಳು
ಗದಗ-ಬೆಟಗೇರಿ ವಸತಿ ರಹಿತರ ಯಾದಿ ತಯಾರಿಸಿ ಈಗಾಗಲೇ ಜಿಲ್ಲಾಧಿಕಾರಿಗೆ ನೀಡಿದ್ದು, ತಕ್ಷಣ ವಸತಿರಹಿತರಿಗೆ ನಿವೇಶನಗಳನ್ನು ಮಂಜೂರು ಮಾಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಈ ಹಿಂದೆ 2004 ರಲ್ಲಿ ಗಂಗಿಮಡಿ ಹತ್ತಿರ 10 ಎಕರೆ ಭೂಮಿಯಲ್ಲಿ 330 ಫಲಾನುಭವಿಗಳನ್ನು ಆಶ್ರಯ ಸಮಿತಿಯಿಂದ ಆಯ್ಕೆ ಮಾಡಿದ್ದು, ಇದರಲ್ಲಿ ಶೇ. 75ರಷ್ಟು ಫಲಾನುಭವಿಗಳು ಸ್ಥಿತಿವಂತರು ಇರುವುದರಿಂದ ಫಲಾನುಭವಿಗಳ ಮರು ಆಯ್ಕೆ ಮಾಡಿ ನಗರದ ವಸತಿ ರಹಿತರಿಗೆ ಆದ್ಯತೆ ನೀಡಬೇಕು.
ನಗರದಲ್ಲಿ ಸ್ಲಂ ಜನಸಂಖ್ಯೆಯ ಅನುಗುಣವಾಗಿ ಸ್ಲಂ ಪ್ರದೇಶಗಳ ಪುನರ್ ವಸತಿಗಾಗಿ ಭೂಮಿಯನ್ನು ಮೀಸಲಿಟ್ಟು ರಾಜೀವ್ ಆವಾಸ್ ಯೋಜನೆಯಡಿಯಲ್ಲಿ ನಿಜವಾದ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಎಲ್ಲ ಕೊಳಗೇರಿಗಳು ಮೂಲ ಸೌಲಭ್ಯದಿಂದ ವಂಚಿತವಾಗಿದ್ದು, ತಕ್ಷಣ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಧರಣಿಯಲ್ಲಿ ಅಶೋಕ ಕುಡತಿನ್ನಿ, ಇಮ್ತಿಯಾಜ ಮಾನ್ವಿ, ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಶರೀಫ ಬಿಳೆಯಲಿ, ಯಲ್ಲಪ್ಪ ರಾಮಗಿರಿ, ಅಶೋಕ ಕುಸಬಿ, ಅಬುಬಕ್ಕರ ಮಕಾಂದಾರ, ಇಬ್ರಾಹಿಂ ಮುಲ್ಲಾ, ಅಸೂಫ ಮಜ್ಜಗಿ, ಪರಶುರಾಮ ಕಾಳೆ, ಅನಿಲ ಕಾಳೆ, ಆರತಿ ಎನ್. ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.