ಗದಗ

ಮೇಲ್ಸೇತುವೆ ಇಲ್ಲದ ಗ್ರಾಮೀಣ ರಸ್ತೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 10
ಸ್ವಾತಂತ್ರ್ಯ ಸಿಕ್ಕು 6 ದಶಕ ಕಳೆದಿದೆ. ಗದಗ ಜಿಲ್ಲೆ ರಚನೆಯಾಗಿ ದಶಕವೇ ಕಳೆದಿದೆ. ಇಂದಿಗೂ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಮೇಲ್ಸೇತುವೆಗಳೇ ಇಲ್ಲ. ಮಳೆಗಾಲದಲ್ಲಿ ಗ್ರಾಮೀಣ ಜನತೆ ಇಂದಿಗೂ ಸಮಸ್ಯೆ ಎದುರಿಸುತ್ತಿದ್ದು. ಕೆಳ ಸೇತುವೆಗಳಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲೂ ಸಮಸ್ಯೆ ಹೆಚ್ಚಾಗಿದೆ. ಇಲ್ಲಿವರೆಗೂ ಅಧಿಕಾರ ನಡೆಸಿದ ಚುನಾಯಿತ ಪ್ರತಿನಿಧಿಗಳು ಕೇವಲ ಮುಖ್ಯರಸ್ತೆಗಳಿಗೆ ಮಾತ್ರ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿರುವ ಹಳ್ಳಗಳಿಗೆ ಸೇತುವೆಗಳಾಗಿಲ್ಲ. ಗದಗ ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ರೈತರು ಹೊಲಕ್ಕೆ ಹೋಗುವ ಮಾರ್ಗಗಳ ಸ್ಥಿತಿಯಂತೂ ಇನ್ನಷ್ಟ ಹದಗೆಟ್ಟಿವೆ.
ಏನಿದು ಕೆಳ ಸೇತುವೆ: ನಾವೆಲ್ಲ ಮೇಲ್ಸೇತುವೆ ಬಗ್ಗೆ ಕೇಳಿದ್ದೇವೆ. ಇದೇನಿದು ಕೆಳ ಸೇತುವೆ ಎನ್ನುವ ಕುತೂಹಲ ಉಂಟಾಗಬಹುದು. ಇವುಗಳಿಗೆ ಇಲ್ಲಿವರೆಗೂ (ಗ್ರಾಮೀಣ ಭಾಷೆಯಲ್ಲಿ) ಪರ್ಸಿಗಳು ಎಂದು ಕೆರೆಯುತ್ತಿದ್ದರು. ಆದರೆ, ಇವುಗಳನ್ನು ತಾಂತ್ರಿಕ ಭಾಷೆಯಲ್ಲಿ ಕೆಳಸೇತುವೆ ಎಂದು ಕರೆಯುತ್ತಾರೆ. ಇಲ್ಲಿ ಹಳ್ಳಗಳನ್ನು ದಾಟಲು ಕಲ್ಲುಗಳ ಮೂಲಕ ರಸ್ತೆ ಮಾದರಿಯಲ್ಲಿಯೇ ದಾರಿ ನಿರ್ಮಿಸಿರುತ್ತಾರೆ. ಹಳ್ಳಗಳು ಬಂದಾಗ ಇವುಗಳ ಮೇಲೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ, ರಸ್ತೆ ಕಿತ್ತು ಹೋಗುವುದಿಲ್ಲ. ಆದರೆ, ಹಳ್ಳ ಬಂದರೆ ಸಂಚಾರ ಸಂಪೂರ್ಣ ಸ್ಥಗಿತವಾಗುತ್ತದೆ.
