ಗದಗ

ತರಗತಿ ಬಹಿಷ್ಕರಿಸಿದ ಛಬ್ಬಿ ಮಕ್ಕಳು

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜೂ. 28
ಕೊಳೆತ ಕಾಯಿಪಲ್ಲೆ, ಅರೆಬೆರೆ ಬೆಂದ ಅನ್ನ, ಉಪ್ಪು-ಖಾರ ಇಲ್ಲದ ಕರಕಲಾದ ಉಪ್ಪಿಟ್ಟು ನೀಡುತ್ತಿದ್ದು, ಇದನ್ನೂ ಎರಡು ತಿಂಗಳಿನಿಂದ ಊಟದ ಸಮಯ ಸರಿಯಾಗಿ ನೀಡುತ್ತಿಲ್ಲ. ಅನೇಕ ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಇದು ತಾಲೂಕಿನ ಛಬ್ಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 60ಕ್ಕೂ ಹೆಚ್ಚು ಹೈಸ್ಕೂಲ್ ವಿದ್ಯಾರ್ಥಿಗಳ ಗೋಳು. ಇಂದು-ನಾಳೆ ಸರಿಯಾಗಿ ಪೌಷ್ಟಿಕತೆ ಇರುವ ಗುಣಮಟ್ಟದ ಊಟ ಕೊಟ್ಟಾರೂ ಎಂದು ಎರಡು ತಿಂಗಳ ವರೆಗೂ ಕಾದ ಮಕ್ಕಳು, ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬರದೇ ಇರುವುದರಿಂದ ಶನಿವಾರ ಬಿಸಿಯೂಟದ ಸಮಯದ ಹೊತ್ತಿಗೆ ತರಗತಿ ಬಹಿಷ್ಕರಿಸಿ ಎಲ್ಲ ಮಕ್ಕಳು ಶಾಲಾ ಆವರಣದಲ್ಲಿ ಪ್ರತಿಭಟನೆಗೆ ಮುಂದಾದರು.
ವಿದ್ಯಾರ್ಥಿಗಳಾದ ರವಿ ಲಮಾಣಿ, ಜ್ಯೋತಿ ಲಮಾಣಿ, ನಿರ್ಮಲಾ ಕಳಕಣ್ಣವರ ಮಾತನಾಡಿ, ಶಾಲೆಯಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿಲ್ಲ. ಕುಡಿವ ನೀರಿನ ಟ್ಯಾಂಕ್‌ನಲ್ಲಿ ಚಪ್ಪಲಿ ಬಿದ್ದು ಅನೇಕ ತಿಂಗಳು ಕಳೆದರೂ ತೆಗೆದು ಸ್ವಚ್ಛಗೊಳಿಸಿಲ್ಲ. ಹುಳುಗಳು ಬಿದ್ದು ನೀರು ಮಲಿನಗೊಂಡಿದ್ದು, ಆ ನೀರನ್ನೇ ಕುಡಿಯಲು ಕೊಡುತ್ತಿದ್ದಾರೆ. ಶಾಲಾ ಕೊಠಡಿ ಪಕ್ಕದಲ್ಲಿಯೇ ಬಳಕೆಗೆ ಬಾರದ ಶೌಚಾಲಯವಿದ್ದು, ಗಬ್ಬೆದ್ದು ನಾರುತ್ತಿದೆ. ದುರ್ನಾತದಿಂದ ತರಗತಿಯಲ್ಲಿ ಕುಳಿತು ಅಭ್ಯಸಿಸಲು ಆಗುತ್ತಿಲ್ಲ ಎಂದು ದೂರಿದರು.
ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಸರಿಯಾಗಿ ಇಲ್ಲದ್ದರಿಂದ ತೀವ್ರ ತೊಂದರೆಪಡುವಂತಾಗಿದೆ. ಅನೇಕ ಬಾರಿ ಮುಖ್ಯ ಶಿಕ್ಷಕರ ಗಮನಕ್ಕೆ ತಂದರೂ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿಲ್ಲ. ಬಿಸಿಯೂಟದ ಅಡುಗೆ ಕೊಠಡಿಯೂ ಸ್ವಚ್ಛತೆಯಿಲ್ಲದೆ ದುರ್ವಾಸನೆ ಬೀರುತ್ತಿದೆ. ಅಡುಗೆ ಪಾತ್ರೆಗಳು ಗಲೀಜಿನಿಂದ ಕೂಡಿವೆ. ಶಿಕ್ಷಕ ಸಿಬ್ಬಂದಿಗೆ ಮಾತ್ರ ಬೇರೆ ಅಡುಗೆ ಮಾಡಿ ಕೊಡುತ್ತಿದ್ದು, ಮಕ್ಕಳು ಮಾತ್ರ ನಾಯಿಯೂ ತಿನ್ನಲಾರದಂತಹ ಬಿಸಿಯೂಟ ತಿನ್ನುವ ಸ್ಥಿತಿ ಈ ಶಾಲೆಯಲ್ಲಿ ನಿರ್ಮಾಣವಾಗಿದೆ ಎಂದು ಮಕ್ಕಳು ಆರೋಪಿಸುತ್ತಾರೆ. ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ವಿ.ಎಂ. ಮೆಣಸಿನಕಾಯಿ ಮಾತನಾಡಿ, ನಿತ್ಯವೂ ಈ ಸಮಸ್ಯೆ ಬಗ್ಗೆ ಹೇಳುತ್ತಿದ್ದರೂ ಅಡುಗೆ ಸಿಬ್ಬಂದಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬಿಸಿಯೂಟದ ಸಂಪೂರ್ಣ ಜವಾಬ್ದಾರಿ ಪ್ರಾಥಮಿಕ ಶಾಲೆಯವರದ್ದಾಗಿದ್ದು, ನಮಗೆ ಬೆಲೆ ಕೊಡುತ್ತಿಲ್ಲ. ಈ ಕುರಿತು, ಈ ಭಾಗದ ಕ್ಲಸ್ಟರ್ ಮಟ್ಟದ ಅಧಿಕಾರಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರ ಗಮನಕ್ಕೂ ತರಲಾಗಿದೆ. ಯಾರೂ ಜವಾಬ್ದಾರಿ ವಹಿಸಿ ವ್ಯವಸ್ಥೆ ಬದಲಿಸಲು ಮುಂದಾಗಿಲ್ಲ ಎಂದು ತಿಳಿಸಿದರು.




