ಕಾಲಕಾಲೇಶ್ವರ ಪಕ್ಕದ ಹಳ್ಳಿಗಳಲ್ಲಿಲ್ಲ ಹೋಳಿ
ಗಜೇಂದ್ರಗಡ: ದೇಶಾದ್ಯಂತ ಜನತೆ ರಂಗು ರಂಗಿನ ಹೋಳಿ ಹಬ್ಬದಾಚರಣೆಗೆ ಸಿದ್ಧತೆಯಲ್ಲಿ ತೊಡಗಿದ್ದರೆ, ಇತ್ತ ದಕ್ಷಿಣ ಕಾಶಿ ಪ್ರಸಿದ್ಧಿಯ ಶ್ರೀ ಕಾಲಕಾಲೇಶ್ವರ ಸನ್ನಿಧಾನ ಸುತ್ತಲಿನ ಏಳು ಹಳ್ಳಿಗಳಲ್ಲಿ ಹೋಳಿ ಹಬ್ಬ ಆಚರಿಸಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಇನ್ನೂ ಬೇರೂರಿದೆ. ಹೀಗಾಗಿ ಈ ವರ್ಷವೂ ಹೋಳಿ ಹಬ್ಬ ಸಂಭ್ರಮಕ್ಕೆ ಇಲ್ಲಿ ಬ್ರೇಕ್ ಬಿದ್ದಿದೆ...
ಕಾಲಕಾಲೇಶ್ವರ, ಬೈರಾಪುರ, ರಾಜೂರು, ಬೈರಾಪುರ ತಾಂಡಾ, ಲಕ್ಕಲಕಟ್ಟಿ, ದಿಂಡೂರು ಗ್ರಾಮದಲ್ಲಿ ರತಿ- ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ, ಪರಸ್ಪರ ಬಣ್ಣ ಎರಚುವುದು, ಬಾಯಿ ಬಡಿದುಕೊಳ್ಳುವುದಾಗಲಿ, ಹೋಳಿಗೆ ಊಟ ಮಾಡಿದರೆ ಗ್ರಾಮದಲ್ಲಿ ಸಾಮೂಹಿಕ ಕೇಡಾಗುವುದು (ಅವಘಡ) ನಿಶ್ಚಿತ ಎಂಬ ಅಪನಂಬಿಕೆ ಗ್ರಾಮಸ್ಥರ ಮನದಲ್ಲಿ ಬಲವಾಗಿ ನೆಲೆಯೂರಿದೆ. ಹೀಗಾಗಿ ಈಗ ಬರುವ ಹೋಳಿ ಹಬ್ಬ ಸಾಮೂಹಿಕವಾಗಿ ಆಚರಿಸದಿರಲು ಗ್ರಾಮಸ್ಥರೆಲ್ಲರೂ ನಿರ್ಧರಿಸಿದ್ದಾರೆ.
ಆಚರಿಸಿದರೆ ರುದ್ರನ ಕೆಂಗಣ್ಣು: ಏಳು ಊರಲ್ಲಿ ಹೋಳಿ ಹಬ್ಬ ಏನು ಅಂದರೆ ಯಾರಿಗೂ ಗೊತ್ತಿಲ್ಲ. ಏಕೆ ಅಂತಿರಾ ಅಲ್ಲಿ ಹೋಳಿ ಹಬ್ಬ ಆಚರಣೆ ಮಾಡಿ ಇಂದಿಗೆ ಸುಮಾರು ನೂರಾರು ವರ್ಷಗಳಾಗಿವೆ. ನಾಡಿನ ಅಸಂಖ್ಯಾತ ಭಕ್ತರು ಕುಲದೇವರೆಂದು ಆರಾಧಿಸುವ ಸ್ವಯಂಭು ಲಿಂಗಸ್ವರೂಪಿ ಶ್ರೀ ಕಾಲಕಾಲೇಶ್ವರ ದೇವರು ನೆಲೆ ಜತೆ ಮತ್ತೊಂದು ಗುಡ್ಡದ ಮೇಲೆ ರುದ್ರಪಾದ ಇರುವುದರಿಂದ ರುದ್ರಭೂಮಿ ಎಂದು ಕರೆಯಲಾಗುತ್ತದೆ. ಪರಶಿವನ ಮೂರನೇ ಕೆಂಗಣ್ಣಿಗೆ ಗುರಿಯಾದ ಕಾಮಣ್ಣನ ದಹಿಸುವ ಹೋಳಿ ಹಬ್ಬವನ್ನು ತಲೆ ತಲಾಂತರದಿಂದ ಸುತ್ತಲಿನ ಏಳು ಗ್ರಾಮದಲ್ಲಿ ಆಚರಿಸುತ್ತಿಲ್ಲ ಎನ್ನುವುದು ಹಿರಿಯರ ಹೇಳಿಕೆ.
