ಗದಗ

ಅಧಿಕಾರಿಗಳ ಅಕ್ರಮ ತಡೆಗೆ ಸದಸ್ಯರ ಆಗ್ರಹ

Published On :

ಗದಗ: ಆಡಳಿತಾಧಿಕಾರಿಗಳ ಅಧಿಕಾರಾವಧಿಯಲ್ಲಿ ಜರುಗಿದ ಆಶ್ರಯ ಮನೆ ಮಾರಾಟ ಸೇರಿದಂತೆ ಅಕ್ರಮಗಳ ಸಮಗ್ರ ತನಿಖೆಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ ಘಟನೆ ಬುಧವಾರ ಗದಗ-ಬೆಟಗೇರಿ ನಗರಸಭೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಜರುಗಿತು.
ಸಭೆ ಪ್ರಾರಂಭದಲ್ಲಿ ಕಾಂಗ್ರೆಸ್ ಸದಸ್ಯ ಪೀರಸಾಬ ಕೌತಾಳ ಮಾತನಾಡಿ, ಸ್ಥಳೀಯ ಗಂಗಿಮಡಿ ಆಶ್ರಯ ಕಾಲನಿಯಲ್ಲಿ ಸುಮಾರು 15 ಮನೆಗಳನ್ನು ಆಡಳಿತಾಧಿಕಾರಿಗಳ ಅವಧಿಯಲ್ಲಿ ಮಾರಾಟ ಮಾಡಲಾಗಿದ್ದು, ಈ ಕುರಿತು ಪೌರಾಯುಕ್ತರಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಪೌರಾಯುಕ್ತರು ನಿರ್ಲಕ್ಷ್ಯ ತಾಳಿದ್ದು, ಅಕ್ರಮಗಳ ಕುರಿತು ಸಮಗ್ರ ತನಿಖೆಯಾಗಬೇಕಿದೆ ಎಂದರು. ಬಿಜೆಪಿ ಹಿರಿಯ ಸದಸ್ಯ ಸದಾನಂದ ಪಿಳ್ಳಿ ಮಧ್ಯಪ್ರವೇಶಿಸಿ ಮಾತನಾಡಿ, ರು. 50 ಸಾವಿರಗಳಿಗೊಂದರಂತೆ ಮನೆಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
ಪೌರಾಯುಕ್ತ ಮನೋಹರ ನಡುವಿನಮನಿ, ಈ ಮನೆಗಳ ಮಾರಾಟ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಲಿಖಿತ ದೂರು ಹಾಗೂ ದಾಖಲೆ ನೀಡಿದರೆ ಪರಿಶೀಲನೆ ಮಾಡುತ್ತೇನೆ. ಬಾಯಿ ಮಾತಲ್ಲಿ ಹೇಳಿದರೆ ನಡೆಯುವುದಿಲ್ಲ ಎಂದರು. ನಂತರ ಉಪಾಧ್ಯಕ್ಷ ಕೃಷ್ಣಾ ಪರಾಪುರ ಮಾತನಾಡಿ, ಈ ಕುರಿತು ಪರಿಶೀಲನೆ ನಡೆಸಿ ಅಕ್ರಮ ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲಿಸುವ ಭರವಸೆ ನೀಡಿದರು.
ಪಾರದರ್ಶಕತೆ ಇಲ್ಲ: ನಗರಸಭೆ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಆರ್ಥಿಕ ಶ್ವೇತಪತ್ರ ಹೊರಡಿಸಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿದೆ. ಕೋಟ್ಯಂತರ ರು. ಬಾಕಿ ಇರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕೆಲಸ ಮಾಡಲು ಮುಂದಾಗುತ್ತಿಲ್ಲ. ನಮ್ಮ ಮನೆ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಜರುಗಿದ್ದು, ಫಲಾನುಭವಿಗಳಿಂದ ರು. 5 ಸಾವಿರ  ಕೇಳಲಾಗುತ್ತಿದೆ. ಅಧ್ಯಕ್ಷ-ಉಪಾಧ್ಯಕ್ಷರು ಸೇರಿ ಆಡಳಿತ ಪಕ್ಷದ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಗತ್ಯವಿದೆ ಎಂದರು.
ಶೌಚಾಲಯ ನಿರ್ಮಾಣಕ್ಕೆ ಆದ್ಯತೆ: ಕಾಂಗ್ರೆಸ್ ಸದಸ್ಯ ಎಲ್.ಡಿ. ಚಂದಾವರಿ, ಈ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಕಾಯ್ದಿರಿಸಿದ ಶೇ. 7.25 ಮೊತ್ತದಲ್ಲಿ ನಗರದ 35 ವಾರ್ಡ್‌ಗಳ ಪ್ರತಿ ವಾರ್ಡ್‌ನಲ್ಲಿ 4 ಹಿಂದುಳಿದ ಕುಟುಂಬಗಳನ್ನು ಗುರುತಿಸಿ ತಲಾ ರು. 20 ಸಾವಿರದಂತೆ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯರ ಆರೋಪಕ್ಕೆ ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ ಉತ್ತರಿಸಿ, ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ನಡೆಯುತ್ತಿರುವುದು ಪ್ರಥಮ ಸಭೆ ಹಾಗೂ ತಾವು ಹೊಸಬರಾಗಿರುವುದರಿಂದ ಸರ್ವ ಸದಸ್ಯರ ಅಭಿಪ್ರಾಯ ಕ್ರೂಢಿಕರಿಸಿಕೊಂಡು ಆಡಳಿತ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ನಗರದಲ್ಲಿ ಮೂಲ ಸೌಲಭ್ಯಗಳ ಕೊರತೆ, ಘನತ್ಯಾಜ್ಯ ವಸ್ತು ನಿರ್ವಹಣೆಯಲ್ಲಿನ ವೈಫಲ್ಯ, ವಿವಿಧ ಕಾಮಗಾರಿಗಳ ಕುರಿತು ಸದಸ್ಯರಾದ ಮಂಜುನಾಥ ಮುಳಗುಂದ, ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ, ಜಯಶ್ರೀ ಭೈರವಾಡೆ, ಬಿ.ಬಿ. ಅಸೂಟಿ, ಮಂಜುನಾಥ ಪೂಜಾರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಎಲ್.ಜಿ. ಪತ್ತಾರ, ವ್ಯವಸ್ಥಾಪಕ ವಿ.ಬಿ. ಬೂದಿಹಾಳ ಸಿಬ್ಬಂದಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.