ಬಂಡಾಯದ ಗುಡ್ಡದಲ್ಲಿ ಗಣಿಗಾರಿಕೆ ಗುಮ್ಮ
ಕನ್ನಡಪ್ರಭ ವಾರ್ತೆ, ನರಗುಂದ, ಜೂ. 2
ಪಟ್ಟಣದ ಪುರಸಭೆ ವ್ಯಾಪ್ತಿಗೆ ಒಳಪಡುವ ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಮತ್ತು ಮಣ್ಣು ಸಾಗಾಣಿಕೆ ಮಾಡಬಾರದೆಂದು 2002ರಲ್ಲಿ ಜಿಲ್ಲಾಧಿಕಾರಿ ಆದೇಶವಿದ್ದರೂ ಗುಡ್ಡದಲ್ಲಿ ದಿನನಿತ್ಯ ಪುರಸಭೆ ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ಕಲ್ಲು ಗಣಿಗಾರಿಕೆ, ಮಣ್ಣು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ರಾಜಕೀಯ ಒತ್ತಡ: ಪ್ರತಿದಿನ ಪುರಸಭೆ ವ್ಯಾಪ್ತಿಯ ಗುಡ್ಡದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ವಾಹನಗಳಲ್ಲಿ ತೆಗೆದುಕೊಂಡು ಹೋಗುವಾಗ ಚೆಕ್ ಪೋಸ್ಟ್ನಲ್ಲಿ ಪುರಸಭೆ ಸಿಬ್ಬಂದಿಗೆ ಇದು ಗುಡ್ಡದ ಪಕ್ಕ ಖಾಸಗಿ ಜಮೀನುಗಳಿಂದ ತಂದಿದ್ದೇವೆ ಎಂದು ಸುಳ್ಳು ಹೇಳುವ ಕಾರ್ಯ ನಡೆಯುತ್ತಿದೆ.
ಮೇಲಾಗಿ ಪುರಸಭೆ ಅಧಿಕಾರಿ ಎಸ್. ರಾಜಶೇಖರ್ ಖಡಕ್ ಆಗಿ ಇಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದರೆ ರಾಜಕೀಯ ಒತ್ತಡಗಳಿಗೆ ಮಣಿದು ಅಕ್ರಮವಾಗಿ ಸಾಗಾಟಕ್ಕೆ ಅನುಮತಿ ನೀಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಅಪಾಯ ತಪ್ಪಿದ್ದಲ್ಲ: ಪುರಸಭೆ ವ್ಯಾಪ್ತಿಯ ಗುಡ್ಡದ ಜಾಗೆಯಲ್ಲಿ ಆಳವಾದ ಮಟ್ಟದಲ್ಲಿ ಗಣಿಗಾರಿಕೆ ಮಾಡಿ ಬೃಹತ್ ಗುಂಡಿಗಳನ್ನು ತೋಡಿದ್ದಾರೆ. ಗುಡ್ಡದ ಅಕ್ಕ ಪಕ್ಕದಲ್ಲಿ ವಾಸಿಸುವ ನಿವಾಸಿಗಳಿಗೆ ತಮ್ಮ ಜಾನುವಾರು ಮತ್ತು ಮೇಕೆ, ಕುರಿಗಳನ್ನು ಮೇಯಿಸಲು ಹೋದ ಜನತೆಗೆ ಇಂದಲ್ಲ ನಾಳೆ ಈ ಗುಂಡಿಗಳಿಂದ ಅಪಾಯ ತಪ್ಪಿದ್ದಲ್ಲ. ಆದಷ್ಟು ಬೇಗ ಜಿಲ್ಲಾಡಳಿತ, ಪುರಸಭೆ ಸಿಬ್ಬಂದಿ ಈ ಬಗ್ಗೆ ಲಕ್ಷ್ಯ ವಹಿಸಿ ಯಾವುದೇ ರಾಜಕಾರಣಕ್ಕೆ ಮಣಿಯದೇ ಇತಿಹಾಸ ಹೊಂದಿರುವ ಬಂಡಾಯದ ಗುಡ್ಡವನ್ನು ಕಾಪಾಡುತ್ತಾರೋ ಕಾದು ನೋಡಬೇಕು.
ನರಗುಂದ ಗುಡ್ಡದಲ್ಲಿ ಹಲವು ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದರಿಂದಾಗಿ ಇಲ್ಲಿನ ಸುಂದರ ಪರಿಸರ ನಾಶವಾಗುತ್ತಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾಡಳಿತ, ತಾಲೂಕಾಡಳಿತ ಅಕ್ರಮ ಗಣಿಗಾರಿಕೆ ನಿಲ್ಲಿಸಿ ಈ ಬಂಡಾಯದ ಗುಡ್ಡದಲ್ಲಿ ಸಸಿ ನೆಟ್ಟು ಸುಂದರ ಪ್ರವಾಸಿ ತಾಣವನ್ನಾಗಿಸಲು ಕ್ರಮ ಕೈಗೊಳ್ಳಬೇಕು.
- ರುದ್ರನಾಥ ಕಲ್ಯಾಣಶಟ್ಟಿ, ಸಾಹಿತಿ, ಚಿಂತಕ
ಸದ್ಯ ಗಣಿಗಾರಿಕೆ ಖಾಸಗಿಯವರ ಜಮೀನಿನಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಮೇಲಾಗಿ ನಾವು ಕೂಡ ಪುರಸಭೆ ವ್ಯಾಪ್ತಿಯ ಗುಡ್ಡ ಸರ್ವೇ ಮಾಡಿಸಲು ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ. ಶೀಘ್ರ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಪ್ರದೇಶ ಗಣಿಗಾರಿಕೆ ತಡೆಯಲು ಮುಂದಾಗುತ್ತೇವೆ.
- ಎಸ್. ರಾಜಶೇಖರ, ಪುರಸಭೆ ಅಧಿಕಾರಿ
ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

