ಧೃತಿಗೆಡದೆ ಕಾರ್ಯನಿರ್ವಹಿಸಿ: ಶಾಸಕ ರಾಮಕೃಷ್ಣ ದೊಡ್ಡಮನಿ
ಮುಂಡರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜರುಗುವ ವಿವಿಧ ಹಂತಗಳ ಚುನಾವಣೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡದೆ ಬರಲಿರುವ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀರಲಕೇರಿ ಅವರಿಗೆ ಮತ ನೀಡುವಂತೆ ಪದವೀಧರರನ್ನು ಪ್ರೇರೇಪಿಸಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಮಂಗಳವಾರ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ನಿಮಿತ್ತ ಶಾಸಕರ ಮನೆಯಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಜನತೆ ಬದಲಾವಣೆ ಬಯಸಿದ್ದರಿಂದ ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ವಿರುದ್ಧ ದೊರೆಯಿತು ಎಂದರು. ಹಳ್ಳಿಗಳಿಗೆ ತೆರಳಿ ಪದವೀಧರರ ಮನ ಒಳಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು. ತಾಪಂ ಸದಸ್ಯ ಪಿ.ಎಂ. ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಟ್ರೇಶ ಅಂಗಡಿ, ನಿವೃತ್ತ ತಹಸೀಲ್ದಾರ್ ಟಿ.ಎಲ್. ನಾಯಕ, ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ, ನಿವೃತ್ತ ಉಪನ್ಯಾಸಕ ಎ.ವೈ. ನವಲಗುಂದ ಇದ್ದರು.
ಗಣಿತ ಸರಳವಾಗಿ ಬೋಧಿಸಿ: ಡಿಸಿ
ಗದಗ: ಗಣಿತವನ್ನು ಅತ್ಯಂತ ಸರಳ ಮತ್ತು ಸುಲಲಿತವಾಗಿ ಕಲಿಸುವ ಜಾಣ್ಮೆಯನ್ನು ಶಿಕ್ಷಕರು ಹೊಂದುವುದು ಅವಶ್ಯ ಎಂದು ಗದಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ಕುಮಾರ ಹೇಳಿದರು. ಗದುಗಿನ ವಿಡಿಎಸ್ಟಿ ಬಾಲಕಿಯರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಗದಗ ಶಹರ ಮತ್ತು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಗದಗ ಜಿಲ್ಲಾ ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಹೊಸ ಪಠ್ಯ ಪುಸ್ತಕ ಕುರಿತ 3 ದಿನದ ವಿಶೇಷ ತರಬೇತಿ ಉದ್ಘಾಟಿಸಿ ಮಾತನಾಡಿದರು.ಬೆಂಗಳೂರಿನ ಡಿಎಸ್ಇಆರ್ಟಿ ನಿರ್ದೇಶಕ ಎ.ಎಸ್.ಆರ್. ಮನಹಳ್ಳಿ, ಡಿಡಿಪಿಐ ಬಿ.ವಿ. ರಾಜೇಂದ್ರಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಪ್ರಾಚಾರ್ಯ ರಘುವೀರ, ಬಿಇಒ ಎಸ್.ಆರ್. ಹೂಗಾರ, ಐ.ಬಿ. ಬೆನಕೊಪ್ಪ, ಎಂ.ಎ. ರಡ್ಡೇರ, ಬೆಳಗಾವಿ ಡಯಟ್ನ ನಿವೃತ್ತ ಉಪನಿರ್ದೇಶಕ ಎಸ್.ಎಸ್. ಬಳ್ಳಾರಿ ಇದ್ದರು. ಎಸ್.ಎಂ. ಪತ್ತಾರ ಪ್ರಾರ್ಥಿಸಿದರು.
