ಗದಗ

ಜಿಲ್ಲಾದ್ಯಂತ ಸಂಭ್ರಮದ ರಂಗಿನೋಕುಳಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 17
ಗದಗ, ಬೆಟಗೇರಿ ಅವಳಿ (ಮಾ. 20ಕ್ಕೆ ಓಕುಳಿ)ನಗರವನ್ನು ಹೊರತುಪಡಿಸಿ ಜಿಲ್ಲೆಯ ಇನ್ನುಳಿದ ಎಲ್ಲಾ ಗ್ರಾಮಗಳಲ್ಲಿಯೂ ಸೋಮವಾರ ಸಂಭ್ರಮದ ಬಣ್ಣದಾಟವಾಡಿ ಹೋಳಿ ಹಬ್ಬ ಆಚರಿಸಲಾಯಿತು. ಬೆಳಗ್ಗೆಯೇ ಕಾಮದಹನ ಮಾಡುತ್ತಿದ್ದಂತೆ ಪ್ರಾರಂಭವಾಗುವ ಹೋಳಿ ಆಚರಣೆಯಲ್ಲಿ ಪರಸ್ಪರ ಎಲ್ಲರೂ ಬಣ್ಣ ಹಚ್ಚುವ ಮೂಲಕ ಆಚರಿಸಿದ್ದು ವಿಶೇಷವಾಗಿತ್ತು.
ಜಿಲ್ಲೆಯ ರೋಣ ತಾಲೂಕಿನ ಹಲವಾರು ಗ್ರಾಮಗಳು, ಗದಗ ಹಾಗೂ ನರಗುಂದ ತಾಲೂಕುಗಳಲ್ಲಿ ಸೋಮವಾರ ಯುವಕರು ಪರಸ್ಪರ ಬಣ್ಣ ಎರಚಿ ಸಂಭ್ರಮದ ಹೋಳಿ ಆಚರಿಸಿದರು. ಹಬ್ಬಗಳ ಸಾಲಿನಲ್ಲಿಯೇ ಗಂಡು ಮಕ್ಕಳ ಹಬ್ಬವೆಂದೇ ಪರಿಗಣಿಸ್ಪಡುವ ಹೋಳಿ ಹುಣ್ಣಿಮೆಗೆ ಬಿಸಿಲಿನ ಪ್ರಖರತೆ ಹೊರತುಪಡಿಸಿದಲ್ಲಿ, ಇನ್ನಾವುದೇ ಅಡೆ ತಡೆಗಳಿಲ್ಲದೇ ಸಂಭ್ರಮ ಮನೆ ಮಾಡಿತ್ತು.
ಸಾಂಸ್ಕೃತಿಕ ಕಾರ್ಯಕ್ರಮ: ಭಾನುವಾರ ಸಂಜೆಯಿಂದಲೇ ಆರಂಭಗೊಂಡ ಹೋಳಿ ಹುಣ್ಣಿಮೆ ಕಾರ್ಯಕ್ರಮ ಗ್ರಾಮದ ಹಲವು ಕಡೆಗಳಲ್ಲಿ ಕಾಮ-ರತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಾತ್ರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಾರ್ವಜನಿಕರು ಹಾಗೂ ಗ್ರಾಮಸ್ಥರೆಲ್ಲರೂ ಕೂಡಿ ಗ್ರಾಮದಲ್ಲಿರುವ ಎಲ್ಲ ಕಾಮ-ರತಿಗೆ ನಿಧನ ಹೊಂದಿದವರಿಗೆ ಸಲ್ಲಿಸುವ ಪ್ರಾರ್ಥನೆ ಹಾಗೂ ಹಲಗೆ ಬಾರಿಸುವುದು ಹಲವಾರು ಗ್ರಾಮಗಳಲ್ಲಿ ಇಂದಿಗೂ ಚಾಲನೆಯಲ್ಲಿದೆ.
