ಸಂಸ್ಕೃತಿ, ಪರಂಪರೆ ರಕ್ಷಿಸಿ: ಡಾ. ಶೀಲಾಕಾಂತ
ಶಿರಹಟ್ಟಿ: ಮನುಕುಲಕ್ಕೆ ವಿಶ್ವಕರ್ಮ ಸಮಾಜ ಅನೇಕ ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ಅದ್ಬುತ ಕೊಡುಗೆಗಳನ್ನು ನೀಡಿ, ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ. ಸಾಕ್ಷಾತ ಭಗವಂತನ ಸ್ವರೂಪವೇ ವಿಶ್ವಕರ್ಮರೆನಿಸಿದ್ದರೂ ಯಾವ ಶಾಸನದಲ್ಲಿಯೂ ವಿಶ್ವಕರ್ಮ ಎಂಬ ಪದ ಬಳಕೆ ಆಗದೇ ಇರುವುದು ವಿಷಾದದ ಸಂಗತಿಯಾಗಿದೆ ಎಂದು ಡಾ. ಶೀಲಾಕಾಂತ ಪತ್ತಾರ ಹೇಳಿದರು.
ಈಚೆಗೆ ಶ್ರೀಕ್ಷೇತ್ರ ವರವಿ ಮೌನೇಶ್ವರ ಮಠದಲ್ಲಿ ಶಿವರಾತ್ರಿ ಪ್ರಯುಕ್ತ 1008 ಅಭಿಷೇಕ, 312ನೇ ವಿಶ್ವಬ್ರಾಹ್ಮಣಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವಕರ್ಮ ಪರಂಪರೆ ಬಗ್ಗೆ ಉಪನ್ಯಾಸ ನೀಡಿದರು. ಬ್ರಹ್ಮಾಂಡ ಸೃಷ್ಟಿಕರ್ತರೆನಿಸಿದ ವಿಶ್ವಕರ್ಮ ಸಮಾಜ ಎಲ್ಲ ಧರ್ಮಗಳೊಂದಿಗೆ ಸಾಮ್ಯತೆ ಹೊಂದಿದೆ. ಇವರಲ್ಲಿ ದೈವತ್ವ ಜನ್ಮತಃ ಬಂದಿದ್ದು, ವೈದಿಕ ಪರಂಪರೆ ಹೊಂದಿದವರೇ ವಿಶ್ವಕರ್ಮರಾಗಿದ್ದಾರೆ ಎಂದರು. ಸಾಹಿತ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳದೇ ಇರುವುದು, ನಿರರ್ಥಕವಾದ, ಅಪಾರ್ಥ ಕೊಡುವ ಆಚರಣೆ ಕೈಬಿಡಬೇಕು. ಇತಿಹಾಸ ಮರೆತವರಿಗೆ ಭವಿಷ್ಯವಿಲ್ಲ ಎಂದ ಅವರು, ಪುಸ್ತಕ ಸಂಸ್ಕೃತಿ ರೂಢಿಸಿಕೊಳ್ಳಬೇಕು ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು. ನಮ್ಮ ಸಂಸ್ಕೃತಿ, ಪರಂಪರೆ, ಸಾಮಾಜಿಕ ಬದಲಾವಣೆ ಅರಿತುಕೊಳ್ಳಲು ಎಲ್ಲರೂ ವಿದ್ಯಾವಂತರಾಗಬೇಕು. ಹಿಂದಿನಿಂದಲೂ ರಾಜಕೀಯವಾಗಿ ಬಲಿಷ್ಠ ಸಮಾಜಗಳಿಗೆ ಆದ್ಯತೆ ನೀಡಿ ನಮ್ಮ ಸಮಾಜವನ್ನು ತುಳಿಯುತ್ತ ಬಂದಿದ್ದಾರೆ. ಎಲ್ಲರೂ ಜಾಗ್ರತರಾಗಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಯಾದಗಿರಿ ಏಕದಂಡಗಿಮಠದ ಗುರುನಾಥೇಂದ್ರ ಸರಸ್ವತಿ ಶ್ರೀಗಳು, ಕ್ಷೇತ್ರ ಶ್ರೀ ವರವಿ ಮೌನೇಶ್ವರ ಮಠದ ವಿರೂಪಾಕ್ಷ ಶ್ರೀಗಳು ಮಾತನಾಡಿ, ನಮ್ಮ ಸಮಾಜದ ಪರಂಪರೆ, ವೈಭವವನ್ನು ತಿಳಿದುಕೊಳ್ಳಲು ಮಕ್ಕಳಿಗೆ ಶಕ್ಯವಿರುವ ಅತ್ಯುತ್ತಮ ಶಿಕ್ಷಣವನ್ನು ಒದಗಿಸಬೇಕು. ಸಮಾಜೋನ್ನತಿಗೆ ಒಕ್ಕಟ್ಟು ಮತ್ತು ಶಿಸ್ತು ಅವಶ್ಯವಾಗಿದ್ದು, ಸಮಾಜದ ಹಿತಕ್ಕಾಗಿ ಶರಣರು ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಆದರ್ಶಗಳನ್ನು ಸರ್ವರೂ ಸರಿಯಾಗಿ ಅರ್ಥೈಸಿಕೊಂಡು ನಡೆಯಬೇಕು ಎಂದರು. ಕಾಯಕದಲ್ಲಿ ಸಿಗುವ ಆನಂದ ಪ್ರಪಂಚದ ಬೇರಾವ ವಸ್ತುವಿನಿಂದಲೂ ಸಿಗಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳು ತಮ್ಮ ತಮ್ಮ ಕಾರ್ಯಗಳನ್ನು ನಿತ್ಯ ತಪ್ಪದೇ ಮಾಡುತ್ತವೆ. ಇವುಗಳನ್ನು ಮಾದರಿಯಾಗಿಟ್ಟುಕೊಂಡು ಯುವಕರು ನಿತ್ಯ ಕಾಯಕದಲ್ಲಿ ತೊಡಗಬೇಕು ಎಂದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಕಾಂತ ಸೋನಾರ ಮಾತನಾಡಿದರು. ಮೌನೇಶ ಮಠದ, ಐ.ಬಿ. ಪತ್ತಾರ, ರಾಜು ಪಂಡಿತ, ಶಂಕರ ಹುಬ್ಬಳ್ಳಿ, ಕೆ.ಪಿ. ಮಾಯಾಚಾರ, ವೀರಣ್ಣ ಹಡಗಲಿ, ಕಾಳಪ್ಪ ಗುರಪ್ಪ ಪತ್ತಾರ, ಶಿವಾನಂದ ಪತ್ತಾರ, ಪುಷ್ಪಾ ವಿಶ್ವಜ್ಞ ಶಂಕರ ಕಡ್ಲಿಕೊಪ್ಪ, ಮೋಹನ ನರಗುಂದ, ಮಹೇಶ ಹುಲಬಜಾರ ಇದ್ದರು. ಅನ್ನಪೂರ್ಣಾ ಚನ್ನಪ್ಪ ವಿಶ್ವಕರ್ಮ, ಶಂಕರ ಹುಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

