ಗದಗ

ಕನ್ನಡ ಸಾಹಿತ್ಯಕ್ಕೆ ಲಂಕೇಶ್ ಕೊಡುಗೆ ಅಪಾರ: ವಿದ್ಯಾವತಿ

Published On :

ಗದಗ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಥೆ, ಕಾದಂಬರಿ, ವಿಮರ್ಶೆ, ಮೊನಚಾದ ಪತ್ರಿಕಾ ಬರವಣಿಗೆ ಮೂಲಕ ಪಿ. ಲಂಕೇಶ ಅವರು ಸಾಮಾನ್ಯ ಜನರ ಕಷ್ಟ-ಕಾರ್ಪಣ್ಯಗಳಿಗೆ ಧ್ವನಿಯಾಗಿ ಜನಮಾನಸದಲ್ಲಿ ನೆಲೆಯೂರಿದ್ದಲ್ಲದೆ,  ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅರಟಾಳ ರುದ್ರಗೌಡ ಡಿ.ಇಡಿ. ಮಹಾವಿದ್ಯಾಲಯದ ಉಪನ್ಯಾಸಕಿ ವಿದ್ಯಾವತಿ ಅಕ್ಕಿ ಅಭಿಪ್ರಾಯ ಪಟ್ಟರು.
ಅವರು ಶನಿವಾರ ಜಿಲ್ಲಾ ಕಸಾಪ ವತಿಯಿಂದ ನಗರದ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆಯ 78ನೇ ಮಾಲಿಕೆ ಕಾರ್ಯಕ್ರಮದಲ್ಲಿ ಪಿ. ಲಂಕೇಶರ ಹುಳಿಮಾವಿನಮರ ಆತ್ಮಕಥನ-ಒಂದು ಅವಲೋಕನ ಕುರಿತು ಉಪನ್ಯಾಸ ನೀಡಿದರು. ಕನ್ನಡದಲ್ಲಿ ಆತ್ಮಕಥೆಗಳು ಹಲವಾರು ಬಂದಿವೆಯಾದರೂ ಪಿ. ಲಂಕೇಶರಷ್ಟು ಜೀವನದಲ್ಲಿ ಆಗಿಹೋದ ನೈಜ ಸಿಹಿ-ಕಹಿ ಘಟನೆಗಳನ್ನು ವಸ್ತುನಿಷ್ಠವಾಗಿ ಯಾವುದೇ ಮುಲಾಜು, ಹಿಂಜರಿಕೆ ಇಲ್ಲದೇ ಹೇಳಿಕೊಂಡಿರುವುದು ಅಪರೂಪವಾಗಿದೆ. ಪಿ. ಲಂಕೇಶರು ಅಧ್ಯಾಪಕರಾಗಿ, ಚಿಂತಕರಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಕನ್ನಡಿ ಹಿಡಿದರು. ಅವರ ಬರವಣಿಗೆಯಲ್ಲಿ ಬಂಡಾಯ, ದಲಿತರ ಕುರಿತು, ಹಾಗೆಯೇ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯ ಕಾಳಜಿ ವ್ಯಕ್ತಗೊಂಡಿರುವುದು ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಶಿಕ್ಷಕ ಗಿರೀಶ ಬಂಡಿಹಾಳರು ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಹಾಗೂ ಪ್ರಸ್ತುತ ವ್ಯವಸ್ಥೆ ಕುರಿತು ಸ್ವರಚಿತ ಕವನವನ್ನು ವಾಚಿಸಿದರು. ಉಪಾಧ್ಯಕ್ಷ ಸಿ.ಜಿ. ಹುಡೇದಗಡ್ಡಿ, ಬಿ.ಎನ್. ತಾರಾ, ಶಕುಂತಲಾ ಸಿಂಧೂರ, ರಾಜಶೇಖರ ಕಾಲವಾಡಮಠ, ವಿನಾಯಕ ಕಮತದ, ರತ್ನಕ್ಕ ಪಾಟೀಲ, ಕೆ.ವಿ. ಕುಂದಗೋಳ, ಜಿ.ಎಸ್. ಯತ್ನಟ್ಟಿ, ಕಿಶೋರಬಾಬು ನಾಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ, ಬಿ.ಜಿ. ಹಿರೇಮಠ, ಜಿ.ಬಿ. ಬಂಡಿಹಾಳ, ಎಸ್.ಎಸ್.ದೊಡ್ಡಮನಿ, ಕೆ.ಕೆ. ಹೂಗಾರ, ಸಿ.ಕೆ. ಕೇಸರಿ, ಶಾಂತಪ್ಪ ತಳ್ಳಿಹಾಳ, ಅ.ದ. ಕಟ್ಟಿಮನಿ, ಎಸ್.ಎಚ್. ಹೊಸಮನಿ, ಬಸವರಾಜ ವಾರಿ, ಜೆ.ಎಚ್. ಕಿಲ್ಲೇದಾರ, ಎಂ.ಎಂ. ಕುಲಕರ್ಣಿ, ಚನ್ನಬಸಪ್ಪ ಮಾನ್ವಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.