ಗದಗ

ಕಲ್ಲು ಮೂರ್ತಿ ದೇವರು ದೇವರಲ್ಲ: ಮಹಾಂತ ದೇವರು

Published On :

ಮುಂಡರಗಿ: ಎಲ್ಲಿಯೋ ಗುಡ್ಡದಲ್ಲಿ ಹುಟ್ಟಿದ ಕಲ್ಲನ್ನು ತಂದು ಶಿಲ್ಪಿಯೊಬ್ಬ ಮೂರ್ತಿ ಮಾಡಿದ, ಅದಕ್ಕೆ ಅರ್ಚಕನೊಬ್ಬ ಬಂದು ಪ್ರಾಣ ಪ್ರತಿಷ್ಠಾಪನೆ ಮಾಡಿದ ಹೀಗೆ ಕಲ್ಲು, ಶಿಲ್ಪಿ ಹಾಗೂ ಅರ್ಚಕರಿಂದ ತಯಾರಾದ ಕಲ್ಲು ಮೂರ್ತಿಯು ದೇವರಾಗಲು ಹೇಗೆ ಸಾಧ್ಯ? ಕಲ್ಲು ಮೂರ್ತಿಯ ದೇವರು ದೇವರಲ್ಲ ಎಂದು ದೆಹಲಿ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ಹೇಳಿದರು. ಅವರು ಗುರುವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಒಂದು ತಿಂಗಳಕಾಲ ಜರುಗುತ್ತಿರುವ ಶರಣರ ತತ್ವದರ್ಶ ಪ್ರವಚನದಲ್ಲಿ ಮಾತನಾಡಿದರು. ಇಂದು ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರಗಳು ನಿಲ್ಲಬೇಕು. ಅಜ್ಞಾನ, ಅಂಧಕಾರ, ಅಸಡ್ಡೆಯಿಂದ ನಾವು ಹೊರಬರಬೇಕಾಗಿದೆ. ವರ ಕೊಡುವ ದೇವರು ಒಂದೆರಡಾದರೆ ಶಾಪಕೊಡುವ ದೇವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹುಟ್ಟಿಕೊಂಡಿರುವುದು ವಿಪರ್ಯಾಸವಾಗಿದೆ. 12ನೇ ಶತಮಾನದಲ್ಲಿಯೇ ಸತ್ಯದ ಸಾಕ್ಷಾತ್ಕಾರದ ಕುರಿತು ಜಗತ್ತಿಗೆ ತೋರಿಸಿದವರು ಅಣ್ಣ ಬಸವಣ್ಣನವರು. ಇದ್ದ ಜಂಗಮನನ್ನು ಮನೆಗೆ ಕರೆತಂದು ಅವನಿಗೆ ಸಂತೃಪ್ತಿಗೊಳಿಸಿ ಅವರ ಜ್ಞಾನದ ನುಡಿಗಳನ್ನು ಕೇಳಿ ಇತರರಿಗೆ ತಿಳಿಸುವುದು ಲಿಂಗಾಯತ ಧರ್ಮದ ನಿಜವಾದ ಕರ್ಥವ್ಯವಾಗಿದೆ. ಶರಣರ ತತ್ವಗಳನ್ನು ಕೇವಲ ವಚನಗಳಲ್ಲಿ ಮಾತ್ರವಲ್ಲ ಜನಪದಗಳ ಮೂಲಕವೂ ಸಾರಿ ಹೇಳಿದ್ದಾರೆ.
21ರಂದು ಮುಷ್ಕರ
ಗದಗ: 15, 20 ವರ್ಷಗಳಿಂದ ಗೌರವ ಸಂಭಾವನೆ ಪಡೆದುಕೊಂಡು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಸರ್ಕಾರ ಇದುವರೆಗೂ ಕಾಯಂಗೊಳಿಸಿಲ್ಲ. ಪ್ರತಿ ತಿಂಗಳು ವೇತನ ನೀಡುತ್ತಿಲ್ಲ. ಪತ್ರಿಕೆ ಬಿಲ್ ಹೆಚ್ಚಳ, ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ, ಜು. 21ರಿಂದ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ರಾಜ್ಯ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮುಷ್ಕರ ಹಮ್ಮಿಕೊಂಡಿದೆ. ಮುಷ್ಕರದಲ್ಲಿ ಜಿಲ್ಲೆಯ ಎಲ್ಲ ಮೇಲ್ವಿಚಾರಕರು ತಪ್ಪದೇ ಭಾಗವಹಿಸಬೇಕು ಹಾಗೂ ಜು. 20ರ ಮಧ್ಯಾಹ್ನ 3 ಗಂಟೆಗೆ ಗದಗ ರೇಲ್ವೆ ನಿಲ್ದಾಣದಲ್ಲಿ ಹಾಜರಿರಲು ಗದಗ ಜಿಲ್ಲಾ ಸಂಘದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9008974889, 9986776478, 9449339542 ಸಂಪರ್ಕಿಸಬೇಕು ಎಂದು ಮಲ್ಲೇಶ ಬ್ಯಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಪೂರ್ವಭಾವಿ ಸಭೆ
ಗದಗ: ಗದಗ ತಾಲೂಕಿನ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 100ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಲು ಗ್ರಾಮದ ಗುರು- ಹಿರಿಯರು, ಶಾಲಾ ಶಿಕ್ಷಕ ವೃಂದ ನಿರ್ಧರಿಸಿದ್ದು. ಈ ಕುರಿತು ಚರ್ಚಿಸಲು ಜು. 20ರ ಬೆಳಗ್ಗೆ 10ಕ್ಕೆ ಶಾಲೆಯ ಆವರಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಶಾಲೆಯ ಹಳೇ ವಿದ್ಯಾರ್ಥಿಗಳು, ಸರ್ಕಾರಿ, ಅರೆ ಸರ್ಕಾರಿ ನೌಕರರು, ಕೈಗಾರಿಕೆ, ಕೃಷಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರು ಹಾಗೂ ಶಾಲಾ ಸುಧಾರಣಾ ಸಮಿತಿ ಪದಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಶಾಲೆ ಪ್ರಕಟಣೆ ತಿಳಿಸಿದೆ.
ಫೆಲೋಶಿಪ್‌ಗೆ ಅರ್ಜಿ ಆಹ್ವಾನ
ಗದಗ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಸಕ್ತ ಸಾಲಿನಲ್ಲಿ 5 ಜನರಿಗೆ ತಲಾ ಒಂದು ಲಕ್ಷದಂತೆ ಫೆಲೋಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಾರಲೇಖದೊಂದಿಗೆ ಸಲ್ಲಿಸಲು ಆ. 15 ಕೊನೆ ದಿನವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ದೂರವಾಣಿ: (080-22211730, 22106460)ಗೆ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.