ಭ್ರಷ್ಟಾಚಾರ ಆರೋಪ: ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರ ಮುತ್ತಿಗೆ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ ಹಲವು ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಕೂಡಲೇ ತನಿಖೆ ನಡೆಸಿ ಅರ್ಹರಿಗೆ ಅನುದಾನ ವಿತರಿಸಬೇಕು ಎಂದು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆ ಅಡಿ 2009-10ರಿಂದ ಇಲ್ಲಿಯ ವರೆಗೆ ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನ ಸದ್ಬಳಕೆ ಮಾಡುವಲ್ಲಿ ಗ್ರಾಪಂ ಆಡಳಿತ ಸಂಪೂರ್ಣ ವಿಫಲವಾಗಿದೆ. ಅದರಂತೆ ಫಲಾನುಭವಿಗಳು ನಿರ್ಮಿಸಿಕೊಂಡ ಮನೆಗಳಿಗೆ ಚೆಕ್ ನೀಡದೆ ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ತಮಗೆ ಬೇಕಾದವರಿಗೆ ಮಾತ್ರ ಯೋಜನೆಗಳ ಮಾಹಿತಿ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಪಿಡಶೆಟ್ಟಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರಿಂದ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿ, ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಹಾಗೂ ಸರ್ಕಾರದ ವಿವಿಧ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಚೆಕ್ ವಿತರಿಸುವುದರ ಜತೆಗೆ ಪಂಚಾಯಿತಿಯ 2009-10 ರಿಂದ ಇಲ್ಲಿಯವರೆಗಿನ ಎಲ್ಲ ಕಡತಗಳನ್ನು ಪರಿಶೀಲಿಸಿ ಬಳಿಕ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಗ್ರಾಪಂ ವ್ಯಾಪ್ತಿಯ ನಾಗೇಂದ್ರಗಡ, ರುದ್ರಾಪುರ, ಕಲ್ಲಿಗನೂರ, ಅಮರಗಟ್ಟಿ, ಹಾಗೂ ಲಕ್ಕಲಕಟ್ಟಿ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಾಮಲಿಂಗಪ್ಪ ಬೆನಕನವಾರಿ, ಝಡ್.ಆರ್. ನದಾಫ್, ಶರಣಯ್ಯ ಹಿರೇಮಠ, ಅಳೆಬಸಪ್ಪ ಬೆನಕನವಾರಿ, ಪಿ.ಎಚ್. ಮ್ಯಾಗೇರಿ, ದೇವೇಗೌಡ ಬೆನಕನವಾರಿ, ಎಂ.ಎಸ್. ಬಾಬಜಿ, ಶರಣಪ್ಪ ಮುತಾರಿ, ಕೆಂಚಪ್ಪ ಮಾದರ, ಸಂಗನಬಸಯ್ಯ ಹಿರೇಮಠ, ಪರಮೇಶ ಬೂದಿಹಾಳ, ಯಲ್ಲವ್ವ ಕಾಟಿ, ಮಾಳವ್ವ ಮಾದರ, ಕಲ್ಲಯ್ಯ ಮಠದ, ಭೀಮಪ್ಪ ಹಂಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

