ಗದಗ

ಹುಬ್ಬಳ್ಳಿಯಲ್ಲಿ ಡಿಪ್ಲೊಮಾ ಪ್ರವೇಶಕ್ಕೆ ಕೌನ್ಸೆಲಿಂಗ್

Published On :

ಹುಬ್ಬಳ್ಳಿ: ಪ್ರಸಕ್ತ ವರ್ಷದ ಡಿಪ್ಲೊಮಾ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯದಾದ್ಯಂತ ಶುಕ್ರವಾರದಿಂದ ಆನ್‌ಲೈನ್ ಕೌನ್ಸೆಲಿಂಗ್ ಪ್ರಾರಂಭಗೊಂಡಿದ್ದು, ಹುಬ್ಬಳ್ಳಿಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ನೋಡಲ್ ಕೇಂದ್ರದಲ್ಲಿ ಮೊದಲ ದಿನವೇ 456 ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾಲೇಜುಗಳಿಗೆ ಪ್ರವೇಶ ಪಡೆದರು.
ಒಂದನೇ ರ್ಯಾಂಕ್‌ನಿಂದ 2,400ವರೆಗೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಮೊದಲ ದಿನದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದು, ಜೂ. 30ರವರೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಪ್ರತಿ ಕೋರ್ಸ್‌ನಲ್ಲಿ 68 ಸೀಟುಗಳು ಲಭ್ಯವಿದ್ದು, 3 ಸೀಟುಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ದಾವಣಗೆರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ, ವಿಜಾಪುರ, ಬಾಗಲಕೋಟೆ, ಹಾವೇರಿ,  ಬಳ್ಳಾರಿ, ಕೊಪ್ಪಳ, ಶಿವಮೊಗ್ಗ ಹಾಗೂ ಮಂಗಳೂರು ಭಾಗಗಳಿಂದ ಅಭ್ಯರ್ಥಿಗಳು ಹಾಗೂ ಪಾಲಕರು ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು.
ಲಭ್ಯವಿರುವ ಕಾಲೇಜು, ಕೋರ್ಸ್, ಶುಲ್ಕ ನಿಗದಿ, ಮೀಸಲಿರುವ ಸೀಟುಗಳು, ದಾಖಲೆ ಪರಿಶೀಲನೆ ಸೇರಿದಂತೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ನೋಡಲ್ ಕೇಂದ್ರದಲ್ಲಿ ಕೌನ್ಸೆಲಿಂಗ್ ಪೂರ್ವ ಕೇಂದ್ರ ತೆರೆಯಲಾಗಿದೆ.
ಈ ಬಾರಿಯ ಕೌನ್ಸೆಲಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ಹೈದ್ರಾಬಾದ್- ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೇ. 8ರಷ್ಟು ಸೀಟು ಮೀಸಲಿಡಲಾಗಿದೆ. ವಾರ್ಷಿಕ ಆದಾಯ ಕಡಿಮೆ ಇರುವ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಸೀಟುಗಳು ಮೀಸಲಿದ್ದು, ತಾಂತ್ರಿಕ ಶಿಕ್ಷಣ ಇಲಾಖೆ ಇದೆ ಮೊದಲ ಬಾರಿಗೆ ಈ ನೀತಿ ಜಾರಿಗೆ ತಂದಿದೆ. ಐದು ಹಂತಗಳ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಇಲಾಖೆ ತೀರ್ಮಾನಿಸಿದೆ. ಕೇಂದ್ರದಲ್ಲಿ ಪ್ರತ್ಯೇಕ ಎರಡು ಸಹಾಯ ಕೇಂದ್ರಗಳಿದ್ದು, ಮಾಹಿತಿ ನೀಡುವುದಕ್ಕಾಗಿ 12 ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಕೌನ್ಸೆಲಿಂಗ್ ಪೂರ್ವ ಕೇಂದ್ರಗಳಲ್ಲಿ ರಾಜ್ಯದಲ್ಲಿರುವ ಡಿಪ್ಲೊಮಾ ಕಾಲೇಜುಗಳ ಹೆಸರು, ರ್ಯಾಂಕ್ ಲಿಸ್ಟ್, ಪ್ರವೇಶ ಶುಲ್ಕದ ಕುರಿತು ಮಾಹಿತಿಯನ್ನು ಫಲಕಗಳಿಗೆ ಲಗತ್ತಿಸಲಾಗಿದೆ.
ಕೌನ್ಸೆಲಿಂಗ್ ವೇಳಾ ಪಟ್ಟಿ
ಜೂ 14ಕ್ಕೆ 2,401ರಿಂದ 4,800, ಜೂ. 15ಕ್ಕೆ 4,801ರಿಂದ 7,200, ಜೂ. 16ಕ್ಕೆ 7,201ರಿಂದ 10,000, ಜೂ. 17ಕ್ಕೆ 10,001ರಿಂದ 12,800, ಜೂ. 18ಕ್ಕೆ 12,801ರಿಂದ 15,600, ಜೂ. 19ಕ್ಕೆ 15,601ರಿಂದ 18,400, ಜೂ. 20ಕ್ಕೆ 18,401ರಿಂದ 21,200, ಜೂ. 21ಕ್ಕೆ 21,201ರಿಂದ 24,400, ಜೂ. 22ಕ್ಕೆ 24,401ರಿಂದ 27,600, ಜೂ. 23ಕ್ಕೆ 27,601ರಿಂದ 30,800, ಜೂ. 24ಕ್ಕೆ 30,801ರಿಂದ 34,000, ಜೂ. 25ಕ್ಕೆ 34,001ರಿಂದ 37,200, ಜೂ. 26ಕ್ಕೆ 37,201ರಿಂದ 40,400, ಜೂ. 27ಕ್ಕೆ 40,401ರಿಂದ 43,600, ಜೂ. 28ಕ್ಕೆ 43,601ರಿಂದ 46,800, ಜೂ. 29ಕ್ಕೆ 46,801ರಿಂದ 50,400, ಜೂ. 30ಕ್ಕೆ 50,401ರಿಂದ ಕೊನೆಯ ರ್ಯಾಂಕ್‌ವರೆಗೆ ಕೌನ್ಸೆಲಿಂಗ್ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.