124 ಕೆಳ ಸೇತುವೆಗಳು: ಜಿಲ್ಲೆಯ ಪ್ರಮುಖ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಅಲ್ಲಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಇಲ್ಲಿಯವರೆಗೂ 124 ಹಳ್ಳಗಳಿಗೆ ಸೇತುವೆಗಳೇ ಇಲ್ಲ. ಎಲ್ಲ ಹಳ್ಳಗಳಿಗೂ ಕೆಳ ಸೇತುವೆಗಳಿವೆ ಎಂದು ಈಗಾಗಲೇ ಜಿಪಂ ಮತ್ತು ಲೋಕೋಪಯೋಗಿ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ವರದಿಯಾಗಿದೆ. ಪ್ರಮುಖ ರಸ್ತೆಗಳಿಗೆ ಅಡ್ಡಲಾಗಿ ಬರುವ ಸಣ್ಣ ಹಾಗೂ ದೊಡ್ಡ ಹಳ್ಳಗಳು ಇದರ ವ್ಯಾಪ್ತಿಯಲ್ಲಿದ್ದು, ಇಲ್ಲಿವರೆಗೂ ಕೇವಲ ರಸ್ತೆ ಅಭಿವೃದ್ಧಿ ಮಾತ್ರ ಮಾಡಲಾಗಿದ್ದು, ಸೇತುವೆಗಳ ಬಗ್ಗೆ ಗಮನಹರಿಸದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಜೀವಹಾನಿ ಸಂಭವಿಸಿವೆ
ಕೆಳಸೇತುವೆಗಳ ಮೂಲಕ ಸಂಚರಿಸುವ ವೇಳೆ 2009ರಿಂದ ಇಲ್ಲಿವರೆಗೂ 8 ಜನ ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರೇ ಆಗಿರುವುದು ಬೇಸರದ ವಿಚಾರ. ತಮ್ಮ ಕೃಷಿ ಕೆಲಸ ಮುಗಿಸಿಕೊಂಡು ಬರುವ ಸಂದರ್ಭ ಮಳೆಯಾಗಿ ಹಳ್ಳಗಳಿಗೆ ಹೆಚ್ಚಿನ ನೀರು ಬರುವುದರಿಂದ ರಾತ್ರಿಯೆಲ್ಲ ಅವರು ಹಳ್ಳದ ದಡದಲ್ಲಿಯೇ ಕಾಲ ಕಳೆಯುವಂತಾಗುತ್ತದೆ. ಇದನ್ನು ತಪ್ಪಿಸಲು ಸಾಧ್ಯವಾದಷ್ಟು ಹಳ್ಳಗಳಿಗೆ ಮೇಲ್ಸೇತುವೆಗಳನ್ನು ನಿರ್ಮಿಸಬೇಕಾಗಿದೆ.
ಸಣ್ಣ ಸಣ್ಣ ಹಳ್ಳಗಳಿಗೂ ಜಿಲ್ಲಾಡಳಿತ ಹಾಗೂ ಸರ್ಕಾರ ಶೀಘ್ರ ಸೇತುವೆಗಳ ನಿರ್ಮಾಣಕ್ಕೆ ಮುಂದಾಗಬೇಕು. ನಿತ್ಯ ಹಲವಾರು ಗ್ರಾಮಗಳಿಂದ ಸಾವಿರಾರು ಮಕ್ಕಳು ಶಿಕ್ಷಣಕ್ಕಾಗಿ ಗದುಗಿಗೆ ಬಂದು ಹೋಗುತ್ತಾರೆ. ಮಳೆಗಾಲ ಪ್ರಾರಂಭವಾಗಿದ್ದು, ಹೆಚ್ಚಿನ ಮಳೆಯಾದಲ್ಲಿ ಕೆಳ ಸೇತುವೆಗಳಿಂದ ಅನಾಹುತಗಳು ತಪ್ಪಿದ್ದಲ್ಲ. ಈಚೆಗೆ ಲಿಂಗದಾಳ ಗ್ರಾಮದ ಬಳಿ ಬಾಲಕನೋರ್ವ ಹಳ್ಳಕ್ಕೆ ಕೊಚ್ಚಿ ಹೋಗಿದ್ದು ಇದೇ ಕೆಳಸೇತುವೆ ಮೇಲೆ ದಾಟುವ ಸಂದರ್ಭ. ಜಿಲ್ಲಾಡಳಿತ ಕೂಡಲೇ ಗಮನ ನೀಡಬೇಕು.
- ಮಂಜುನಾಥ ದಾಟನಾಳ, ನಾಗಪ್ಪ ತಳವಾರ, ಕೆ.ಎಸ್. ಪಾಟೀಲ,
ವಿವಿಧ ಗ್ರಾಮಗಳ ಗ್ರಾಮಸ್ಥರು.


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.