ಪ್ಲಾಸ್ಟಿಕ್ ನಿಷೇಧ ಸಮರ್ಪಕವಾಗಲಿ
ಕನ್ನಡಪ್ರಭ ವಾರ್ತೆ, ಗದಗ, ಜು. 18
ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ನಿಷೇಧದ ಕುರಿತು ಗದಗ ಜಿಲ್ಲಾಡಳಿತ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಕುರಿತು ಆದೇಶ ಹೊರಡಿಸಿದ್ದರೂ ಅದು ಸಮರ್ಪಕ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿದಲ್ಲದೇ ನಡೆಯುತ್ತಿದೆ. ಇದರಿಂದ ಪರಿಸರದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮ ಕುರಿತು ಕೇವಲ ನಾಲ್ಕಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕೈ ತೊಳೆದುಕೊಳ್ಳುತ್ತಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದಿರುವುದು ಸಮಾಜ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ನಿಷೇಧ ಅವಶ್ಯವಾಗಿದೆ.
ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ: ಈ ಕುರಿತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದರಿಂದ ಸುಪ್ರೀಂ ಕೋರ್ಟ್ನ ಆದೇಶ ಪರಿಪಾಲನೆಯಾಗದೇ ಇರುವುದು ವಿಷಾದಕರ. ಪರಿಸರ ಸಂರಕ್ಷಣೆ ಕುರಿತು ಹೇಳಿಕೆ ನೀಡುವ ಹಾಗೂ ಪರಿಸರ ಕುರಿತು ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆಗಳು ಈ ಕುರಿತು ಯಾವುದೇ ಕ್ರಮಕ್ಕೆ ಇಲ್ಲಿವರೆಗೂ ಧ್ವನಿಯೆತ್ತದೇ ಇರುವುದನ್ನು ಗಮನಿಸಿದಲ್ಲಿ ಇವರದೆಲ್ಲ ಎಂಥ ಸಂಘಟನೆಗಳು ಎನ್ನುವ ಜಿಜ್ಞಾಸೆ ಸಾರ್ವಜನಿಕರಲ್ಲಿ ಮೂಡಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಕುರಿತು ಗಮನಹರಿಸಿ ನಗರದೆಲ್ಲೆಡೆ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ನ್ನು ನಿಷೇಧಿಸುವತ್ತ ಗಮನ ಹರಿಸಬೇಕಿದೆ.
ಮಾರುಕಟ್ಟೆಯಲ್ಲಿ ಅತಿಯಾದ ಬಳಕೆ: ಇಂದು ಗದಗ, ಬೆಟಗೇರಿ ಅವಳಿ ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಎತ್ತ ನೋಡಿದರೂ ಪ್ಲಾಸ್ಟಿಕ್ ವಸ್ತುಗಳು ಕಾಣುತ್ತಿವೆ. ಪ್ಲಾಸ್ಟಿಕ್ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದು ಹಾಗೂ ವಸ್ತುಗಳನ್ನು ಕೊಂಡ್ಯೊಯಲು ಸರಳವಾಗುವುದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಂದು ಮಾರುಕಟ್ಟೆಗೆ ಭೇಟಿ ನೀಡಿದರೆ, ಚಹ ಕುಡಿಯುವ ಪ್ಲಾಸ್ಟಿಕ್ ಕಪ್ಗಳು, ಬಳಕೆಯಾದ ಪ್ಲಾಸ್ಟಿಕ್ ಹಾಳೆಗಳು ಕಾಣಸಿಗುತ್ತವೆ. ಯಾವುದೇ ವಸ್ತುಗಳನ್ನು ಖರೀದಿಸಲು ಅಂಗಡಿ ಹಾಗೂ ಬೇಕರಿಗಳಿಗೆ ತೆರಳಿದರೆ ಅಲ್ಲಿ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿಯೇ ಕಟ್ಟಿ ಕೊಡುವುದರಿಂದ ಬಳಕೆ ಅತಿಯಾಗುತ್ತಿದೆ.
ಪರಿಸರ ಪ್ರೇಮಿಗಳ ನಿಷ್ಕಾಳಜಿ: ಪ್ಲಾಸ್ಟಿಕ್ ನಿಷೇಧ ಕುರಿತು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಇದನ್ನರಿತ ಪರಿಸರ ಪ್ರೇಮಿಗಳು ಪ್ಲಾಸ್ಟಿಕ್ ನಿಷೇಧದ ಕಡೆ ಗಮನಹರಿಸದೇ ಇರುವುದು ವಿಷಾದಕರ ಸಂಗತಿ. ಪರಿಸರ ದಿನಾಚರಣೆಯನ್ನು ಆಡಂಬರದ ದಿನಾಚರಣೆಯ ಹಾಗೆ ಆಚರಿಸಲಾಗುತ್ತದೆ. ಆದರೆ, ಪರಿಸರ ಹಾನಿಗೆ ಕಾರಣವಾಗುವ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸುವ ಕುರಿತು ಸಂಘಟನೆಗಳು ಮಾತನಾಡದಿರುವುದು ವಿಪರ್ಯಾಸದ ಸಂಗತಿ. ಇನ್ನಾದರೂ ಪರಿಸರ ಪ್ರೇಮಿಗಳು, ಜಿಲ್ಲಾಡಳಿತ, ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳು ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ಶ್ರಮಿಸಬೇಕಿದೆ.
ಸಾರ್ವಜನಿಕರ ಸಹಕಾರ ಅವಶ್ಯ: ಸರ್ಕಾರ ಮತ್ತು ಜಿಲ್ಲಾಡಳಿತ ಪ್ಲಾಸ್ಟಿಕ್ ಬಳಕೆ ಕುರಿತು ಎಷ್ಟೇ ಕಟ್ಟುನಿಟ್ಟಿನ ಆದೇಶ ಹೊರಡಿಸಿದರೂ ಅದನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ. ಪ್ರತಿಯೊಂದು ಸ್ಥಳಗಳಲ್ಲಿ ಅವರೆ ಸ್ವಯಂಪ್ರೇರಣೆಯಿಂದ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಮನೆಯಿಂದಲೇ ಬಟ್ಟೆ ಚೀಲಗಳನ್ನು ತಂದು ಬಳಕೆ ಮಾಡಬೇಕು. ಅಂದಾಗ ಪ್ಲಾಸ್ಟಿಕ್ ನಿಷೇಧ ಕಾನೂನು ಪರಿಣಾಮಕಾರಿ ಜಾರಿಯಾಗಲು ಸಾಧ್ಯ.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

