ರೈತರ ಚಿತ್ತ ಮತ್ತೆ ಈರುಳ್ಳಿಯತ್ತ
-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 30
ಜಿಲ್ಲೆಯ ಸ್ವಲ್ಪ ಭಾಗದಲ್ಲಿ ಮಳೆಯಾದರೆ ಇನ್ನು ಕೆಲವು ಭಾಗದಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ಒಣಗುತ್ತಿದ್ದು, ಕಳೆದ ಬಾರಿಯಂತೆ ಮಳೆ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಮಳೆ ಕೊರತೆಯಿಂದ ಹೆಸರು ಬೆಳೆಯುವ ಕ್ಷೇತ್ರದಲ್ಲೀಗ ಈರುಳ್ಳಿ ಬಿತ್ತನೆ ಮಾಡದೇ ಬೇರೆ ದಾರಿಯೇ ಇಲ್ಲದ ಸ್ಥಿತಿ ಜಿಲ್ಲೆಯ ರೈತರಿಗೆ ಎದುರಾಗಿದೆ.
ಜಿಲ್ಲೆಯ ಮತ್ತೊಂದು ಪ್ರಮುಖ ವಾಣಿಜ್ಯ ಬೆಳೆ ಹೆಸರು. 5 ತಾಲೂಕುಗಳ ವ್ಯಾಪ್ತಿಯಲ್ಲಿ 30 ಸಾವಿರ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆಯ ಮಾಹಿತಿ ಮತ್ತು ಹವಾಗುಣ ಆಧಾರದಲ್ಲಿ ಜುಲೈ ಮೊದಲ ವಾರದಲ್ಲಿ ಮಳೆಯಾದಲ್ಲಿ ಮಾತ್ರ ಹೆಸರು ಬೆಳೆ ಉಳಿಯಲು ಸಾಧ್ಯ. ಇಲ್ಲವಾದಲ್ಲಿ ಅದನ್ನು ಹರಗಿ ಮತ್ತೆ ಬೇರೆ ಬೆಳೆ (ಈರುಳ್ಳಿ) ಬಿತ್ತನೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ.
ರೈತರ ಚಿತ್ತ ಈರುಳ್ಳಿಯತ್ತ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗಿದ್ದರೆ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಮಳೆ ಕೈಕೊಟ್ಟಿದ್ದು, ಹೆಸರು ಬಿತ್ತನೆಯ ಕಾಲಾವಧಿ (ತತಿ) ಮುಗಿಯುತ್ತಾ ಬಂದಿದೆ. ಹೆಸರು ಬಿತ್ತನೆ ಮಾಡಬೇಕಾಗಿದ್ದ ಎಲ್ಲ ರೈತರು ಅನಿವಾರ್ಯವಾಗಿ ಈರುಳ್ಳಿಯನ್ನೇ ಬಿತ್ತನೆ ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈರುಳ್ಳಿ ಬಿತ್ತನೆಗೆ ಇನ್ನು ಸಾಕಷ್ಟು ಕಾಲಾವಕಾಶವಿದ್ದು, ತಡವಾಗಿ ಮಳೆಯಾದರೂ ಈರುಳ್ಳಿ ಬಿತ್ತನೆಗೆ ಅನುಕೂಲವಿದೆ. ಹಾಗಾಗಿ ಸದ್ಯ ಉತ್ತಮವಾದ ಮಳೆಯಾದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆಗೆ ಮುಂದಾಗುವ ಸಾಧ್ಯತೆಯೇ ಹೆಚ್ಚು.
33124 ಹೆಕ್ಟೇರ್ ಈರುಳ್ಳಿ ಬಿತ್ತನೆ
ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಎನ್ನುವ ಹೆಗ್ಗಳಿಕೆ ಗದಗ ಜಿಲ್ಲೆ ಹೊಂದಿದೆ. ಕಳೆದ ಸಾಲಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದರೂ 5 ತಾಲೂಕುಗಳ ವ್ಯಾಪ್ತಿಯಲ್ಲಿ 33124 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಇದರಲ್ಲಿ ರೋಣ ತಾಲೂಕಿನಲ್ಲಿ ಅತಿ ಹೆಚ್ಚು 20166 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ಸಕಾಲಕ್ಕೆ (ಹೆಸರು ಬಿತ್ತನೆಯ ವೇಳೆಯಲ್ಲಿ) ಮಳೆಯಾಗದೇ ಇರುವುದರಿಂದ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ಗೊಬ್ಬರ ಅಭಾವ ಸೃಷ್ಟಿ
ಜಿಲ್ಲೆಯ ರೈತರು ಹೆಸರು ಬಿತ್ತನೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಹೆಸರು ಬೇಗನೇ ಬರುವ ಬೆಳೆಯಾಗಿದೆ. ಆದರೆ ಈರುಳ್ಳಿಯೊಂದಿಗೆ ಅಂತರ ಬೇಸಾಯವಾಗಿ ಮೆಣಸಿನಕಾಯಿ ಬಿತ್ತನೆ ಮಾಡಲಾಗುತ್ತದೆ. ನಂತರ ಹಿಂಗಾರು ಹಂಗಾಮಿನಲ್ಲಿ ಜಯಧರ ಹತ್ತಿ ಹಾಕುತ್ತಾರೆ.
ಹೀಗಾಗಿ ಈರುಳ್ಳಿ ಬಿತ್ತನೆ ವೇಳೆಯಲ್ಲಿ ರೈತರು ಹೆಚ್ಚಾಗಿ ರಸಾಯನಿಕ ಗೊಬ್ಬರ ಬಳಕೆ ಮಾಡುವುದರಿಂದ ತಕ್ಷಣವೇ ಮಳೆ ಕೃಪೆ ತೋರಿದಲ್ಲಿ ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವ ಸೃಷ್ಟಿಯಾಗುವುದು ಖಂಡಿತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

