104 ಆರೋಗ್ಯ ವಾಹಿನಿ ಜನಪ್ರಿಯಗೊಳಿಸಿ
ಕನ್ನಡಪ್ರಭ ವಾರ್ತೆ, ಗದಗ, ಜು. 22
ಜನಸಾಮಾನ್ಯರು ಅದರಲ್ಲೂ ವೈದ್ಯಕೀಯ ಸೇವೆಗಳ ವ್ಯಾಪ್ತಿಯಿಂದ ದೂರವಿರುವವರು ದಿನದ 24 ಗಂಟೆ ತುರ್ತು ವೈದ್ಯಕೀಯ ಸಲಹೆಗೆ 104ಕ್ಕೆ ದೂರವಾಣಿ ಕರೆ ಮಾಡುವ ಸರಳ ಸೌಲಭ್ಯವನ್ನು ಹೆಚ್ಚು ಹೆಚ್ಚು ಜನರಿಗೆ ಪರಿಚಯಿಸಲು ಗದಗ ಜಿಪಂ ಪ್ರಭಾರಿ ಸಿಇಓ ಜಿ.ಎಸ್. ಷಡಕ್ಷರಪ್ಪ ತಿಳಿದರು.
ಅವರು ಮಂಗಳವಾರ 104 ಆರೋಗ್ಯ ವಾಹಿನಿ ಕುರಿತು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಜರುಗಿದ ವಿಶೇಷ ಮಾಹಿತಿ ಹಾಗೂ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
104 ಆರೋಗ್ಯ ಸಹಾಯವಾಣಿ ಸೇವಾ ಸೌಲಭ್ಯವನ್ನು ಮನೆಯಿಂದಲೇ ದೂರವಾಣಿ ಮೂಲಕ ತುರ್ತು ಸಂದರ್ಭವು ಸೇರಿದಂತೆ ಹಲವಾರು ವೈದ್ಯಕೀಯ ವಿಷಯಗಳ ಕುರಿತು ಸರಳವಾಗಿ ಮಾಹಿತಿ ಪಡೆಯುವ ಅವಕಾಶ ನೀಡುತ್ತದೆ. ಆರೋಗ್ಯ ಮತ್ತು ಮಹಿಳಾ ಇಲಾಖೆ ಕಾರ್ಯಕರ್ತರು ಈ ಕುರಿತು ಸರಿಯಾದ ಮಾಹಿತಿ ಪಡೆದು ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ 104 ಆರೋಗ್ಯ ವಾಹಿನಿ ಕುರಿತು ಮಾಹಿತಿ ನೀಡಲು ಅವರು ಕರೆ ನೀಡಿದರು.
104 ಆರೋಗ್ಯ ಸೇವೆಯ ಅಭಿವೃದ್ಧಿ ಮುಖ್ಯಸ್ಥ ಡಾ. ಎಸ್.ಸಿ. ಧಾರವಾಡ ಮಾತನಾಡಿ, ಕಳೆದ ವರ್ಷದ ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ ಜನತೆಗೆ ವೈದ್ಯಕೀಯ ಚಿಕಿತ್ಸೆಯನ್ನು ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ 104 ಉಚಿತ ಆರೋಗ್ಯ ವಾಹಿನಿ ಸೇವೆಯನ್ನು ಪ್ರಾರಂಭಿಸಿದೆ. ಹುಬ್ಬಳ್ಳಿಯ ಐಟಿ ಪಾರ್ಕ್ ಮೊದಲ ಅಂತಸ್ತಿನಲ್ಲಿ ನೆಲೆಗೊಂಡಿರುವ ಈ ಸೇವಾ ಕೇಂದ್ರ ಈವರೆಗೆ 12 ಲಕ್ಷ ಕರೆಗಳನ್ನು ಸ್ವೀಕರಿಸಿದೆ ಎಂದರು.
ನಗರದ ಟಾಂಗಾಕೂಟದಲ್ಲಿನ ಮಾಹಿತಿ ಕೇಂದ್ರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಬಿ. ಚೆನ್ನಶೆಟ್ಟಿ ಚಾಲನೆ ನೀಡಿ ಮಾತನಾಡಿ, 104 ಆರೋಗ್ಯ ವಾಹಿನಿ 108 ರಂತೆ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಯಾವುದೇ ಮೂಲೆಯಿಂದ 24 ಗಂಟೆಯೂ ಕಾರ್ಯನಿರತ 104ಕ್ಕೆ ಮೊಬೈಲ್ ಅಥವಾ ಸ್ಥಿರ ದೂರವಾಣಿ ಕರೆ ಮಾಡಿ ಆರೋಗ್ಯ ಪರಿಣಿತರ ಸಲಹೆ, ಆಪ್ತ ಸಮಾಲೋಚನೆ, ಸರ್ಕಾರಿ ಆರೋಗ್ಯ ಸಂಸ್ಥೆಗಳ ಮಾಹಿತಿ ಹಾಗೂ ಆರೋಗ್ಯ ಸೇವೆಗಳ ಕುರಿತು ದೂರು ಇದ್ದಲ್ಲಿ ಅದರ ದಾಖಲಾತಿ ಮಾಡಬಹುದಾಗಿದೆ. ಈ ಸೇವೆಯ ಲಭ್ಯತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗದಗ ಜಿಲ್ಲೆಯಲ್ಲಿ ಮಾಹಿತಿ, ಶಿಕ್ಷಣ ಹಾಗೂ ಸಂಪರ್ಕ ಉದ್ದೇಶಗಳ ಮಾದರಿ, ಜನಜಾಗೃತಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ವಾಹಿನಿ ಸೇವಾಭಿವೃದ್ಧಿ ಅಧಿಕಾರಿ ಡಾ. ಎಸ್.ಸಿ. ಧಾರವಾಡ, ಈ ಸೇವೆಯ ವೈದ್ಯಾಧಿಕಾರಿ ಡಾ. ಎಫ್.ಎ. ಖಾಜಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೊಸಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

