ಗದಗ

ಅನಿರೀಕ್ಷಿತ ಅಂಗವೈಕಲ್ಯಕ್ಕೆ ಅಂಜದ ಸುಮಿತ್ರಾ ಲಮಾಣಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 18
ಅವಳು 11 ವರ್ಷದ ಬಾಲೆ. ಎಲ್ಲರಂತೆ ಓದಬೇಕು, ಬರೆಯಬೇಕು ಎನ್ನುವ ತವಕದಲ್ಲಿದ್ದಾಳೆ. ಆದರೆ, 5 ವರ್ಷಗಳ ಹಿಂದೆ ವಕ್ಕರಿಸಿದ ಜ್ವರ ಆಕೆಯ ಕಾಲುಗಳು ಹಾಗೂ ಮಾತನ್ನೇ ಕಸಿದುಕೊಂಡು ಜೀವ ಹಿಂಡುತ್ತಿದೆ.
ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಸುಮಿತ್ರಾ ಲಮಾಣಿಯ ನೋವಿನ ಕಥೆ ಇದು. ಏನೂ ಅರಿಯದ ಬಾಲೆ ಒಂದೇ ಒಂದು ಜ್ವರದಿಂದಾಗಿ ಈಗ ಅಂಗವಿಕಲೆಯಂತೆ ಬದುಕಬೇಕಾಗಿದೆ.
ಅನಿರೀಕ್ಷತ ಅಂಗವೈಕಲ್ಯ: ಸುಮಿತ್ರಾ 4 ವರ್ಷದವರೆಗೂ ಎಲ್ಲರಂತೆಯೇ ಇದ್ದಳು, ಮುದ್ದಾಗಿ ಮಾತನಾಡುತ್ತಿದ್ದಳು. ಕುಲುಕುಲು ಓಡಾಡುತ್ತಾ ಆಟವಾಡುತ್ತಾ ಹೆತ್ತವರ ಕಣ್ಮಣಿಯಾಗಿದ್ದಳು. ಆಕಸ್ಮಿಕವಾಗಿ ಜ್ವರ ಬಂತು. ನಾಲ್ಕೈದು ದಿನಗಳಾದರೂ ಕಮ್ಮಿಯಾಗಲೇ ಇಲ್ಲ. ಕಂಗಾಲಾದ ಪಾಲಕರು ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರು. ಜ್ವರ ಕಮ್ಮಿಯಾಯಿತು. ಆದರೆ, ಹೆತ್ತವರಿಗೆ ದೊಡ್ಡ ಆಘಾತವೇ ಕಾದಿತ್ತು. ಮಗುವಿನ ಕೈಗಳು ಶಕ್ತಿ ಕಳೆದುಕೊಂಡವು. ಮಾತು ಸ್ಥಗಿತಗೊಂಡಿತು!
ಎದೆಗುಂದಿಲ್ಲ: ಕೆಲಸ ಮಾಡುತ್ತಿದ್ದ ಕೈಗಳು ಒಮ್ಮೆಲೇ ನಿಷ್ಕ್ರಿಯವಾಗಿದ್ದರಿಂದ ಈ ಬಾಲಕಿಯೂ ಆರಂಭದಲ್ಲಿ ಸಹಜವಾಗಿಯೇ ಆತಂಕಪಟ್ಟಿದ್ದಾಳೆ. ಆದರೆ, ಪರಿಸ್ಥಿತಿಗೆ ಒಗ್ಗಿಕೊಂಡು, ಕೈಗಳಲ್ಲಿ ಮಾಡಬೇಕಾದ ಕೆಲಸಗಳಿಗೆ ಕಾಲುಗಳನ್ನೇ ಬಳಸಲು ಆರಂಭಿಸಿದಳು. ಸದ್ಯ ತನ್ನ ಎಡಗಾಲಿನಿಂದ ಊಟ ಮಾಡುವ ಈಕೆ, ಬರೆಯಲೂ ಅದೇ ಕಾಲನ್ನು ಬಳಸುತ್ತಿದ್ದಾಳೆ. ಕೈಗಳು ನಿಷ್ಕ್ರಿಯವಾಗಿದ್ದರೂ ಕಲಿಯುವ ಆಸಕ್ತಿ ಕುಗ್ಗಿಲ್ಲ ಎಂಬುದನ್ನು ಆಕೆ, ತನ್ನನ್ನು ನೋಡಲು ಬರುವ ಎಲ್ಲರಿಗೂ ಕಾಲಿನಿಂದಲೇ ಬರೆದು ತೋರಿಸಿ, ಸಾಬೀತು ಮಾಡುತ್ತಿದ್ದಾಳೆ.
ಬಡ ಕುಟುಂಬ: ಗ್ರಾಮದ ರೂಪ್ಲಪ್ಪ ಹಾಗೂ ದೇವಕ್ಕ ದಂಪತಿಗೆ ನಾಲ್ವರು ಮಕ್ಕಳು. ಸುಮಿತ್ರಾ ಎರಡನೆಯವಳು. ಸದ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಳೆ. ಬಾಲಕಿಗೆ ಚಿಕಿತ್ಸೆ ಕೊಡಿಸಲು ಈಕೆಯ ಪಾಲಕರು ರಾಜ್ಯದ ಹಲವಾರು ಆಸ್ಪತ್ರೆಗಳಿಗೆ ಸುತ್ತಾಡಿ ಸುಸ್ತಾಗಿದ್ದಾರೆ. ರೈತರ ಜಮೀನುಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುವ ಅವರ ಸಂಪಾದನೆ ನಿತ್ಯದ ಹೊಟ್ಟೆಪಾಡಿಗೇ ಹರೋಹರ. ಉತ್ತಮ ಚಿಕಿತ್ಸೆ ಕೊಡಿಸಿದರೆ ತಮ್ಮ ಮಗಳು ಸಂಪೂರ್ಣ ಗುಣವಾಗುವ ನಂಬಿಕೆ ಹಾಗೂ ಭರವಸೆ ಇದ್ದು, ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.