20 ನಿಮಿಷ 20 ಸುದ್ದಿ
ಹಾವೇರಿ: ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಮತ ಹಾಕುವಂತೆ ಬಿಜೆಪಿ ಶಹರ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶನಿವಾರ ನಗರದಲ್ಲಿ ಮನೆಮನೆ ಪ್ರಚಾರ ಕೈಗೊಂಡು ಮನವಿ ಮಾಡಿದರು. ನಗರದ 11ನೇ ವಾರ್ಡ್ನ ಮುಲ್ಲಾನಕೆರೆ, ಬಸವೇಶ್ವರ ನಗರ ಎ ಬ್ಲಾಕ್, ಬಿ ಬ್ಲಾಕ್, ವಿದ್ಯಾನಗರದಲ್ಲಿ ಪ್ರಚಾರ ಮಾಡಲಾಯಿತು. ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಕಾರ್ಯಕಾರಿಣಿ ಸದಸ್ಯ ನಾಗೇಂದ್ರ ಕಟಕೋಳ, ಲಲಿತಾ ಗುಂಡೆನಹಳ್ಳಿ, ಸುರೇಶ ದೊಡ್ಡಮನಿ, ಹನುಮಂತ ನಾಯಕ ಬದಾಮಿ, ಶಿವಬಸಪ್ಪ ವನ್ನಳ್ಳಿ, ಜಗದೀಶ ಮಲಗೋಡ, ನಿರಂಜನ ಹೇರೂರ, ಕರಬಸಪ್ಪ ಹಳದೂರ, ಹನುಮಂತಪ್ಪ ದೇವಗಿರಿ, ಸತೀಶ ಹಾವೇರಿ, ಪರಶುರಾಮ ಮೈಲಾರಪ್ಪನವರ, ಇರ್ಫಾನ್ ಪಠಾಣ, ಉಮಾಪತಿ ಹೂಲಿಕಟ್ಟಿ, ಚಂದ್ರು ಏರೀಸೀಮಿ, ದಾನಪ್ಪ ಜುಗಾಂವ ಪಾಲ್ಗೊಂಡಿದ್ದರು.
ಕಾಂಗ್ರೆಸ್ಗೆ ಗೆಲವು ಖಚಿತ:ಅಜಯಕುಮಾರ ಸರನಾಯಕ
ನರಗುಂದ: ದೇಶದಲ್ಲಿ ಮೋದಿ ಅಲೆ ಇಲ್ಲ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಹೇಳಿದರು. ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುಪಿಎ ಸರ್ಕಾರ 10 ವರ್ಷದಲ್ಲಿ ನೂರಾರು ಯೋಜನೆ ಅನುಷ್ಠಾನಕ್ಕೆ ತಂದು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದು, ಅದೆಲ್ಲ ನಮಗೆ ಮತಗಳಾಗಿ ಪರಿವರ್ತನೆಯಾಗಲಿವೆ ಎಂದರು. ಎಸ್.ಆರ್. ಪಾಟೀಲ, ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ಜೆ.ಎಸ್. ಗಡ್ಡದೇವರಮಠ, ಬಿ.ಆರ್. ಯಾವಗಲ್, ಚಂಬಣ್ಣವ ವಾಳದ, ದಶರಥ ಗಾಣೆಗೇರ, ವಿಠಲ ಶಿಂಧೆ, ಎಫ್.ವೈ. ದೊಡಮನಿ, ರಾಜು ಕಲಾಲ, ಸಿ.ಬಿ. ಪಾಟೀಲ, ದ್ಯಾಮಣ್ಣ ಸವದತ್ತಿ ಮುಂತಾದವರು ಉಪಸ್ಥಿತರಿದ್ದರು.