ಅಡುಗೆ ಸಿಬ್ಬಂದಿ ಬದಲಿಸಿ
ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಜಾನು ಲಮಾಣಿ, ಗ್ರಾಪಂ ಅಧ್ಯಕ್ಷ ದೇವು ಲಮಾಣಿ ಮಾತನಾಡಿ, ಶಾಲೆಯಲ್ಲಿ ಮುಖ್ಯ ಶಿಕ್ಷಕರ ಮತ್ತು ಸಹ ಶಿಕ್ಷಕರ ಹೊಂದಾಣಿಕೆಯ ಕೊರತೆಯಿಂದ ಮಕ್ಕಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಸರ್ಕಾರ ಎಲ್ಲ ಸೌಲಭ್ಯ ನೀಡಿದರೂ ಸರಿಯಾಗಿ ಮಕ್ಕಳಿಗೆ ದೊರಕದೇ ಇರುವುದು ನೋವಿನ ಸಂಗತಿಯಾಗಿದೆ. ಸೋಮವಾರ ಡಿಡಿಪಿಐ, ಬಿಇತಿ ಶಾಲೆಗೆ ಭೇಟಿ ನೀಡಿ ಎಲ್ಲ ಸಮಸ್ಯೆ ಬಗೆಹರಿಸದಿದ್ದರೆ ಶಾಲೆ ಬಂದ್ ಮಾಡಿಸುವುದಾಗಿ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಬಿ.ಎಂ. ಚವ್ಹಾಣ ಮಾತನಾಡಿ, ಹೈಸ್ಕೂಲ್ ವಿದ್ಯಾರ್ಥಿಗಳು ಆರೋಪ ಮಾಡುತ್ತಾರೆ ಎನ್ನುವುದಕ್ಕಿಂತಲೂ ನಮಗೆ ನೋಡಿದರೆ ಮೇಲ್ನೋಟಕ್ಕೆ ಅವ್ಯವಸ್ಥೆ ಇರುವುದು ಕಂಡುಬರುತ್ತಿದೆ. ಅನೇಕ ಬಾರಿ ಮುಖ್ಯ ಶಿಕ್ಷಕರನ್ನು ಕೇಳಿದರೆ ಯಾವುದೇ ಅವ್ಯವಸ್ಥೆಯಿಲ್ಲ ಎಂದು ಹೇಳಿದ್ದರು. ಇದಕ್ಕೆಲ್ಲ ಅಡುಗೆ ಸಿಬ್ಬಂದಿಯೇ ಮುಖ್ಯ ಕಾರಣವಾಗಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಡುಗೆ ಸಿಬ್ಬಂದಿ ಬದಲಿಸುವುದಾಗಿ ತಿಳಿಸಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.