ಗದಗ

ಗಬ್ಬೆದ್ದು ನಾರುತ್ತಿದೆ ಗದಗ-ಬೆಟಗೇರಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 21
ಗದಗ-ಬೆಟಗೇರಿ ಅವಳಿ ನಗರದಲ್ಲಿನ ಬಹುತೇಕ ಚರಂಡಿಗಳು ಕೊಳಚೆಯಿಂದ ಭರ್ತಿಯಾಗಿ ದುರ್ನಾತ ಬೀರುತ್ತಿವೆ. ಚರಂಡಿಯಲ್ಲಿರುವ ಕಸ ಹೊರಹಾಕಲು ಹಾಗೂ ವಿಲೇವಾರಿ ಮಾಡಲು ಆದ್ಯತೆ ನೀಡಬೇಕಾಗಿರುವ ನಗರಸಭೆ ಹೆಚ್ಚಿನ ಗಮನಹರಿಸದಿರುವುದರಿಂದ ಚರಂಡಿ ಗಬ್ಬೆದ್ದು ನಾರುವ ಮೂಲಕ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಅಗತ್ಯ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಚರಂಡಿಗಳ ಅವ್ಯವಸ್ಥೆ ಕುರಿತು ಇಲ್ಲಿವರೆಗೂ ಗೊತ್ತಾಗಿಲ್ಲ. ಒಮ್ಮೆ ಜೋರಾಗಿ ಮಳೆಯಾದಲ್ಲಿ ಚರಂಡಿಗಳು ಭರ್ತಿಯಾಗಿ ಸಾರ್ವಜನಿಕರಿಗೆ ತೊಂದರೆ ನೀಡುವುದಂತೂ ಖಂಡಿತ. ಈ ಕುರಿತು ನಗರಸಭೆ, ಜಿಲ್ಲಾಡಳಿತ ಹೆಚ್ಚಿನ ಗಮನ ನೀಡಲಿ ಎಂಬುದು ಸಾರ್ವಜನಿಕರ ಆಶಯ.
ತುಂಬಿದ ಚರಂಡಿಗಳು: ಗದಗ ಹಾಗೂ ಬೆಟಗೇರಿ ಭಾಗಗಳಲ್ಲಿ ಚರಂಡಿಗಳು ದುರಸ್ತಿಯಲ್ಲಿದ್ದು, ಈ ಕುರಿತು ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಹಾಗೂ ವಾರ್ಡ್ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ. ಕೆಲವು ಕಡೆಗಳಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಮೂಲಕ ಚರಂಡಿ ದುರಸ್ತಿಗೊಳಿಸಲಾಗಿದೆಯಾದರೂ ಅವು ಕಾಟಾಚಾರಕ್ಕೆ ಎಂಬಂತೆ ಕಂಡು ಬರುತ್ತಿವೆ. ನಗರದ ಮುಖ್ಯರಸ್ತೆಯಾದ ಕೆ.ಸಿ. ರಾಣಿ ರಸ್ತೆ ಅಕ್ಕಪಕ್ಕದಲ್ಲಿರುವ ಚರಂಡಿಗಳು ಬಹುತೇಕ ಭರ್ತಿಯಾಗಿವೆ. ಕೆಲ ಕಡೆಗಳಲ್ಲಿ ಚರಂಡಿಗಳು ಸಂಪೂರ್ಣ ಹೂಳು ತುಂಬಿ ಚರಂಡಿ ಎಲ್ಲಿವೆ ಎಂಬುದು ಗೊತ್ತಾಗದಂಥ ಸ್ಥಿತಿ ನಿರ್ಮಾಣವಾಗಿವೆ.
ಮೂಗು ಮುಚ್ಚಿಕೊಂಡು ಸಾಗಬೇಕು: ನಗರದ ಹೃದಯ ಭಾಗ, ಮಾರುಕಟ್ಟೆ ಸುತ್ತಲಿರುವ ಚರಂಡಿಗಳಲ್ಲಿ ಮಾರುಕಟ್ಟೆಯ ತ್ಯಾಜ್ಯಗಳನ್ನು ಎಸೆಯುವುದರಿಂದ ಚರಂಡಿಗಳು ಭರ್ತಿಯಾಗಿ ದುರ್ನಾತ ಬೀರುತ್ತಿವೆ. ಜಿಲ್ಲಾ ಅಂಚೆ ಕಚೇರಿ ಮುಂಭಾಗದಲ್ಲಿರುವ ಚರಂಡಿಯೂ ಸಂಪೂರ್ಣ ಭರ್ತಿಯಾಗಿದೆ. ಪಕ್ಕದಲ್ಲಿರುವ ಶೌಚಾಲಯದ ನೀರು ಸರಾಗವಾಗಿ ಹರಿದು ಹೋಗದಿರುವುದರಿಂದ ಇಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.