ಗದಗ

ರೈತ ಮಿತ್ರ ಟ್ರ್ಯಾಕ್ಟರ್‌ಗೆ ಬರ್ತ್‌ಡೇ!

Published On :

ಕನ್ನಡಪ್ರಭ ವಾರ್ತೆ, ರೋಣ, ಜೂ. 15
ಮನುಷ್ಯ ಮತ್ತು ಪ್ರಾಣಿಗಳ ಬರ್ತ್‌ಡೇ ಆಚರಿಸುವುದನ್ನು ನೋಡಿದ್ದೇವೆ. ಆದರೆ, ಟ್ರ್ಯಾಕ್ಟರ್‌ನ ಬರ್ತ್‌ಡೇ ಆಚರಿಸುವುದನ್ನು ಕೇಳಿದ್ದಾರೆ?
ರೋಣ ಪಟ್ಟಣದ ಜನತಾ ಪ್ಲಾಟ್‌ನ ಅಬ್ದುಲಸಾಬ್ ಗೋನಾಳ ಕುಟುಂಬಸ್ಥರು ಶನಿವಾರ ಸಂಜೆ ರೈತ ಮಿತ್ರ ಟ್ರ್ಯಾಕ್ಟರ್‌ನ ಅದ್ಧೂರಿ ಹುಟ್ಟುಹಬ್ಬ ಆಚರಿಸಿದರು.
ಶ್ರಮವಹಿಸಿ ದುಡಿದು ಪ್ರತಿ 6 ತಿಂಗಳಿಗೊಮ್ಮೆ ಇರುವ ಟ್ರ್ಯಾಕ್ಟರ್ ಸಾಲದ ಕಂತನ್ನು ಪ್ರಾಮಾಣಿಕವಾಗಿ ಕಟ್ಟಿ, ಸಾಲದಿಂದ ಮುಕ್ತರಾಗುತ್ತಾರೆ. ಇದರ ಕೊನೆಯ ಕಂತು ತುಂಬಿದ ದಿನದಂದು ಟ್ರ್ಯಾಕ್ಟರ್ ಅವರದ್ದಾಗುತ್ತದೆ. ಈ ಸಂಭ್ರವವನ್ನು ಗೋನಾಳ ಕುಟುಂಬ ಬರ್ತ್‌ಡೇ ಮೂಲಕ ಆಚರಿಸಿದೆ. ಟ್ರ್ಯಾಕ್ಟರ್ ತಮ್ಮ ಮನೆಯ ಸದಸ್ಯರಲ್ಲೊಬ್ಬ (ಮಗ) ಎಂದು ತಿಳಿದು, ಟ್ರ್ಯಾಕ್ಟರ್ (ಓಆ 26, ಖಿಆ 3554)ಗೆ ಪ್ರೀತಿಪೂರ್ವಕ ಗೌರವ ಸಲ್ಲಿಸಿದ್ದಾರೆ.
ಬರ್ತ್‌ಡೇಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಟ್ರ್ಯಾಕ್ಟರ್‌ಗೆ ಹೂಗಳಿಂದ ಅಲಂಕಾರ ಮಾಡಿದ್ದರು. ಸಂಬಂಧಿಕರು, ಬಂಧು-ಬಳಗದವರಿಗೆ ಆಮಂತ್ರಣ ನೀಡಿದ್ದರು. ಎಲ್ಲರ ಸಮ್ಮುಖ ಕೇಕ್ ಕತ್ತರಿಸಲಾಯಿತು.
ಕಾಯಕವೇ ಕೈಲಾಸ, ಸ್ವಾವಲಂಬನೆಯ ದುಡಿಮೆಯಲ್ಲಿ ಬದುಕಿನ ಸಾರ್ಥಕತೆಯಿದೆ ಎಂಬ ಸಂದೇಶ ಸಾರುವಂತಿತ್ತು.
ಒಗ್ಗಟ್ಟಿನಲ್ಲಿ ಬಲವಿದೆ