ಶಿವಕುಮಾರ ಉದಾಸಿ ಬೆಂಬಲಿಸಿ: ಶ್ರೀರಾಮುಲು
ಮುಂಡರಗಿ: ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರನ್ನು ಬೆಂಬಲಿಸಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಗೆ ಮನವಿ ಮಾಡಿದರು.ಶನಿವಾರ, ತಾಲೂಕಿನ ಕೊರ್ಲಹಳ್ಳಿ ಹತ್ತಿರ ತುಂಗಭದ್ರಾ ನದಿ ಪಕ್ಕದ ಮದಲಗಟ್ಟಿ ಹನುಮಂತ ದೇವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಮೂರು ಗುಂಪುಗಳಾಗಿದ್ದ ಬಿಜೆಪಿ ಒಗ್ಗೂಡಿದೆ ಎಂದರು. ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ಶಾಂತಾ, ನೇಮಿರಾಜ ನಾಯಕ, ಚಂದ್ರಾ ನಾಯಕ, ಸಣ್ಣಫಕ್ಕೀರಪ್ಪ, ಕೆ.ವಿ. ಹಂಚಿನಾಳ, ಸೀತಾರಾಮರಾಜು, ಸುರೇಶ ಜೈನ್, ಮದರಸಾಬ್ ಸಿಂಗನಮಲ್ಲಿ, ಎಂ.ಡಿ. ಪಾಟೀಲ ಇದ್ದರು.
ಸೇರ್ಪಡೆ...
ವಿಧಾನ್ಪರಿಷತ್ ಮಾಜಿ ಸದಸ್ಯ, ಮುಖ್ಯ ಸಚೇತಕ ಹಿರೇಕೆರೂರಿನ ಡಿ.ಎಂ. ಸಾಲಿ ಜೆಡಿಎಸ್ ತೊರೆದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಸಮ್ಮುಖ ಕಾಂಗ್ರೆಸ್ ಸೇರಿದರು. ಮುಖಂಡರು ಇದ್ದರು.
ಶಾಸಕ ನಾಗೇಂದ್ರ ಬೆಂಬಲಿಗರು ಬಿಜೆಪಿ ಸೇರ್ಪಡೆ
ಕೂಡ್ಲಿಗಿ: ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಪುನಃ ತಮ್ಮ ಬೆಂಬಲಿಗರನ್ನು ತೆರೆ ಮರೆಯಲ್ಲಿ ಕುಳಿತು ಬಿಜೆಪಿ ಸೇರಿಸುತ್ತಿದ್ದಾರೆ. ಸೋಮವಾರ ಶ್ರೀರಾಮುಲು ನೇತೃತ್ವದಲ್ಲಿ ನಾಗೇಂದ್ರ ಬೆಂಬಲಿಗರು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ನಾಗೇಂದ್ರರನ್ನು ಗೆಲ್ಲಿಸಿದ್ದ ಮುಖಂಡರು, ಕಾರ್ಯಕರ್ತರು ಬೇಲೆಕೇರಿ ಪ್ರಕರಣದಲ್ಲಿ ನಾಗೇಂದ್ರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರಿಂದ ತಟಸ್ಥರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಬೆಂಬಲಿಸುವಂತೆ ಶಾಸಕ ನಾಗೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಮಾ. 24ರಂದು ಎಂ.ಬಿ. ಅಯ್ಯನಹಳ್ಳಿಯಲ್ಲಿ ಶಾಸಕರ ಬೆಂಬಲಿಗರು ಶ್ರೀರಾಮುಲು ನೇತೃತ್ವದಲ್ಲಿ ಸೇರಲಿದ್ದಾರೆಂಬುದನ್ನು ಶಾಸಕ ಬಿ. ನಾಗೇಂದ್ರ ಬೆಂಬಲಿಗರು ಖಚಿತ ಪಡಿಸಿದ್ದಾರೆ. ಮೃತ್ಯುಂಜಯ ಜಿನಗಾ, ತಿಪ್ಪೇಸ್ವಾಮಿ ಪಟ್ಟಣದಲ್ಲಿ ಶನಿವಾರ ಗುಪ್ತವಾಗಿ ನಾಗೇಂದ್ರ ಬೆಂಬಲಿಗರ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ.
ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.30 ಲಕ್ಷ ವಶ
ಹುಬ್ಬಳ್ಳಿ: ದಾಖಲೆ ಇಲ್ಲದೆ ಬೊಲೆರೋದಲ್ಲಿ ಸಾಗಿಸುತ್ತಿದ್ದ ರು. 2.30 ಲಕ್ಷ ನಗದನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹುಬ್ಬಳ್ಳಿ ಸಮೀಪದ ಅಗಡಿ ಕ್ರಾಸ್ ಚೆಕ್ಪೋಸ್ಟ್ ಬಳಿ ಶನಿವಾರ ವಶಪಡಿಸಿಕೊಂಡಿದ್ದಾರೆ. ಬೊಲೆರೋ ಉತ್ತರ ಕನ್ನಡ ಜಿಲ್ಲೆ ಶಿರಸಿಯಿಂದ ಇಳಕಲ್ಗೆ ಹೊರಟಿತ್ತು. ವಾಹನ ತಪಾಸಣೆ ನಡೆಸಿದಾಗ, ಶಿರಸಿ ನಿವಾಸಿ ರಾಮಕೃಷ್ಣ ಕೊರವರ, ವಾಹನ ಚಾಲಕ ಮಂಜುನಾಥ ಪಿಳ್ಳಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ ಸಿಕ್ಕಿದೆ. ಹೊಸ ಮನೆ ಕಟ್ಟುತ್ತಿರುವ ರಾಮಕೃಷ್ಣ ಇಳಕಲ್ನಿಂದ ಗ್ರಾನೈಟ್ ತರಲು ವಾಹನದಲ್ಲಿ ಹಣ ಒಯ್ಯುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಸಿಪಿಐ ಎಂ.ಪಿ. ಸರವಗೋಳ, ಕನಕಣ್ಣವರ, ಪಿ.ಎಸ್. ಬೆಳಗಾಂವಕರ, ನಾರಾಯಣ ಹಿರೇಹೊಳೆ ಇದ್ದರು.
ಜಾಗೃತಿಗೆ ನಗರಸಭೆಯಿಂದ ಮಾನವ ಸರಪಳಿ
ಹಾವೇರಿ: ಮತದಾರರಲ್ಲಿ ಜಾಗೃತಿ ಮೂಡಿಸಲು ಇಲ್ಲಿನ ನಗರಸಭೆ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿದ್ಧಪ್ಪ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಗಮನ ಸೆಳೆಯಲಾಯಿತು. ಸ್ಥಳೀಯ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಜಾಥಾಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕೆ.ಬಿ. ಅಂಜನಪ್ಪ ಚಾಲನೆ ನೀಡಿದರು. ಶಿವಕುಮಾರಯ್ಯ, ಪಂಪನಗೌಡ ಮೇಲ್ಸಿಮೆ, ಡಾ. ಐ.ಎ. ಲೋಕಾಪುರ, ಎಂ.ಎನ್. ಮಾಳಿಗೇರ, ವಿಜಯಕುಮಾರ, ಡಿ.ಎಚ್. ಲಲಿತಾ, ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಎಂ. ಜುಂಜಣ್ಣ, ಎಸ್.ಎಸ್. ಅಡಿಗ ಇದ್ದರು. ಮತದಾನ ಜಾಗೃತಿ ಜಾಥಾ ನಗರದಲ್ಲಿ ಸಂಚರಿಸಿತು. ಬಳಿಕ ಮಾನವ ಸರಪಳಿ ರಚಿಸಲಾಯಿತು.