ಸ್ಲಂ ಅಭಿವೃದ್ಧಿಗೆ ಬಿಜೆಪಿ ಬದ್ಧ: ವೀರೇಶ ಅಂಚಟಗೇರಿ
ಗದಗ: ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾ ಕಾರ್ಯಕಾರಿಣಿ ಸಭೆ ಗದಗ ನಗರದ ಸ್ಟೇಷನ್ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಈಚೆಗೆ ಜರುಗಿತು. ರಾಜ್ಯ ಸ್ಲಂ ಪ್ರಧಾನ ಕಾರ್ಯದರ್ಶಿ ವೀರೇಶ ಅಂಚಟಗೇರಿ ಮಾತನಾಡಿ, ಸ್ಲಂ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರು ಪದವೀಧರ ಮತದಾರರನ್ನು ಗುರುತಿಸಿ ನಮ್ಮ ಅಭ್ಯರ್ಥಿ ಪ್ರೊ. ಎಸ್.ವಿ. ಸಂಕನೂರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.ಜಿಲ್ಲಾ ಉಸ್ತುವಾರಿ ಎಂ.ಎಸ್. ಕರಿಗೌಡ್ರ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಅರವಿಂದ ಹುಲ್ಲೂರ, ಬಿಜೆಪಿ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಸಂಘಟನಾ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಸ್ಲಂ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ಹುಬ್ಬಳ್ಳಿ, ಜಿಲ್ಲಾ ಉಪಾಧ್ಯಕ್ಷ ಚಂದ್ರು ವೆರ್ಣೇಕರ ಮಾತನಾಡಿದರು. ಮಹಾಂತೇಶ ಮಡಿವಾಳರ, ಲಕ್ಷ್ಮೀನಾರಾಯಣ ಹಬೀಬ, ಮಂಜುನಾಥ ಕೆಂಧೂಳಿ, ಜೀವಪ್ಪ ಮುಳಗುಂದ, ಮಾರುತಿ ಮುದಗುಣಕಿ ಇತರರಿದ್ದರು.
ಮತ ನೀಡಿ, ಸೇವೆಗೆ ಅವಕಾಶ ಕಲ್ಪಿಸಿ: ಡಾ. ನಾಶಿ
ಗದಗ: 35 ವರ್ಷ ಉಪನ್ಯಾಸಕ ಹಾಗೂ ಸಂಶೋಧಕ ವೃತ್ತಿಯಲ್ಲಿ ಅಪಾರ ಸೇವೆ ಸಲ್ಲಿಸಿ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳ ಕುರಿತು ಶ್ರಮಿಸಿರುವ ಡಾ. ನಾಶಿಯವರಿಗೆ ತಮ್ಮ ಪ್ರಾಶಸ್ತ್ಯದ ಮತ ನೀಡಿ ಸೇವೆಗೆ ಅನುವು ಮಾಡಿಕೊಡಬೇಕೆಂದು ಸರ್ವಮಂಗಳಾ ನಾಶಿ ತಿಳಿಸಿದರು. ಸ್ಥಳೀಯ ಗದಗ ಬೆಟಗೇರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕ ಸಿಬ್ಬಂದಿ ಬೆಂಬಲ ಪಡೆಯಲು ಶಾಲೆಗೆ ತೆರಳಿದಾಗ ಮಾತನಾಡಿದರು. ಮತ ಕೇಳುವುದರೊಂದಿಗೆ ಜಯ ಗಳಿಸಲಾಗುವುದಿಲ್ಲ. ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ,ಕೂಲಂಕುಷ ಪರಿಹಾರ ನೀಡುವ ಕೆಲಸ ಮಾಡುವ ಹಾಗೂ ಅವರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವರಿಗೆ ಬೆಂಬಲ ನೀಡಬೇಕು ಎಂದರು. ಡಾ. ಶ್ವೇತಾ, ಸುರೇಖಾ ಕುರಿ, ಉಪನ್ಯಾಸಕಿ ಮ್ಯಾಗೇರಿ, ಶಿಕ್ಷಕರು, ಪದವೀಧರರು ನಾಶಿಯವರನ್ನು ಬೆಂಬಲಿಸಲು ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

