ಕಲುಷಿತ ನೀರು ಸೇವನೆ: ಸಾಂಕ್ರಾಮಿಕ ರೋಗ ಭೀತಿ
ಮುಂಡರಗಿ: ತಾಲೂಕಿನ ಡೋಣಿತಾಂಡಾದಲ್ಲಿ ಕಲುಷಿತ ನೀರು ಸೇವಿಸಿ ಹಾಗೂ ಸೊಳ್ಳೆಗಳ ಕಡಿತದಿಂದಾಗಿ 8-10 ದಿನಗಳಿಂದ ಸುಮಾರು 40 ರಿಂದ 50 ಜನ ತೀವ್ರವಾಗಿ ಅಸ್ವಸ್ಥರಾಗಿ ಡಂಬಳ, ಗದಗ, ಹುಬ್ಬಳ್ಳಿ ಮತ್ತು ಧಾರವಾಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಸೋಮವಾರ ನಡೆದಿದ್ದು, ಮಂಗಳವಾರ ಗ್ರಾಮದಲ್ಲಿಯೇ ವಿಶೇಷ ವೈದ್ಯಕೀಯ ತಂಡ ಬೀಡು ಬಿಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರಿದಿದೆ.
ಅನೇಕ ದಿನಗಳಿಂದ ಗ್ರಾಮದಲ್ಲಿ ಹಲವಾರು ಜನ ಜ್ವರ, ಮೈ, ಕೈ ಮತ್ತು ಹೊಟ್ಟೆನೋವು ಕೆಲವರಿಗೆ ಸುಸ್ತು ಮತ್ತು ವಾಂತಿಬೇಧಿಯಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಡೋಣಿ ತಾಂಡಾದ 8 ವರ್ಷದ ಬಾಲಕ ಬಾಬು ಎನ್ನುವವನಿಗೆ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಕಾನಿಸಿಕೊಂಡಿದ್ದರಿಂದ ಬಾಲಕನನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಉಳಿದ ಕೆಲವರು ಗದುಗಿನ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ. ಜ್ವರ, ಮೈ ಕೈ ನೋವು, ಹೊಟ್ಟೆ ನೋವಿನಿಂದ ಒಂದೇ ಕುಟುಂಬದ ಪ್ರಕಾಶ, ರಾಠೋಡ, ಸಂತೋಷ ರಾಠೋಡ, ಶೃತಿ ರಾಠೋಡ, ಶೀಲು ರಾಠೋಡ, ವಿನೋದ ರಾಠೋಡ, ಸುಬ್ಬವ್ವ ಸೋಮಲೆಪ್ಪ ರಾಠೋಡ, ಗಂಗಮ್ಮ ಪಾಂಡಪ್ಪ ಲಮಾಣಿ, ಚಂದ್ರ ಪಾಂಡಪ್ಪ ಲಮಾಣಿ, ದೇವಕ್ಕ ರಾಠೋಡ ಸೇರಿ ಸುಮಾರು 13 ಜನರಿಗೆ ಗ್ಲುಕೋಜ್ ನೀಡಲಾಗಿದೆ. ಇನ್ನು ಕೆಲವರು ಡಂಬಳ ಆಸ್ಪತ್ರೆಯಿಂದ ನೇರ ತಮಗೆ ತಿಳಿದಲ್ಲಿಗೆ ರೋಗಿಗಳನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಘಟನೆಗೆ ಕಾರಣ: ಕೆಲ ತಿಂಗಳಿಂದ ಡೋಣಿ ತಾಂಡಾದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೂರಿದ್ದು, ತಪ್ಪಿಸುವ ಉದ್ದೇಶದಿಂದ ಡೋಣಿ ಗ್ರಾಪಂ ನಿತ್ಯ ತಾಂಡಾ ಜನತೆಗೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ನೀರು ಯೋಗ್ಯವಾಗಿರಲಿಲ್ಲ. ಅನಿವಾರ್ಯವಾಗಿ ಕುಡಿಯುತ್ತಿದ್ದೆವು. ಇದರಿಂದ ಕಾಯಿಲೆ ಬಂದಿವೆ. ತಾಂಡಾದಲ್ಲಿ ಸ್ವಚ್ಛತೆ ಕೊರತೆಯಿದ್ದು, ಗ್ರಾಪಂ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದ ಜನತೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳ ಆರೋಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

