ಲಕ್ಕಲಕಟ್ಟಿಯಲ್ಲಿ ನೈರ್ಮಲ್ಯ ಕೊರತೆ
ಡಿ.ಜಿ. ಮೋಮಿನ್
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಅನೈರ್ಮಲ್ಯ, ಅಶುಚಿತ್ವ ರಾರಾಜಿಸುತ್ತಿದೆ. ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಿವಾಸಿಗಳ ನರಕಯಾತನೆ ಗೋಳು ಯಾರೂ ಕೇಳುವರಿಲ್ಲದಂತಾಗಿದೆ.
ಸುತ್ತಲಿನ ಗ್ರಾಮಗಳ ಅಸಂಖ್ಯಾತ ಭಕ್ತರ ಆರಾಧ್ಯ ದೇವರಾದ ಗ್ರಾಮದ ಅಳೇಬಸವೇಶ್ವರ ದೇಗುಲ ದರ್ಶನಕ್ಕೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಆದರೆ, ಗ್ರಾಮದಲ್ಲಿನ ರಸ್ತೆ ದುರ್ಬಲಾವಸ್ಥೆ ಕಂಡು ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ. ಗ್ರಾಮದಲ್ಲಿರುವ ರಸ್ತೆ ಮಧ್ಯೆ ಚರಂಡಿ ಕೊಳಚೆ ಹರಿಯುವ ನೀರು ಗಟಾರಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ಸಂಚರಿಸದ ದುಸ್ಥಿತಿ ನಿರ್ಮಾಣವಾಗಿದೆ. ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ. ಕೆಲ ಓಣಿಗಳಲ್ಲಿ ಚರಂಡಿಯನ್ನು ಹಲವಾರು ತಿಂಗಳಿಂದ ಸ್ವಚ್ಛಗೊಳಿಸದೆ ಬಿಟ್ಟಿದ್ದರಿಂದಾಗಿ ಸೊಳ್ಳೆಗಳ ಉತ್ಪಾದನೆಯ ಕೇಂದ್ರವಾಗಿ ಮಾರ್ಪಟ್ಟಿದೆ. ವೃದ್ಧರು, ಮಕ್ಕಳು, ಮಹಿಳೆಯರು ಒಂದಿಲ್ಲೊಂದು ಸಾಂಕ್ರಾಮಿಕ ರೋಗ ಪೀಡಿತರಾಗಿ ತತ್ತರಿಸುತ್ತಿದ್ದಾರೆ. ಹಿಂದುಳಿದ ಸಮುದಾಯ ವಾಸಿಸುವ ಬಡಾವಣೆ ರಸ್ತೆಯಂತೂ ಸಂಪೂರ್ಣ ಕೊಳಚೆಮಯವಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡದೆ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಸರ್ಕಾರ ಗ್ರಾಮದ ಮೂಲ ಸೌಲಭ್ಯಗಳ ಪೂರೈಕೆಗಾಗಿ ಪ್ರತಿವರ್ಷ ಗ್ರಾಪಂಗೆ ಲಕ್ಷಾಂತರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಸ್ಥಳೀಯ ಆಡಳಿತ ವೈಫಲ್ಯದಿಂದಾಗಿ ಹದಗೆಟ್ಟ ನೈರ್ಮಲ್ಯ ವ್ಯವಸ್ಥೆ ಸರಿಪಡಿಸುವ ಕ್ರಮಕ್ಕೆ ಮುಂದಾಗದಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಓಣಿಗಳಿಗೆ ಮೂಲ ಸೌಲಭ್ಯ ನೀಡಬೇಕು. ಬಡಾವಣೆಗಳ ದುರಾವಸ್ಥೆ ದೂರ ಮಾಡಲು ಹಲವಾರು ಬಾರಿ ಗ್ರಾಪಂಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ ಎಂಬುದು ನಿವಾಸಿಗಳು ಅಪಾದನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

