ಗದಗ

ಜಿಲ್ಲಾದ್ಯಂತ ಸಂಭ್ರಮದ ಕಾರ ಹುಣ್ಣಿಮೆ

Published On :

ಗದಗ: ಕೃಷಿ ಪ್ರಧಾನ ಗದಗ ಜಿಲ್ಲೆಯಲ್ಲಿ ಕಾರಹುಣ್ಣಿಮೆಯನ್ನು ಜಿಲ್ಲೆಯ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳನ್ನು ಶೃಂಗರಿಸಿ ಹುಣ್ಣಿಮೆ ಆಚರಿಸಿದರೆ. ನಗರ ಪ್ರದೇಶದಲ್ಲಿನ ಮಕ್ಕಳು ಗಾಳಿಪಟ ಹಾರಿಸುವ ಮೂಲಕ ವಿಶೇಷವಾಗಿ ಆಚರಿಸಿದರು. ಮಹಿಳೆಯರು ಮನೆಯಲ್ಲಿ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಿ ಮನೆ ಮಂದಿ ಸೇರಿ ಊಟ ಮಾಡುವ ಮೂಲಕ ಕಾರ ಹುಣ್ಣಿಮೆ ಆಚರಿಸಿದರು.
ಕರಿ ಹರಿದ ಕಂದು ಹೋರಿ
ರೋಣ: ಕಾರ ಹುಣ್ಣಿಮೆ ನಿಮಿತ್ತ ರೋಣ ಪಟ್ಟಣದ ಪೋತದಾರರಾಜ ಅಜ್ಜನ ಕಟ್ಟೆಯ ಹತ್ತಿರದ ಮುಖ್ಯರಸ್ತೆಯಲ್ಲಿನ ಅಗಸಿ ಬಾಗಿಲಿನಲ್ಲಿ ಶುಕ್ರವಾರ ಸಂಜೆ ಏರ್ಪಟ್ಟಿದ್ದ ಕರಿ ಹರಿಯುವ ಸ್ಪರ್ಧೆ ಸಡಗರ, ಸಂಭ್ರಮದಿಂದ ಜರುಗಿತು. ಪಟ್ಟಣದ ರೈತ ಮುತ್ತಪ್ಪ ಹಂಪಹೊಳಿ ಎಂಬುವರ ಕಂದು ಬಣ್ಣದ ಹೋರಿ (ಎತ್ತು) ಈ ಬಾರಿ ಕರಿ ಹರಿಯಿತು. ಕರಿ ಹರಿಯುವ ಸ್ಪರ್ಧೆಯಲ್ಲಿ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಸಿದ್ದರು.
ಕಂದು ಬೆಳೆ ಹುಲುಸು:ಈ ಬಾರಿ ಕಂದು ಬಣ್ಣದ ಹೋರಿ (ಎತ್ತು) ಕರಿ ಹರಿದಿದ್ದರಿಂದ ಮುಂಗಾರು ಹಂಗಾಮಿನ ಕಂದು ಬಣ್ಣದ ಬೆಳೆಗಳಾದ ಕಡಲೆ, ಹೆಸರು, ಶೇಂಗಾ, ತೊಗರಿ, ಅಲಸಂದಿ ಇನ್ನಿತರ ಕಂದು ಬಣ್ಣದ ಬೆಳೆಗಳು ಹುಲುಸಾಗಿ ಬರುತ್ತವೆ ಎಂಬ ಸಂದೇಶವನ್ನು ರೈತರು ಈ ಕರಿ ಹರಿಯುವ ಮೂಲಕ ತಿಳಿಯುತ್ತಾರೆ. ಕಳೆದ 3 ವರ್ಷಗಳಿಂದ ಮಳೆ ಕೈ ಕೊಟ್ಟಿದ್ದು, ಪ್ರಸಕ್ತ ಚೆನ್ನಾಗಿ ಆಗುತ್ತಿರುವುದರಿಂದ ಬೆಳೆ ಉತ್ತವಾಗಿ ಬರಲಿದೆ ಎಂದು ಪಟ್ಟಣದ ರೈತರಾದ ಬಸನಗೌಡ ಪಾಟೀಲ, ಮುತ್ತಪ್ಪ ಹಂಪಹೊಳಿ, ಅಶೋಕ ಕಿರೇಸೂರ, ಚನ್ನಬಸನಗೌಡ ರಾಯನಗೌಡ್ರ, ಮಲ್ಲಪ್ಪ ಅಕ್ಕಿ, ನಿಂಗಪ್ಪ ಜಿಗಳೂರ, ಈರಪ್ಪ ಪಲ್ಲೆದ, ಶಾಂತಗೌಡ ರಾಯನಗೌಡ್ರ ಕನ್ನಡಪ್ರಭಕ್ಕೆ ತಿಳಿಸಿದರು.
ಸಂಭ್ರಮದ ಕಾರಹುಣ್ಣಿಮೆ
