ಮಹಿಳೆಯರು ಹಕ್ಕು ಬಾಧ್ಯತೆ ಅರಿಯಲಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 16
ಮಹಿಳೆಯರು ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಸರಿಯಾಗಿ ಅರಿಯುವ ಮೂಲಕ ಸಮಸ್ಯೆಗಳ ಸುಳಿಯಿಂದ ಹೊರಬರುವ ಧೈರ್ಯ, ಆತ್ಮವಿಶ್ವಾಸ ಹೊಂದಬೇಕೆಂದು ನರೇಗಲ್ಲ ಸರ್ಕಾರಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಸುಜಾತಾ ಬರದೂರ ಕರೆ ನೀಡಿದರು.
ಅವರು ಸ್ಥಳೀಯ ತೋಂಟದಾರ್ಯ ಮಠದಲ್ಲಿ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದ 2162ನೇ ಶಿವಾನುಭವದಲ್ಲಿ ಈಚೆಗೆ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ದಿನಾಚರಣೆ ಮಹತ್ವ ಹಾಗೂ ಉದ್ದೇಶ ಕುರಿತು ಉಪನ್ಯಾಸ ನೀಡಿದರು. ಮಹಿಳಾ ದಿನಾಚರಣೆ ಕೇವಲ ಯಾಂತ್ರಿಕವಾಗಿ ಆಚರಿಸುವುದರಿಂದ ಅಥವಾ ಮಹಿಳಾ ದೌರ್ಜನ್ಯ ವಿರುದ್ಧ ಕೆಲವೊಂದು ಕಾಯ್ದೆಗಳನ್ನು ಜಾರಿಗೆ ತಂದು ಬಿಟ್ಟರೆ ಮಹಿಳೆಯರು ಸಮಸ್ಯೆಗಳಿಂದ ಮುಕ್ತರಾಗುವರೆಂಬ ಭಾವನೆ ಸಲ್ಲದು, ಮಹಿಳೆಯರ ಅಮೂಲಾಗ್ರ ಸಮಸ್ಯೆಗಳ ನಿವಾರಣೆಗೆ ಗಂಭೀರವಾದ ಪ್ರಯತ್ನಗಳು ಸ್ವಾಸ್ಥ ಸಮಾಜದ ಕರ್ತವ್ಯವಾಗಿ ಪರಿಗಣಿಸಲ್ಪಡಬೇಕು. ಮಹಿಳೆಯರ ಕುರಿತು ಸಮಾಜದಲ್ಲಿ ಗೌರವ ಭಾವನೆ ಬೆಳೆಯುವ ಸಂಸ್ಕಾರಯುತ ಸಮಾಜ ನಿರ್ಮಾಣ ನಾಗರಿಕ ಸಮಾಜದ ಮೊದಲ ಲಕ್ಷಣವಾಗಿದೆ. ಸ್ವತಃ ಮಹಿಳೆಯರು ತಮ್ಮ ವ್ಯಕ್ತಿತ್ವದ ಗೌರವ ಘಣತೆಯನ್ನು ಹೆಚ್ಚಿಸಿಕೊಳ್ಳುವ ಜತೆಗೆ ಇತರ ಮಹಿಳೆಯರ ವಿಶೇಷವಾಗಿ ಕೆಳಸ್ಥರದ ಬಡವರು ಹಾಗೂ ಮಧ್ಯಮ ವರ್ಗದಲ್ಲಿರುವ ಮಹಿಳೆಯರು, ಹೆಣ್ಣು ಮಕ್ಕಳ ಹಕ್ಕು ಬಾಧ್ಯತೆಗಳ ಕುರಿತು ಅರಿವು ಮೂಡಿಸಬೇಕು. ಇದು ಸ್ವಯಂಪ್ರೇರಿತವಾದ ಕಳಕಳಿಯ ಕೆಲಸವಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿ, ಮಹಿಳೆಯರ ಮೇಲಿನ ಗೌರವ ನೀಡಿಕೆ ಹಾಗೂ ಮಹಿಳಾ ದೌರ್ಜನ್ಯ ರಹಿತ ವ್ಯವಸ್ಥೆ ಎಂಬುದು ಸುಸಂಸ್ಕೃತ ಸಮಾಜದ ಲಕ್ಷಣವಾಗಿದೆ. ಅದು ಇಲ್ಲದೆ ಬರುವ ಸಾಮಾಜಿಕ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. 12ನೇ ಶತಮಾನದಲ್ಲಿ ಬರುವ ಬಸವಾದಿ ಶರಣರು ಹೆಣ್ಣೆಂಬುದು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ ಎಂಬುವ ಮೂಲಕ ಸಮಾಜದಲ್ಲಿ ಹೆಣ್ಣೆಂದರೆ ಇದ್ದ ಕೀಳರಿಮೆ ತೊಡೆದು ಹಾಕಿದರು. ಸಮಾನತೆ ಸಾರಿ ವರ್ಣವರ್ಗ ಲಿಂಗಭೇದ ರಹಿತ ಸಮಾಜ ಸ್ಥಾಪನೆಗೆ ಮುಂದಾದರು. ಅಂತಹ ಪರಿಕಲ್ಪನೆಯ ಸಮಾಜ ನಿರ್ಮಾಣ ಮಾತ್ರ ನಿಜವಾದ ಶೋಷಣೆ ರಹಿತ ಸಮಾಜವಾಗಬಲ್ಲದು ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ನೂತನ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ ಹಾಗೂ ಉಪಾಧ್ಯಕ್ಷ ಕೃಷ್ಣಾ ಪರಾಪುರ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಬಸವೇಶ್ವರರ ವಚನಗಳಲ್ಲಿ ಮನೋ ನಿಗ್ರಹದ ವಿಶ್ಷೇಷಣೆ ಎಂಬ ವಿಷಯ ಕುರಿತು ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನ ಪ್ರೊ. ಶರಣಪ್ಪ ಬಿಳೆಯಲಿ ಉಪನ್ಯಾಸ ನೀಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಕ್ಕ ಕುರಡಗಿ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿ ಚೇರ್ಮನ್ ಎಸ್.ಎನ್. ಆದಿ ಸ್ವಾಗತಿಸಿದರು. ಪ್ರಾ. ಪ್ರೇಮಾ ಹಂದಿಗೋಳ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