ಗುಂಡಿನ ಗಮ್ಮತ್ತು ಜೋರಾಗಿತ್ತು: ಹೋಳಿ ಹುಣ್ಣಿಮೆಯು ಕೇವಲ ಬಣ್ಣಗಳಿಂದ ಮಾತ್ರವಲ್ಲ ಅದರೊಟ್ಟಿಗೆ ಗುಂಡಿನ ಗಮ್ಮತ್ತು ಬಲು ಜೋರಾಗಿತ್ತು. ಯುವಕರು ವೃದ್ಧರು ಎನ್ನುವ ಭೇದ ಭಾವವಿಲ್ಲದೆಯೇ ಎಲ್ಲರೂ ಒಂದೆಡೆ ಸೇರಿ ಹಬ್ಬ ಆಚರಿಸಿದರು. ಗ್ರಾಮೀಣ ಪ್ರದೇಶಗಳು ಸೇರಿದಂತೆ ಹಲವಡೆ ಹೋಳಿ ಹುಣ್ಣಿಮೆಯ ಅಂಗವಾಗಿ ಎಲ್ಲ ಮದ್ಯ ಅಂಗಡಿಗಳನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ತಮ್ಮ ತಯಾರಿಯಲ್ಲಿದ್ದು, ಮೊದಲೇ ಸಂಗ್ರಹಿಸಿಟ್ಟುಕೊಂಡ ಹಿನ್ನೆಲೆಯಲ್ಲಿ ಹಬ್ಬದ ಖುಷಿ ಮತ್ತಷ್ಟು ಗುಂಡಿನ ಗಮ್ಮತ್ತು ಮತ್ತಷ್ಟು ಕಿಕ್ ನೀಡಿತು.
ಗಮನ ಸೆಳೆದ ಹಾಡುಗಳು: ಹೋಳಿ ಹುಣ್ಣಿಮೆಯಲ್ಲಿ ಗ್ರಾಮೀಣ ಶೈಲಿಯ ವಿಶೇಷ ಹಾಡುಗಳಿಗೆ ಎಲ್ಲಿಲ್ಲದ ಬೇಡಿಕೆ, ಸುಗ್ಗಿಯ ಕಾಲವನ್ನು ಪೂರ್ಣಗೊಳಿಸಿರುವ ರೈತ ಸಮುದಾಯ ಈ ಹಬ್ಬದ ಸಂದರ್ಭದಲ್ಲಿ ತಮ್ಮಲ್ಲಿರುವ ಜನಪದ ಶೈಲಿಯ ಪದಗಳನ್ನು ಅತ್ಯಂತ ಏರು ಧ್ವನಿಯಲ್ಲಿ ಹಾಡುವ ಮೂಲಕ ಬಣ್ಣ ಆಡಲು ಬರುವ ಇನ್ನೊಂದು ತಂಡಕ್ಕೆ ಹಾಡಿನ ಮೂಲಕವೇ ಸವಾಲು ಹಾಕುತ್ತಾರೆ. ಇದಕ್ಕೆ ಎದುರಾಗುವ ಇನ್ನೊಂದು ತಂಡವೂ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತದೆಯಾದರೂ, ಆ ತಂಡವೂ ಇವರಿಗೆ ಹಾಡಿನ ಮೂಲಕವೇ ಉತ್ತರಿಸಬೇಕು. ಉತ್ತರಿಸದೇ ಹೋದಲ್ಲಿ (ಹಾಡು ಹಾಡದೇ ಹೋದಲ್ಲಿ) ಅವರು ಸೋತಂತೆ, ಅದಕ್ಕೆ ಅವರಿಗೆ ನೀಡುವ ಶಿಕ್ಷೆ ಮತ್ತಷ್ಟು ಬಣ್ಣ ಹಾಕುವುದು ಸೋತವರ ಮೇಲೆ ಮತ್ತಷ್ಟು ಬಣ್ಣ ಹಾಕಿ ಸಂಭ್ರಮಿಸುವುದು ಈ ಹಬ್ಬದ ಮತ್ತೊಂದು ವಿಶೇಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.