ಯುವಕರು ರಾಜಕೀಯ ವ್ಯವಸ್ಥೆ ಬದಲಿಸಲಿ: ಕುಂವೀ
ಗದಗ: ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಯುವಕರು ರಾಜಕಾರಣದ ವ್ಯವಸ್ಥೆ ತಿದ್ದುವ ಮೂಲಕ ಸುಂದರ ಭಾರತ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.
ಅವರು ಗುರುವಾರ ನಗರದ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದ ಎಸ್. ಶಿವರಾಮ್ ವೇದಿಕೆಯಲ್ಲಿ ಡಿವೈಎಫ್‌ಐನ 10ನೇ ರಾಜ್ಯ ಯುವಜನ ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಿಂದಿನ ರಾಜಕೀಯ ವ್ಯವಸ್ಥೆಗೂ ಈಗಿರುವ ರಾಜಕೀಯ ವ್ಯವಸ್ಥೆಯು ತುಂಬಾ ಬದಲಾಗಿದೆ. ಇಂದು ರಾಜಕೀಯದಲ್ಲಿ ಎಲ್ಲೆಡೆ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇದು ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಅಲ್ಲದೇ ಯುವಕರೂ ಈ ರಾಜಕೀಯ ಪರಿಸ್ಥಿತಿಯ ಅನುಗುಣವಾಗಿ ಹೊಂದಿಕೊಂಡು ಹೋಗುತ್ತಿರುವುದು ದುರ್ದೈವದ ಸಂಗತಿ. ಈಗಿನ ಚುನಾವಣೆಗೂ ಅಂದಿನ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬರುತ್ತಿದ್ದು, ಕೆಲವೇ ದಿನಗಳಲ್ಲಿ ಬರುತ್ತಿರುವ ಚುನಾವಣೆಯು ಮಹಾ ಅಪಾಯಕಾರಿಯಾಗಿದ್ದು, ಈ ಕುರಿತು ಯುವಕರು ಜಾಗ್ರತರಾಗುವುದು ಅವಶ್ಯವಾಗಿದೆ ಎಂದರು.
ಜ್ಯೋತಿಷಿಗಳು ಜನರ ಮನಸ್ಸು ಕೆಡಿಸುತ್ತಾರೆ: ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, ಭಾರತವು ಬಹುಜಾತಿ, ಸಂಸ್ಕೃತಿ ಹೊಂದಿದ ದೇಶ. ಸಾವಿರಾರು ವರ್ಷಗಳ ಜಾತಿ, ವರ್ಣ, ವರ್ಗದ ವ್ಯವಸ್ಥೆಯಿಂದ, ವೈಚಾರಿಕತೆಯ ಕೊರತೆಯಿಂದ ದೇಶವು ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಸ್ವಯಂಘೋಷಿತ ದೇವಮಾನವರು, ಜ್ಯೋತಿಷಿಗಳು ಭಯೋತ್ಪಾದಕರಿಗಿಂತಲೂ ಅಪಾಯಕಾರಿ. ಇವರು ಜನರ ಮನಸ್ಸನ್ನು ಕೆಡಿಸುತ್ತಾರೆ. ಇಂತವರ ವಿರುದ್ಧ ಜನತೆ ಧ್ವನಿಎತ್ತುವ ಕಾರ್ಯ ಕೈಗೊಳ್ಳಬೇಕಿದೆ ಎಂದರು.
ಜ್ಯೋತಿಷಿಗಳಿಗೆ ಗಂಜಿಕೇಂದ್ರ ತೆರೆಯಿರಿ
ಇಂದಿನ ಬದಲಾದ ವಿದ್ಯಮಾನದಲ್ಲಿ ಸಾರ್ವಜನಿಕರು ಬೆಳಗ್ಗೆ ಎದ್ದ ತಕ್ಷಣ ಜ್ಯೋತಿಷಿಗಳ ಮಾತನ್ನು ಕೇಳಿಯೇ ಕಾರ್ಯಾರಂಭ ಮಾಡುವ ರೀತಿಗೆ ಬಂದು ತಲುಪಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಜ್ಯೋತಿಷಿಗಳ ಮಾತನ್ನು ಎಲ್ಲಿಯವರೆಗೂ ಜನತೆ ನಂಬುವರೋ ಅಲ್ಲಿಯವರೆಗೆ ಈ ದೇಶದ ಅಭಿವೃದ್ಧಿ ಅಸಾಧ್ಯ. ಜ್ಯೋತಿಷಿಗಳಿಂದ ಜನತೆಯಲ್ಲಿ ತಪ್ಪು ಮನೋಭಾವನೆ ರೂಪಿತವಾಗುತ್ತಿದೆ. ಮತ್ತು ಅದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿ ಜ್ಯೋತಿಷ್ಯವನ್ನು ರದ್ದುಗೊಳಿಸಿ ಜ್ಯೋತಿಷಿಗಳಿಗೆ ಪ್ರತ್ಯೇಕ ಗಂಜಿಕೇಂದ್ರ ನಿರ್ಮಿಸಿಕೊಡಲಿ ಎಂದು ಕುಂ. ವೀರಭದ್ರಪ್ಪ ಕಾರ್ಯಕ್ರಮದಲ್ಲಿ ಹೇಳಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

