ಪುಟ್ಟರಾಜ ಗವಾಯಿಗೆ ಭಾರತ ರತ್ನ ನೀಡಲಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 2
ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳು ಅಪಾರ, ಅಂತಹ ಮಹಾನ್ ವ್ಯಕ್ತಿಗಳಿಗೆ ಇಲ್ಲಿಯವರೆಗೆ ಭಾರತ ರತ್ನ ಪ್ರಶಸ್ತಿ ಸಿಗದೇ ಇರುವುದು ಖೇದನೀಯ. ಈ ಕುರಿತು ಸರ್ಕಾರ ಚಿಂತನೆ ನಡೆಸಿ ಪುಟ್ಟರಾಜ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲಿ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಅವರು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ಆಡಳಿತ, ಜಿಪಂ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವಾನಿರತ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುಟ್ಟರಾಜ ಗವಾಯಿಗಳ ಸೇವೆಯನ್ನು ಇಲ್ಲಿಯವರೆಗೂ ಗುರುತಿಸದೇ ಇರುವುದು ವಿಷಾದನೀಯ. ಮುಂಬರುವ ದಿನಗಳಲ್ಲಿಯಾದರೂ ಸರ್ಕಾರ ತಕ್ಷಣದಲ್ಲಿಯೇ ಎಚ್ಚೆತ್ತುಕೊಂಡು ಪೂಜ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಭಾರತ ದೇಶದಲ್ಲಿ ಗದಗ ಜಿಲ್ಲೆಯು ಕೈಲಾಸ ಎಂದೇ ಖ್ಯಾತವಾಗಿದೆ. ಇದು ಸಂಗೀತ ಕ್ಷೇತ್ರದ ಕಾಶಿ ಎನ್ನುವುದಕ್ಕೆ ಮೂಲ ಕಾರಣ ಪುಟ್ಟರಾಜ ಗವಾಯಿಗಳು. ಗದಗ ಎಲ್ಲ ರಂಗಗಳಲ್ಲಿಯೂ ಮುಂದೆ ಇದೆ ಅದನ್ನು ಉಳಿಸಿ ಬೆಳೆಸೋಣ ಎಂದರು. ನಗರದಲ್ಲಿ ಸಂಗೀತ ಶಾಲೆ ಪ್ರಾರಂಭವಾಗಿ ಮಾ. 3ಕ್ಕೆ 100 ವರ್ಷ ತುಂಬುವುದು ಅಲ್ಲದೇ ನಾಟಕ ಕಂಪನಿಗೆ 80 ವರ್ಷ ತುಂಬುವುದು ಇಂತಹ ಕಾರ್ಯಕ್ಕೆ ಪೂಜ್ಯ ಅಜ್ಜನವರ ಮಾಡಿದ ಸಾಧನೆ ಅನನ್ಯ. ಪುಟ್ಟರಾಜ ಗುರುಗಳು ಸಂಗೀತವನ್ನೇ ತಮ್ಮ ದೇಗುಲವನ್ನಾಗಿ ಮಾಡಿಕೊಂಡು ಸಮಾಜದಲ್ಲಿ ವಿಕಲಚೇತನರಿಗೆ ವಿಶಿಷ್ಟವಾದ ಸ್ಥಾನ ಸಿಗುವಂತೆ ಮಾಡಿದ ಮಾಹಾನ್ ಸಾಧಕರು ಎಂದರು. ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ, ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ವಿ.ಬಿ. ಬಣಕಾರ, ಎಸ್.ಪಿ. ಮಾಚಕ್ಕನವರ, ಜಿಲ್ಲಾ ಅಂಗವಿಕಲರ ಅಧಿಕಾರಿ ಡಿ.ಎನ್. ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್. ಪರಮೇಶ್ವರಪ್ಪ, ಐ.ಎಚ್. ಪಂಚಾಳ, ನಿಂಗಪ್ಪ ಗಡಗಿ, ಅನಿಲ ಕುಲಕರ್ಣಿ, ಭಾರತಿ ಶೆಟ್ಟಿ, ಮೋಹನ ನವಲೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

