ಗದಗ

ಗಜೇಂದ್ರಗಡ: ಹೋಳಿ ವಿಶಿಷ್ಟ ಆಚರಣೆ

Published On :

ಗಜೇಂದ್ರಗಡ: ಪಟ್ಟಣದಲ್ಲಿ ರತಿ-ಕಾಮಣ್ಣರ ಮೂರ್ತಿಗಳ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಿಂದುಳಿದ ಸಮುದಾಯ ಮಹಿಳೆಯರು ಜನಪದ ಸೊಗಡಿನ ಗೀತೆಗಳನ್ನು ಹಾಡಿ, ಬಾಯಿ ಬಡಿದುಕೊಳ್ಳುವ ವಿಶಿಷ್ಟ ಸಂಪ್ರದಾಯ ಯುವ ಪೀಳಿಗೆಗೆ ಅಚ್ಚರಿ ಮೂಡಿಸುವಂತದ್ದಾಗಿದೆ.
ಮಹಿಳೆಯರು, ಪುರುಷರು, ಚಿಣ್ಣರು ಸೇರಿ ವಯಸ್ಸಿನ ಭೇದ ಇಲ್ಲದೇ ಪರಸ್ಪರ ಬಣ್ಣ ಎರಚಿ ಹಬ್ಬದ ಸಂಭ್ರಮ ಸವಿಯುವುದೆ ಹೋಳಿ ಹಬ್ಬದ ವಿಶೇಷತೆ. ಅಮಾವಾಸ್ಯೆ ಮಾರನೇ ದಿನ ಚಂದ್ರನ ದರ್ಶನವಾದದ್ದೆ ತಡ ಹೋಳಿ ಹುಣ್ಣಿಮೆ ಪ್ರಾರಂಭವಾಗುತ್ತಿದ್ದಂತೆ ಮಕ್ಕಳು ಹಲಗೆ ಬಾರಿಸುತ್ತಾ, ಬಾಯಿ ಬಡಿದುಕೊಳ್ಳುವುದು ಶುರುವಾದದ್ದು ಹೋಳಿ ಹಬ್ಬದ ಕೊನೆಯ ವರೆಗೂ. ಆಚರಣೆ ದಿನದಿಂದ ದಿನಕ್ಕೆ ರಂಗೇರುತ್ತದೆ. ದಿನ ಬೆಳಗಾದರೆ ಯುವಕರು, ಮಕ್ಕಳು ಹಲಿಗೆ ಬಾರಿಸುವುದು, ಬಡಾವಣೆಯಲ್ಲಿ ಕಟ್ಟಿಗೆ ಕಳ್ಳತನ ಮಾಡಿ ಒಂದೆಡೆ ಸಂಗ್ರಹಿಸಿ. ಗೆಳೆಯರನ್ನು ಸತ್ತ ಹೆಣದಂತೆ ಅಣುಕು ಪ್ರದರ್ಶನ ಮಾಡುವುದು ಸೇರಿ ನಿತ್ಯ ವಿವಿಧ ಬಗೆಯ ಆಟ ಆಡುತ್ತಾ ಹಬ್ಬದ ರಂಗಿಗೆ ಮೆರಗು ಕೊಡುತ್ತಾರೆ.
ಹಬ್ಬದ ಸಂಭ್ರಮಕ್ಕೆ ತೊಡಕಾದ ಪರೀಕ್ಷೆ: ಹೋಳಿ ಹಬ್ಬ ಪ್ರತಿ ವರ್ಷ ಪರೀಕ್ಷೆ ಸಮಯದಲ್ಲಿಯೇ ಬರುತ್ತದೆ. ಶಾಲಾ ಮಕ್ಕಳಿಗೆ ಪ್ರತಿ ವರ್ಷ ಪರೀಕ್ಷೆ ಬಿಸಿ ತಾಕಿ ಹೋಳಿ ಹಬ್ಬದ ಉತ್ಸಾಹಕ್ಕೆ ಬ್ರೇಕ್ ಬಿದ್ದಂತಾಗಿದೆ. ಆದರೂ ಪರೀಕ್ಷೆಯ ಮಧ್ಯೆಯು ಸಂಜೆ ಗಲ್ಲಿ, ಗಲ್ಲಿಗಳಲ್ಲಿ ಹಲಗೆ ಬಾರಿಸುತ್ತಾ ಬಾಯಿ ಬಡಿದುಕೊಂಡು ಹೋಳಿ ಹಬ್ಬ ಆಚರಣೆಯಲ್ಲಿ ಅಷ್ಟಕಷ್ಟೆ ಎಂಬಂತೆ ಪಾಲ್ಗೊಳ್ಳುತ್ತಾರೆ.
ಭಾವೈಕ್ಯದ ಹೋಳಿ ಹಬ್ಬ: ಹೋಳಿ ಹುಣ್ಣಿಮೆ ಹಬ್ಬದ ಮೂರು ದಿನ ಮೊದಲು ರತಿ, ಕಾಮಣ್ಣರನ್ನು ಓಣಿಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುತ್ತಾರೆ. ಬಳಿಕ ಮಕ್ಕಳಾಗದ ಮಹಿಳೆಯರು, ಮದುವೆಯಾಗದ ತರುಣ, ತರುಣಿಯರು ವಿಶೇಷ ಪೂಜೆ ಸಲ್ಲಿಸಿ ಇಷ್ಠಾರ್ಥ ಸಿದ್ಧಿಗಾಗಿ ಮೊರೆ ಹೊಗುತ್ತಾರೆ. ಹುಣ್ಣಿಮೆ ದಿನ ಮಧ್ಯರಾತ್ರಿ ಕಾಮದಹನ ಮಾಡಿದ ಬಳಿಕ ಬೆಂಕಿಯ ಕೆಂಡವನ್ನು ಬೆಳಗ್ಗೆ ಮನೆಗೆ ತೆಗೆದುಕೊಂಡು ಹೋಗಿ ಕಡಲೆಕಾಳು, ಗೆಣಸು, ಉಳ್ಳಾಗಡ್ಡಿ ಬೇಯಿಸಿ ಪ್ರಸಾದ ಎಂದು ಸೇವಿಸುತ್ತಾರೆ. ಪ್ರತಿಷ್ಠಾಪಿತ ಮೂರ್ತಿಗಳನ್ನು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಂಚರಿಸುತ್ತಾರೆ. ಮೆರವಣಿಗೆಯಲ್ಲಿ ಬಾಯಿ ಬಡಿದುಕೊಳ್ಳುವುದು ಸೇರಿದಂತೆ ವಿವಿಧ ಅಣಕು ಪ್ರದರ್ಶನ ನೋಡುಗರನ್ನು ನಗೆಗಡಲಲ್ಲಿ ತೇಲಿಸುವಂತೆ ಮಾಡುತ್ತದೆ. ಪರಸ್ಪರ ಬಣ್ಣ ಎರಚಾಡಿ ಓಕಳಿಯಾಟದಲ್ಲಿ ಮಿಂದೆದ್ದು ರಂಗು ರಂಗಿನ ಹೋಳಿ ಹಬ್ಬ ಆಚರಿಸಿ ಸಂಭ್ರಮಿಸುವ ಕ್ಷಣ ನೋಡಲು ಕಣ್ಣೆರೆಡು ಸಾಲದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.