ಗದಗ

ಪರಿಸರ ಶುಚಿಯಾದರೆ ಆರೋಗ್ಯ: ರಾಘವೇಂದ್ರ

Published On :

ಗದಗ: ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾದರೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುವುದು ಎಂದು ಗದಗ-ಬೆಟಗೇರಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು. ಅವರು ಶುಕ್ರವಾರ ಬೆಟಗೇರಿಯ ವಾರ್ಡ್ ನಂ 7ರಲ್ಲಿ ಕಸ ಸಂಗ್ರಹಿಸುವ ಗಂಟೆ ಗಾಡಿಗಳಿಗೆ ಚಾಲನೆ ನೀಡಿ ಮಾತನಾಡಿದರು. ವಾರ್ಡ್ ವ್ಯಾಪ್ತಿಯ ವಿವಿಧ ಭಾಗಗಳಿಗೆ ಅಂದರೆ ಹೆಳವಿ ಓಣಿ ಮುಳಗುಂದವರ ಓಣಿ, ಹುಚ್ಚನಗೌಡ್ರ ಓಣಿ, ಚೆನ್ನೆಗೌಡ್ರ ಓಣಿ, ಬೇಲೇರಿ ಓಣಿ, ಕೋಚಿ ಗಲ್ಲಿ, ಹಬೀಬ ಗಲ್ಲಿ, ಪೆಂಡಾರಗಲ್ಲಿ ಹಾಗೆಯೇ ಟರ್ನಲ್ ಪೇಟೆ ಹೀಗೆ ಎಲ್ಲ ಕಡೆಗಳಿಂದ ಮನೆ-ಮನೆ ಕಸ ಸಂಗ್ರಹಿಸಲು ಈ ಗಾಡಿಗಳು ಸಹಕಾರಿಯಾಗಲಿವೆ. ಗದಗ-ಬೆಟಗೇರಿ ಅವಳಿನಗರ ಪರಿಸರ ಸ್ವಚ್ಛತೆ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನಗರಸಭೆಯಲ್ಲಿ ಪೌರಕಾರ್ಮಿಕರ ಸಂಖ್ಯೆ ಇಳಿಮುಖವಾಗಿರುವುದೇ ಕಾರಣವಾಗಿದೆ. ಅದರೊಂದಿಗೆ ನಮ್ಮಲ್ಲಿ ಪರಿಸರ ಶುಚಿತ್ವಕ್ಕೆ ಕಾಳಜಿ ಇಲ್ಲದಿರುವುದು, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ವ್ಯವಸ್ಥೆ ಹಾಳಾಗಿದೆ. ಅದಕ್ಕಾಗಿ ನಮ್ಮ ಪರಿಸರವನ್ನು ಶುಚಿಯಾಗಿ ಇಡಲು ನಮ್ಮ ಭಾಗದಲ್ಲಿನ ಮನೆಯ ಕಸವನ್ನು  ಗಂಟೆ ಗಾಡಿಗಳಿಗೆ ಹಾಕಿ ಎಂದರು. ಆರೋಗ್ಯ ನಿರೀಕ್ಷಕ ಬಿ.ಬಿ. ಕರ್ಜಗಿ, ಎನ್.ಡಿ. ಪವಾರ, ವಿ.ಎಂ. ಹಾದಿಮನಿ, ಎಚ್.ಎಂ. ಹುಮನಾಬಾದಿ, ಎಚ್.ಡಿ. ದೊಡ್ಡಮನಿ, ವೈ.ಇ. ಬೇಂದ್ರೆ, ತುಕಾರಾಮ ಪತಂಗಿ, ಚಿನ್ನಪ್ಪ ನೆಗಳೂರ, ಶಂಕರ ಭಸ್ಮೆ, ಪರಶುರಾಮ ಶ್ಯಾವಿ, ಮೈಲಾರಿ ತುರಕಾಣಿ ಹಾಗೂ ಪೌರಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ಅಕ್ರಮ ಗಣಿ ಮೇಲೆ ದಾಳಿ:
ಜೆಸಿಬಿ, 2 ಟಿಪ್ಪರ್ ವಶಕ್ಕೆ
ಗದಗ: ತಾಲೂಕಿನ ನಾಗಾವಿ ಹೊರವಲಯದಲ್ಲಿರುವ ಗುಡ್ಡಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿ ಮೇಲೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ನೇತೃತ್ವದ ತಂಡ ಶನಿವಾರ ಸಂಜೆ ದಾಳಿ ನಡೆಸಿ ಒಂದು ಜೆಸಿಬಿ ಹಾಗೂ 2 ಟಿಪ್ಪರ್‌ಗಳನ್ನು ವಶಕ್ಕೆ ಪಡೆದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಗದಗ ತಾಲೂಕಿನ ಕಪ್ಪತ್ತಗುಡ್ಡ ಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸಮೀಪದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದಾರೆ. ಕಪ್ಪತ್ತಗುಡ್ಡ ಭಾಗದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಈಚೆಗೆ ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಗದಗ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿಯಲ್ಲಿದ್ದರು.
ಮುಳಗುಂದ: ಹಳ್ಳದಲ್ಲಿ       ಕೊಚ್ಚಿಹೋದ ಮಹಿಳೆ
ಗದಗ: ತಾಲೂಕಿನ ಮುಳಗುಂದದಲ್ಲಿ ಶನಿವಾರ ಸಂಜೆ ಭಾರಿ ಮಳೆ ಸುರಿದಿದ್ದು, ಮಹಿಳೆಯೊಬ್ಬಳು ಹಳ್ಳದ ನೀರಿಗೆ ಕೊಚ್ಚಿ ಹೋಗಿದ್ದಾಳೆ. ಹಳ್ಳದಲ್ಲಿ ಕೊಚ್ಚಿಹೋದ ಮಹಿಳೆಯನ್ನು ಭರಮವ್ವ (65) ಎಂದು ಗುರುತಿಸಲಾಗಿದೆ. ಸಂಜೆ ಹೊಲದಿಂದ ವಾಪಸ್ ಮನೆಗೆ ಮರಳುತ್ತಿದ್ದಾಗ ಮುಳಗುಂದ- ನೀಲಗುಂದ ಮಧ್ಯೆದ ಹಳ್ಳದಲ್ಲಿ ಘಟನೆ ನಡೆದಿದೆ. ಮಹಿಳೆ ಜತೆಗಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆಯ ಶೋಧ ಕಾರ್ಯ ನಡೆದಿದ್ದು, ಈ ಕುರಿತು ಹೆಚ್ಚಿನ ಮಾಹಿತಿಲಭ್ಯವಾಗಿಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.