ಅನೇಕ ನಷ್ಟ: ಕೆಲ ವರ್ಷ ಹಿಂದೆ ರಾಜೂರಲ್ಲಿ ಕೆಲವರು ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು. ಹಬ್ಬ ಆಚರಣೆ ಮಾಡಿದ ಬಳಿಕ ಗ್ರಾಮದಲ್ಲಿ ಅನೇಕ ಅವಘಡಗಳು ಸಂಭವಿಸುತ್ತಾ ಬಂದವು. ಗುಡಿಸಲುಗಳು ಸುಟ್ಟು ಇನ್ನಿತರ ನಷ್ಟವುಂಟಾಯಿತು. ಈ ಹಿನ್ನೆಲೆಯಲ್ಲಿ ಊರಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ. ಏಳು ಗ್ರಾಮದ ಜನತೆ ಹೋಳಿ ಹಬ್ಬವನ್ನು ಮರೆತು ಸಾಕಷ್ಟು ವರ್ಷಗಳಾಗಿವೆ. ಏಕೆ? ಏನು? ಎಂಬ ಪ್ರಶ್ನೆಗೆ ಇನ್ನೂ ಕೆಲವರ ಉತ್ತರ ಹೀಗಿದೆ.
ಹಲವಾರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಎಲ್ಲರಂತೆಯೂ ಕೆಲ ಯುವಕರು ಸಣ್ಣ ಮಕ್ಕಳಂತೆ ಕಟ್ಟಿಗೆ, ಕುಳ್ಳನ್ನು ತುಡುಗು ಮಾಡಿಕೊಂಡು ಬಂದು ಒಂದು ಕಡೆ ಮಾಳಿಗೆಯ ಮೇಲೆ ಸಂಗ್ರಹಿಸಿದರು. ನಂತರ ಈ ಹಬ್ಬದಂದು ಕಾಮಣ್ಣನನ್ನು ದಹಿಸುವಾಗ ಬಾಯಿ ಬಾಯಿ ಬಡಿದುಕೊಂಡು ದಹಿಸುವುದು. ಹೀಗೆ ಪ್ರತಿಯೊಂದು ಕಾರ್ಯ ಚಾಚು ತಪ್ಪದೆ ಪಾಲಿಸಿದರು. ಆದರೆ, ಈ ಹಬ್ಬ ಆಚರಿಸುವುದರಿಂದ ಊರಿನಲ್ಲಿ ಕೆಲವೊಂದು ಅನಾಹುತಕಾರಿ ಘಟನೆಗಳು ಸಂಭವಿಸಲು ಪ್ರಾರಂಭಿಸಿದವು. ಆಗ ಊರಲ್ಲಿ ಎಲ್ಲರೂ ಸೇರಿಕೊಂಡು ಹೊಳಿ ಹಬ್ಬ ಆಚರಿಸುವುದು ಬೇಡ ಎಂದು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ಹಬ್ಬ ಆಚರಣೆಯಿಂದಾದ ಅವಘಡಗಳನ್ನು ಈಗಲೂ ನೆನಪಿಸಿಕೊಳ್ಳುವುದುಂಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

