ಗದಗ

ಗದಗದಲ್ಲಿ ಸಂಭ್ರಮದ ರಂಗಿನೋಕುಳಿ

Published On :

ಗದಗ: 5 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಪ್ರತಿಷ್ಠಾಪಿಸಲಾದ ಕಾಮ-ರತಿಯ ಹಬ್ಬವಾಗಿರುವ ಹೋಳಿ ಹುಣ್ಣಿಮೆಯ ನಂತರ ಅವಳಿ ನಗರದ ಜನತೆ ಗುರುವಾರ ನಗರಾದ್ಯಂತ ಕಾಮ-ರತಿಯ ಮೆರವಣಿಗೆ ನಡೆಸಿ ಸಂಭ್ರಮದ ರಂಗಪಂಚಮಿ ಆಚರಿಸಿದರು.
ಒಂದು ಕಡೆ ಬಿಸಿಲಿನ ಪ್ರಖರತೆ ಒಂದೆಡೆಯಾದರೆ ಮತ್ತೊಂದೆಡೆ ಹೆಣ್ಣು-ಗಂಡು ಎಂಬ ಭೇದಭಾವವಿಲ್ಲದೇ ಎಲ್ಲ ವರ್ಗದ ಜನರು ಬಣ್ಣಗಳಲ್ಲಿ ಮಿಂದೆದ್ದು ಹೋಳಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಅವಳಿ ನಗರದಲ್ಲಿ ಬುಧವಾರ ಸಂಜೆಯಿಂದಲೇ ಕೆಲವು ಓಣಿಗಳಲ್ಲಿ ಹೋಕಳಿ ಪ್ರಾರಂಭವಾಯಿತು. ನಗರದ ಟ್ಯಾಗೋರ ರೋಡ್, ಸಿಕ್ಕಲಗಾರ ಓಣಿ, ಗಾಂಧಿ ವೃತ್ತ, ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಕೆಲವು ಓಣಿಗಳಲ್ಲಿ, ಮಹೇಂದ್ರಕರ ವೃತ್ತ, ಎಪಿಎಂಸಿ ಯಾರ್ಡ್, ಗಂಗಿಮಡಿ, ಎಸ್.ಎಂ. ಕೃಷ್ಣಾ ನಗರದ ಕೆಲವು ಪ್ರದೇಶಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಬುಧವಾರ ಸಂಜೆಯಿಂದಲೇ ಬಣ್ಣದಾಟದಲ್ಲಿ ತೊಡಗಿದ್ದರು. ಇನ್ನು ಗ್ರಾಮೀಣ ಭಾಗದಿಂದ ನಗರಕ್ಕೆ ದುಡಿಯಲು ಬರುವ ಸಾರ್ವಜನಿಕರಿಗೆ ನಗರದ ಸಹಪಾಟಿಗಳೊಂದಿಗೆ ಬಣ್ಣವಾಡಿದ್ದು ಎಪಿಎಂಸಿ ಯಾರ್ಡ್‌ನಲ್ಲಿ ಸಾಮಾನ್ಯವಾಗಿತ್ತು.
ತಾಳಕ್ಕೆ ತಕ್ಕಂತೆ ಹೆಜ್ಜೆ: ಬೆಳಗ್ಗೆಯಿಂದಲೇ ಪ್ರಾರಂಭವಾದ ರಂಗಪಂಚಮಿಯು ಬಿರುಬಿಸಿಲ ನಡುವೆಯೂ ಉತ್ಸಾಹದಿಂದ ಭಾಗವಹಿಸಿದ ಸಾರ್ವಜನಿಕರು ತಮ್ಮ ಸ್ನೇಹಿತರು, ಕುಟುಂಬ ವರ್ಗದವರ ಮನೆಗಳಿಗೆ ತೆರಳಿ ಬಣ್ಣ ಎರಚುವ ಮೂಲಕ ರಂಗಪಂಚಮಿ ಆಚರಿಸಿದರು. ಇನ್ನು ಯುವತಿಯರ, ಮಹಿಳೆಯರ ತಂಡಗಳೂ ತಮ್ಮ ತಮ್ಮ ಓಣಿಗಳಲ್ಲಿರುವ ಮನೆಗಳಲ್ಲಿ ತೆರಳಿ ಬಣ್ಣ ಹಾಕಿದ್ದು ವಿಶೇಷವಾಗಿತ್ತು. ಇನ್ನು ಕೆಲವು ಯುವಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ ಸ್ನೇಹಿತೆಯರಿಗೂ ಬಣ್ಣ ಎರಚಿ ಸಂಭ್ರಮಿಸಿದರು.
ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ, ಮುಖ್ಯ ರಸ್ತೆಗಳು ಸೇರುವ ವೃತ್ತಗಳಲ್ಲಿ  ಯುವಪಡೆಯ ಹಲಗೆ ಬಡೆಯುವ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುವ ದೃಶ್ಯ ವಿಶೇಷವಾಗಿತ್ತು.
ಮೆರವಣಿಗೆ: ಮಧ್ಯಾಹ್ನದ ನಂತರ ನಗರದ ಪ್ರತಿಷ್ಠಿತ ಕಾಮ-ರತಿಯರ ಮೂರ್ತಿಗಳ ಮೆರವಣಿಗೆ ನೆರೆದ ಸಾರ್ವಜನಿಕರ ಸಮ್ಮುಖದಲ್ಲಿ ದಾಸರಗಲ್ಲಿ, ಚಂದ್ರಸಾಲಿ ಕಿಲ್ಲಾ, ಹಳೇ ಸರಾಫಬಜಾರ, ಖಾನತೋಟ, ಹನುಮನ ಗರಡಿ, ಗಂಗಾಪುರಪೇಟೆ, ಮದ್ಲಿಯವರ ಓಣಿ ಮುಂತಾದ ಕಡೆಗಳಲ್ಲಿ ಪ್ರತಿಷ್ಠಾಪಿಸಲಾದ ಕಾಮ-ರತಿಯರ ಅಲಂಕೃತ ಮೂರ್ತಿಗಳ ಮೆರವಣಿಗೆಗೆ ವಿವಿಧ ರೀತಿಯ ಮಜಲು, ಹಲಗೆ, ರಗ್ಗಹಲಗೆಯ ಬಡಿತದ ಮಧ್ಯ ಪ್ರಾರಂಭಿಸಲಾಯಿತು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸೇವೆ ಪಡೆದು ಆಯಕಟ್ಟಿನ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಲ್ಲಲ್ಲಿ ಸಮಾಜ ಘಾತುಕ     ಶಕ್ತಿಗಳ ಮಟ್ಟ ಹಾಕುವ ನಿಟ್ಟಿನಲ್ಲಿ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮತೆಯನ್ನು ಅರಿತು ವಿಡಿಯೋ ಚಿತ್ರಿಕರಣ ವ್ಯವಸ್ಥೆ ಮಾಡಲಾಗಿತ್ತು. ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.