ಗಡಿ ಭಾಗದ ಸಂಚಾರಕ್ಕೆ ಗುರುತಿನ ಚೀಟಿ ಕಡ್ಡಾಯ: ಡಿಸಿ
ಬಳ್ಳಾರಿ: ಲೋಕಸಭಾ ಚುನಾವಣೆ ನಿಮಿತ್ತ ನೆರೆಯ ಆಂಧ್ರಪ್ರದೇಶ ರಾಜ್ಯದ ಗಡಿ ಪ್ರದೇಶದಿಂದ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಲಿರುವ ಮತ್ತು ಕರ್ನಾಟಕ ರಾಜ್ಯದ ಗಡಿ ಪ್ರದೇಶದಿಂದ ಆಂಧ್ರಪ್ರದೇಶಕ್ಕೆ ತೆರಳುವ ಸಾರ್ವಜನಿಕರು ತಪ್ಪದೇ ತಮ್ಮೊಂದಿಗೆ ಗುರುತಿನ ಚೀಟಿಯನ್ನು ಹೊಂದಿರಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸೂಚನೆಯನ್ನು ನೀಡಿದ್ದಾರೆ. ಈ ಕುರಿತುಪ್ರಕಟಣೆಯನ್ನು ನೀಡಿರುವ ಅವರು, ಲೋಕಸಭಾ ಚುನಾವಣೆಯನ್ನು ನ್ಯಾಯ ಸಮ್ಮತ ಹಾಗೂ ಮುಕ್ತವಾಗಿ ನಡೆಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಆಂಧ್ರ ಮತ್ತು ಕರ್ನಾಟಕ ರಾಜ್ಯದ ಚೆಕ್ಪೋಸ್ಟ್ ಸಿಬ್ಬಂದಿ ಮತ್ತು ಅಧಿಕಾರಿಗಳು ಯಾವುದಾದರು ವ್ಯಕ್ತಿಗಳ ಮೇಲೆ ಸಂಶಯ ಪಟ್ಟಲ್ಲಿ ಅಂತಹವರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ತನಿಖೆ ಮುಗಿದ ನಂತರ ಬಿಡುಗಡೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.
ಕುಟುಂಬ ರಾಜಕಾರಣ:ದೇಶಪಾಂಡೆ ಹೊರತಲ್ಲ
ಮುಂಡಗೋಡ: ಉ.ಕ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿಲ್ಲೆ ಜನರಿಗೆ ಪರಿಚಯವಿಲ್ಲದವರು. ಆರ್.ವಿ. ದೇಶಪಾಂಡೆ ಪುತ್ರ ಎನ್ನುವುದೇ ಅವರ ಅರ್ಹತೆ. ದೇಶಪಾಂಡೆ ಕುಟುಂಬ ರಾಜಕಾರಣಕ್ಕೆ ಹೊರತಾಗಿಲ್ಲ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಜಿ. ನಾಯ್ಕ ಲೇವಡಿ ಮಾಡಿದ್ದಾರೆ. ಚುನಾವಣಾ ನಿಮಿತ್ತ ಪಟ್ಟಣದ ಭಟ್ಕಳ ಸಂಕೀರ್ಣದಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ, ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಶಾಂತ ದೇಶಪಾಂಡೆ ಜಿಲ್ಲೆಯ ಬಗ್ಗೆ ಏನು ಅರಿತಿದ್ದಾರೆ ಎಂದು ಪ್ರಶ್ನಿಸಿದ ಅವರು, ಬೃಹತ್ ಕೈಗಾರಿಕೆ ಮಂತ್ರಿಯಾಗಿದ್ದ ಆರ್.ವಿ. ದೇಶಪಾಂಡೆ ಹೊಸ ಕೈಗಾರಿಕೆ ತರುವುದು ಹೋಗಲಿ ಇದ್ದ ಕಾರ್ಖಾನೆ ಮುಚ್ಚುವ ಕೆಲಸ ಮಾಡಿದ್ದಾರೆ. ಅನುದಾನ ಸಮರ್ಪಕವಾಗಿ ಬಳಕೆ ಮಾಡಲಾಗದ ಸಂಸದ ಅನಂತಕುಮಾರ ಅವರನ್ನು ಜನ ಈ ಬಾರಿ ತಿರಸ್ಕರಿಸಲಿದ್ದಾರೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಣ್ಣ ಕುನ್ನೂರು, ಮುನಾಫ್ ಮಜರ್ ಮುಂತಾದವರಿದ್ದರು.
