ಪರಂಪರಾಗತ ಜ್ಞಾನ ಹೊಂದಿ
ಶಿಗ್ಗಾಂವಿ: ಸಾಮಾನ್ಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಪರಂಪರಾಗತ ಜ್ಞಾನ ಮಕ್ಕಳು ಮತ್ತು ಯುವಜನತೆಗೆ ನಾಟುವಂತೆ ಹಸ್ತಾಂತರಿಸುವ ಅನಿವಾರ್ಯತೆ ನಮ್ಮ ಮುಂದೆ ಇದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದಿಂದ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆ ಹಾಗೂ ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸತ್ವ ಸಂಸ್ಕೃತಿ, ಸದ್ಭಾವನೆ ಹುಟ್ಟಿಸುವಂಥ ಪರಂಪರಾಗತ ಜ್ಞಾನವನ್ನು ಯುವಜನತೆಯಲ್ಲಿ ಹುಟ್ಟು ಹಾಕುವ ಅಗತ್ಯತೆ ಇಂದಿನ ಪರಿಸ್ಥಿತಿಯಲ್ಲಿ ಮುಖ್ಯವಾಗಿದೆ ಎಂದರು.
ಪ್ರಾದೇಶಿಕವಾಗಿ ಸಾಕಷ್ಟು ಭಿನ್ನತೆಗಳನ್ನು ರಂಗೋಲಿ ಕಲೆಯಂಥ ಪರಂಪರಾ ಜ್ಞಾನದಲ್ಲಿ ಕಾಣುತ್ತೇವೆ. ಇದರ ಕುರಿತು ಯುವ ಸಂಶೋಧಕರು ದೃಷ್ಟಿ ಹಾಯಿಸಿ ವಿಭಿನ್ನ ಆಯಾಮಗಳ ಹಲವು ಬಗೆಯ ರಂಗೋಲಿ ಕಲೆಗಳ ಬಗ್ಗೆ ಅಧ್ಯಯನ ನಡೆಸಿ, ಅವುಗಳಲ್ಲಿ ಅಡಗಿರುವ ಭಿನ್ನತೆಗಳನ್ನು ಜಗತ್ತಿಗೆ ತಿಳಿಸುವ ಕಡೆಗೆ ಸಾಗುವಂತೆ ಸಂಶೋಧಕರಿಗೆ ಕಿವಿಮಾತು ಹೇಳಿದರು. ಜೀವನದ ಸಂಕೀರ್ಣತೆ, ಕೂಡಿ ಬಾಳುವ ಹಂಚಿ ನಲಿಯುವಂಥ ಜನರ ಸಂವೇದನೆಗಳು ಸೃಜನಶೀಲತೆಯಿಂದ ಕೂಡಿರುವ ರಂಗೋಲಿಯಿಂದ ಅಭಿವ್ಯಕ್ತಗೊಳ್ಳುತ್ತದೆ. ರಂಗೋಲಿ ನಿತ್ಯ ನೂತನ ಕಲೆ ಇದು ಅಂಗಳ, ಗೋಡೆ, ನಿತ್ಯ ಬಳಸುವ ಗೃಹೋಪಯೋಗಿ, ಕೃಷಿ ಉಪಯೋಗಿ ಪರಿಕರಗಳ ಮೇಲೆ ಮೂಡುವುದನ್ನು ಕಾಣಬಹುದು ಎಂದು ಹೇಳಿದರು. ಹಾವೇರಿ ಜಿಲ್ಲಾ ವಾರ್ತಾಧಿಕಾರಿ ಜುಂಜಣ್ಣ ಮಾತನಾಡಿ, ಜನಪದ ಕಲೆ ಮತ್ತು ಪರಂಪರಾಗತ ಜ್ಞಾನವನ್ನು ಪೋಷಿಸುವಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಶ್ರಮ ವಹಿಸುತ್ತಿದೆ. ಅಳಿವಿನ ಅಂಚಿನಲ್ಲಿರುವ ಎಷ್ಟೋ ಪರಂಪರಾಗತ ಜ್ಞಾನವನ್ನು ಸಮಾಜದಿಂದ ಹೆಕ್ಕಿ ತೆಗೆದು ಸಂರಕ್ಷಿಸುವ ನಿಟ್ಟಿನಲ್ಲಿ ಅಣಿಯಾಗಿರುವ ವಿಶ್ವವಿದ್ಯಾಲಯದ ಎಲ್ಲ ಕಾರ್ಯಗಳು ಸಾಕಾರಗೊಳ್ಳಲಿ ಎಂದು ಹಾರೈಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಮಾತನಾಡಿದರು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಶೃತಿ ವೆಂಕಟೇಶ ರಾಯ್ಕರ್, ದ್ವಿತೀಯ ಸಂಜೀವಗೌಡ ಬ. ಪಾಟೀಲ್, ತೃತೀಯ ಕಾಮಾಕ್ಷಿ ರಾಯ್ಕರ್ ಮತ್ತು ಮಂಜುಳಾ ಬಡಿಗೇರ ಹಂಚಿಕೊಂಡರು. ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಉತ್ತರಕನ್ನಡ ಖ್ಯಾತ ರಂಗೋಲಿ ಕಲಾವಿದೆ ಹನುಮಿಕ್ಷೇತ್ರ ಗೌಡ ಗಾಮೊಕ್ಕಲಿಗ, ಕುಮಟಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರೋಹಿತ್ ದಾಸ ನಾಯಕ ಹಾಗೂ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ರಂಗೋಲಿ ಕಲಾವಿದರು ಮತ್ತು ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. ಕುಲಸಚಿವ ಡಾ. ಡಿ.ಬಿ. ನಾಯಕ ಸ್ವಾಗತಿಸಿದರು. ಸಣ್ಣಯ್ಯ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಮರವಂತೆ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