ದುಡಿಮೆಯೇ ದುಡ್ಡಿನ ತಾಯಿ ಪಟ್ಟಣದ ಅಬ್ದುಲ್‌ಸಾಬ್, ನೂರ್‌ಜಹಾನ್ ದಂಪತಿಗೆ ಇಬ್ಬರು ಪುತ್ರಿಯರು, ನಾಲ್ವರು ಸಹೋದರರು. ಎಲ್ಲರೂ ಒಗ್ಗಟ್ಟಿನಿಂದ ದುಡಿದು, ಸಾಲ ಮಾಡಿ ಟ್ರ್ಯಾಕ್ಟರ್ ತಂದಿದ್ದರು. ಅದನ್ನು ತಮ್ಮ ಸಹೋದರನೆಂದು ಭಾವಿಸಿದ್ದಾರೆ. ಒಗ್ಗಟ್ಟು, ಸಾಮರಸ್ಯದಲ್ಲಿ ಬಲವಿದೆ ಎಂಬುದಕ್ಕೆ ಈ ಸಹೋದರರೇ ಸಾಕ್ಷಿ.
- ಜೀವನಸಾಬ್ ಇಟಗಿ, ಮೈಲಾರಪ್ಪ ಕೊಪ್ಪದ, ಜನತಾ ಪ್ಲಾಟಿನ ನಿವಾಸಿಗಳು
ನಮಗ್ ಬಾಳ್ ಬಡತನ ಐತಿ
ನಾಲ್ಕರು ಗಂಡು, ಇಬ್ರು ಹೆಣ್ಮಕ್ಳು ಕಟ್ಗೊಂಡು ಹೆಂಗ್ ಜೀವನ ಸಾಗಿಸಬೇಕು? ಮಕ್ಕಳನ್ ಸಾಲಿ ಕಲಸಾಕ್ ಆಗಿಲ್ರಿ. ಈಗ ಅವರ್ರು ದೊಡ್ಡಾರಾಗ್ರೀ ತಮ್ಮ ಕಾಲ ಮ್ಯಾಲೆ ತಾವಾ ನಿಂತ್ಕೋಳಾಕ ಬಾಳ್ ತ್ರಾಸ್ ಪಡಾಕತ್ತಿದ್ದು ನೋಡಿದ್ರ್ ಬಾಳ್ ಖುಷಿ ಆಗಾಕತ್ತೇತ್ರೀ. 3 ವರ್ಷದ ಹಿಂದ್ ಸಾಲ ಮಾಡಿ ಟ್ರ್ಯಾಕ್ಟರ್ ತೊಗೊಂಡಿವ್ರಿ. ಕಂತು ಮುಟ್ಟಿ ಸ್ವಂತ ಆಯತ್ರಿ.
- ಅಬ್ದುಲಸಾಬ್ ಗೋನಾಳ, ನೂರ್‌ಜಹಾನ್ ಗೋನಾಳ, ಟ್ರ್ಯಾಕ್ಟರ್ ಮಾಲೀಕರು
ನಮಗೂ ಮಾದರಿಯಾತ್ರೀ..
ಮನುಷ್ಯರಿಗೆ ಬರ್ತ್‌ಡೇ ಆಚರಿಸಿದ್ದು ನೋಡೆವ್ರೀ. ಆದ್ರಿಲ್ಲಿ ಟ್ರ್ಯಾಕ್ಟರ್‌ಗೆ ಹುಟ್ಟುಹಬ್ಬ ಆಚರಿಸಿದ್ದು ನೋಡೋದು ಇದೇ ಮೊದಲ್ರಿ, ಇಂಥ ಕಾರ್ಯಕ್ರಮದಾಗ ಭಾಗವಹಿಸಿದ್ದು ಸಂತೋಷ ಆಗೇತ್ರಿ. ಕಾಯಕವೇ ಕೈಲಾಸ ಎಂಬುದಕ್ಕೆ ಇದೇ ಸಾಕ್ಷಿ ನೋಡ್ರಿ. ಹೆಂಗ್ ದುಡಿಬೇಕು ಅನ್ನುದಕ್ ಇದಾ ಮಾದರಿ.
- ಚಂದ್ರು ಇಟಗಿ, ರಾಜಾಸಾಬ್ ಗೋನಾಳ, ಚಂದ್ರು ಮುಗಳಿ, ನಜೀರ ನದಾಫ, ಸಮೀನಾ ಬಾನು, ಬರ್ತ್‌ಡೇಯಲ್ಲಿ ಪಾಲ್ಗೊಂಡವರು


-ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.