ಸಂಪುಟದಿಂದ ಸಚಿವ ಆಂಜನೇಯ ಕೈಬಿಡಿ
ಮುಂಡರಗಿ: ಇದುವರೆಗೂ ಕರ್ನಾಟಕದಲ್ಲಿ ವೀರಶೈವರು ಯಾರನ್ನೂ ಬೆದರಿಸುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲೂ ಅನೇಕರು ವೀರಶೈವರಿದ್ದಾರೆ. ಅಂಥ ವೀರಶೈವರ ಬಗ್ಗೆ ಉದ್ಧಟತನದ ಮಾತುಗಳನ್ನಾಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಹಾಗೂ ವೀರಶೈವ ಸಮಾಜ ಮುಖಂಡ ಕೊಟ್ರೇಶ ಅಂಗಡಿ ಒತ್ತಾಯಿಸಿದ್ದಾರೆ.
ಅವರು ಈಚೆಗೆ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಚಿವ ಎಚ್. ಆಂಜನೇಯ ಅವರು ವೀರಶೈವರ ಕುರಿತು ಹೇಳಿದ ಮಾತುಗಳಿಗೆ ಪ್ರತಿಕ್ರಿಯಿಸಿದರು.
ಮುಂಡರಗಿ ಈಗ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಆದರೆ, ಇಲ್ಲಿನ ಶಾಸಕ ರಾಮಕೃಷ್ಣ ದೊಡ್ಡಮನಿಯವರೊಂದಿಗೆ ನಿತ್ಯ ವೀರಶೈವ, ಲಿಂಗಾಯತ ಜನಾಂಗದ ಹಿರಿಯರೆ ಇರುತ್ತಾರೆ. ಆಂಜನೇಯ ಅವರು ಒಂದೇ ಜಾತಿಗೆ ಸೀಮಿತವಾದ ಸಚಿವರಲ್ಲ. ರಾಜ್ಯದಲ್ಲಿರುವ ಎಲ್ಲ ಜಾತಿ ಜನಾಂಗಕ್ಕೂ ಸಂಬಂಧಪಟ್ಟ ಸಚಿವರು ಎನ್ನುವುದನ್ನು ಅರಿತುಕೊಂಡು ಮಾತನಾಡಬೇಕು. ಕರ್ನಾಟದಲ್ಲಿ ಯಾವ ಯಾವ ಸಂದರ್ಭ ವೀರಶೈವ ಸಮಾಜವನ್ನು ಕಾಂಗ್ರೆಸ್ ನಿರ್ಲಕ್ಷ್ಯಿಸುತ್ತಾ ಬಂದಿದೆಯೋ ಆಗ ಕೈ ಪಕ್ಷ ಹೀನಾಯವಾಗಿ ಸೋತಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಬಿ.ಡಿ. ಜತ್ತಿ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅನೇಕ ವೀರಶೈವ ಮುಖಂಡರ ಕೊಡುಗೆ ಅಪಾರವಿದೆ. ಅಂಥ ವೀರಶೈವ ಜನಾಂಗಕ್ಕೆ ಜವಾಬ್ದಾರಿಯುತ ಸಚಿವರೊಬ್ಬರು ಈ ರೀತಿ ಮಾತನಾಡಿದರೆ ವೀರಶೈವರು ಕಾಂಗ್ರೆಸ್‌ನಲ್ಲಿರಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಪತ್ರ ಬರೆದು ಇಂಥ ಸಚಿವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸುವುದಾಗಿ ಕೊಟ್ರೇಶ ಅಂಗಡಿ ಹೇಳಿದರು. ಹೇಳಿಕೆ ಕುರಿತಂತೆ ಸಚಿವ ಎಚ್. ಆಂಜನೇಯ ಮೇಲೆ ಕ್ರಮ ಜರುಗಿಸದಿದ್ದಲ್ಲಿ ಬರುವ ದಿನಗಳಲ್ಲಿ ಅವರನ್ನು ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು.
ಪಾಲಾಕ್ಷಿ ಗಣದಿನ್ನಿ, ನಾಗೇಶ ಹುಬ್ಬಳ್ಳಿ, ವೀರಣ್ಣ ತುಪ್ಪದ, ಸೊಲಬಣ್ಣ ಜೋಬಾಳಿ, ಮುದಿಯಪ್ಪ ಕುಂಬಾರ, ವೀರೇಶ ಸಜ್ಜನರ, ಅಶೋಕ ಹುಬ್ಬಳ್ಳಿ, ಚನ್ನವೀರಪ್ಪ ಯಲಿಗಾರ ಇತರರು ಸಚಿವರ ಹೇಳಿಕೆ ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