ಬಸಾಪಟ್ಟಣದಲ್ಲಿ ಸಂಗಣ್ಣ ಕರಡಿ ಮತ ಯಾಚನೆ
ಗಂಗಾವತಿ: ಕೊಪ್ಪಳ ಲೋಕಸಭೆ ಚುನಾವಣೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ, ಶಾಸಕ ಕರಡಿ ಸಂಗಣ್ಣ ಅವರು ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಮತದಾರರಲ್ಲಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೀನ ದಲಿತರ ಉದ್ಧಾರ ಅಲ್ಲದೆ ದಿನನಿತ್ಯದ ಜೀವನಕ್ಕೆ ಅವಶ್ಯವಿರುವ ಪಡಿತರವನ್ನು ಕಡಿಮೆ ದರದಲ್ಲಿ ನೀಡಲಾಗುತ್ತದೆ. ಕಾರಣ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ತಮ್ಮನ್ನು ಚುನಾಯಿಸಬೇಕೆಂದು ಕೋರಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದರಾಮಸ್ವಾಮಿ, ಎಚ್. ಗಿರೇಗೌಡ ಉಪಸ್ಥಿತರಿದ್ದರು.
ಮೋದಿ ಕೋಮುವಾದಿ: ಎಚ್.ಆರ್. ಶ್ರೀನಾಥ
ಗಂಗಾವತಿ: ನರೇಂದ್ರ ಮೋದಿ ಕೋಮವಾದಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಹೇಳಿದರು. ನಗರದ ಕೊಪ್ಪಳ ರಸ್ತೆಯ ಪಾಡಗುತ್ತಿ ಭವನದಲ್ಲಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದರು. ಮೋದಿ ಪ್ರಧಾನಿಯಾದರೆ ದೇಶದಲ್ಲಿ ಅಶಾಂತಿ ಉಂಟಾಗುತ್ತದೆ. ಇಂದಿರಾ ಗಾಂಧಿ ಮನೆತನ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ ಎಂದು ಸ್ಮರಿಸಿದರು. ಅಭ್ಯರ್ಥಿ ಬಸವರಾಜ ಹಿಟ್ನಾಳ ಮಾತನಾಡಿದರು. ಯಮನೂರಪ್ಪನಾಯಕ ಸಿಂಗನಾಳ, ರೆಡ್ಡಿ ಶ್ರೀನಿವಾಸ, ಅಮರಜ್ಯೋತಿ ದುರುಗಪ್ಪ, ಬಿ. ಲಿಂಗರಾಜ, ಶೇಖದೌಲತ್ಸಾಬ, ಬಸವರಾಜಸ್ವಾಮಿ ಮಳೇಮಠ, ಕೃಷ್ಣಪ್ಪ ನಾಯಕ, ವೀರಭದ್ರಪ್ಪ ನಾಯಕ, ಜೋಗದ ಹನುಮಂತಪ್ಪನಾಯಕ ಇದ್ದರು.
ಹೊಳೆಆಲೂರಲ್ಲಿ ಮತದಾನ ಜಾಗೃತಿ ಜಾಥಾ
ಹೊಳೆಆಲೂರು: ಪಟ್ಟಣದ ಮುಖ್ಯ ಬಜಾರದಲ್ಲಿರುವ ಸರ್ಕಾರಿ ಹಿರಿಯ ಗಂಡು ಮಕ್ಕಳ ಮತ್ತು ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಮಂಗಳವಾರ ಗ್ರಾಮದಲ್ಲಿ ಮತದಾನ ಕುರಿತು ಜಾಗೃತಿ ಜಾಥಾ ಕೈಗೊಂಡಡರು. ಜಾಥಾ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ನಮ್ಮ ಹಕ್ಕು ಹಾಗೂ ವಿವಿಧ ಜಯ ಘೋಷಗಳನ್ನು ಕೂಗುತ್ತಾ ಮತದಾರರಿಗೆ ಮತದಾನದ ಹಕ್ಕನ್ನು ಚಲಾಯಿಸುವ ಕುರಿತು ತಿಳಿವಳಿಕೆ ಹಾಗೂ ಮತದಾನದ ಮಹತ್ವ ಅರಿಯಬೇಕೆಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಗಂಡು ಮಕ್ಕಳ ಮತ್ತು ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.