ಶಿರಹಟ್ಟಿ: ರೈತ ತನ್ನ ಜೀವನಾಡಿ ಎತ್ತು ಮತ್ತು ಹೋರಿಗಳಿಗೆ ಕಾರಹುಣ್ಣಿಮೆ ದಿನ ವಿಶೇಷ ಪೂಜೆ, ಪುನಸ್ಕಾರಗಳೊಂದಿಗೆ ಭಕ್ತಿ ಭಾವದಿಂದ ದೈವ ಸ್ವರೂಪದಲ್ಲಿ ಕಂಡು ಶುಕ್ರವಾರ ಸಂಜೆ ಸಂಪ್ರದಾಯದಂತೆ ಕಾರಹುಣ್ಣಿಮೆ ಆಚರಿಸಿದರು. ಶಾನುಭೋಗರು ಹಾಗೂ ಪಾಟೀಲರು ಸೇರಿ ಎತ್ತುಗಳನ್ನು ಕರಿ ಹರಿಸಲು (ಓಡಿಸಲು) ಚಾಲನೆ ನೀಡುವುದು ಸಂಪ್ರದಾಯ. ಸಂಜೆಯಾಗುತ್ತಿದ್ದಂತೆ ರೈತರು ಕರೆತಂದ ಎಲ್ಲ ಎತ್ತು ಹಾಗೂ ಹೋರಿಗಳನ್ನು ಸಾಲಾಗಿ ನಿಲ್ಲಿಸಿ ಶಿಳ್ಳೆ ಹೊಡೆವ ಮೂಲಕ ಎತ್ತುಗಳನ್ನು ಕರಿ ಹರಿಯಲು ಬಿಡುತ್ತಾರೆ. ನಂತರ ಊರ ಅಗಸಿಯಲ್ಲಿ ಕೊಬ್ಬರಿ ಬಟ್ಟಲು ಮತ್ತು ಬೇವಿನ ಎಲೆಗಳ ಸರ ಕಟ್ಟಿರುತ್ತಾರೆ. ಇದನ್ನು ಹರಿದು ಬರುವ ಎತ್ತನ್ನೇ ಕರಿ ಹರಿದ ಎತ್ತು ಎಂದು ಸಾರುತ್ತಾರೆ. ನಂತರ ರಾತ್ರಿ ಇಡೀ ಪಟ್ಟಣದಲ್ಲಿ ಎತ್ತಿನ ಮೆರವಣಿಗೆ ನಡೆಸಲಾಗುತ್ತದೆ.
ಎತ್ತುಗಳನ್ನು ಓಡಿಸಿ ಸಂಭ್ರಮ
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ರೈತ ಸಮುದಾಯ ಶುಕ್ರವಾರ ಎತ್ತುಗಳಿಂದ ಕರಿ ಹರಿದು ಸಂಭ್ರಮದಿಂದ ಕಾರಹುಣ್ಣಿಮೆ ಆಚರಿಸಿದರು. ಸ್ಥಳೀಯ ಐತಿಹಾಸಿಕ ಅಗಸಿ ಬಾಗಿಲಿಂದ ಚೌಕಿಮಠದವರೆಗೂ ಕರಿ ಹರಿಯುವ ಕಾರ್ಯಕ್ರಮದಲ್ಲಿ ರೈತರು ತಮ್ಮ ಎತ್ತುಗಳಿಗೆ ಸುರಮ ಬಳಿದು ಶೃಂಗರಿಸಿ ಕರಿ ಹರಿಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕರಿ ಹರಿದು ಸಂಭ್ರಮ
ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಬಸ್ತಿಬಣ. ದೇಸಾಯಿಬಣ, ಹಿರೇಬಣ, ಪೇಠಬಣದಲ್ಲಿ ಕಾರಹುಣ್ಣಿಮೆ ಹಬ್ಬವನ್ನು ಎತ್ತುಗಳಿಂದ ಕರಿ ಹರಿಯುವ ಮೂಲಕ ರೈತರು ಸಂಭ್ರಮಿಸಿದರು. ರೈತರು ತಮ್ಮ ಎತ್ತುಗಳನ್ನು ವಿವಿಧ ಬಣ್ಣದ ಜೂಲಗಳನ್ನು ಹಾಕಿ, ಕೊಂಬಣಸುಗಳನ್ನು ತೊಡಿಸಿ, ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ಆನಂದಪಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.