ಬಿಜೆಪಿ, ಕಾಂಗ್ರೆಸ್ನಿಂದ ಜನ ಬೇಸತ್ತಿದ್ದಾರೆ: ಅನಿಲ್
ಶಿರಸಿ: ಬಿಜೆಪಿ, ಕಾಂಗ್ರೆಸ್ ಖೋಖೋ ಆಟದಲ್ಲಿ ನಿರತವಾಗಿವೆ. ಜನರು ಇದರಿಂದ ಭ್ರಮನಿರಸನಗೊಂಡಿದ್ದಾರೆ. ಜನಸಾಮಾನ್ಯರಿಗಾಗಿ ಹುಟ್ಟು ಹಾಕಲಾಗಿರುವ ಬಹುಜನ ಮುಕ್ತಿ ಪಾರ್ಟಿ ಈ ಲೋಕಸಭಾ ಚುನಾವಣೆಯಲ್ಲಿ ಸಮಾಜವನ್ನು ಬದಲು ಮಾಡಲಿದೆ ಎಂದು ಪಕ್ಷದ ಪಶ್ಚಿಮ ಮಹಾರಾಷ್ಟ್ರ ವಿಭಾಗದ ಅಧ್ಯಕ್ಷ ಅನಿಲ್ ಮಾನೆ ಹೇಳಿದರು. ನಗರದ ಮಧುವನ ಆರಾಧನಾ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಿದು ಮೊದಲನೇ ಲೋಕಸಭಾ ಚುನಾವಣೆ. ದೇಶಾದ್ಯಂತ 400ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿದೆ ಎಂದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಹೊನ್ನಾವರದ ಅಲ್ವಿನ್ ಮಾರಿಯಾನ್ ಲೋಪೇಜ್ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ ಎಂದರು. ರಾಜ್ಯ ಸಂಚಾಲಕ ಸಿದ್ದಾರ್ಥ, ಸುಧಾಕರ ಜೋಗಳೇಕರ್, ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಯಾಕೋಬ್ ಷರೀಫ್ ಇದ್ದರು.
ಗಡಿಗೆ ಒಡೆಯುವ ಸಾಹಸ...
ಹಾನಗಲ್ಲದಲ್ಲಿ ಭಾನುವಾರ ಹೋಳಿ ಹಬ್ಬದ ರಂಗಿನ ರಾತ್ರಿ ಕಾರ್ಯಕ್ರಮದಲ್ಲಿ ಕದಂಬ ಯುವಶಕ್ತಿ ಸಂಘಟನೆ ಆಯೋಜಿಸಿದ್ದ ಗಡಿಗೆ ಒಡೆಯುವ ಸ್ಪರ್ಧೆ ಆಕರ್ಷಕವಾಗಿತ್ತು. ಭಾರತ ಯುವ ಸೇನೆ ತಂಡದ ಯುವಕರು 24 ಸೆಕೆಂಡ್ಗಳಲ್ಲಿ ಗಡಿಗೆ ಒಡೆದರು.
ಪೊಲೀಸರ ದಿಢೀರ್ ದಾಳಿ: ಅಕ್ರಮ ಮದ್ಯ ವಶ
ಗಜೇಂದ್ರಗಡ: ಸಮೀಪದ ಬೇವಿನಕಟ್ಟಿ ಗ್ರಾಮದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ ನಿಷೇದಿಸಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಶುಕ್ರವಾರ ಪ್ರತಿಭಟಿಸಿದ ವರದಿ ಪತ್ರಿಕೆಯಲ್ಲಿ ಪ್ರಕಟಗೊಂಡದ್ದನ್ನು ಅರಿತ ರೋಣ ಅಬಕಾರಿ ಸಬ್ ಇನ್ಸ್ಪೆಕ್ಟರ್ ಎಚ್.ಪಿ. ನಾಯಕ ನೇತೃತ್ವದ ತಂಡ ಶನಿವಾರ ದಿಢೀರ್ ಗ್ರಾಮಕ್ಕೆ ಭೇಟಿ ನೀಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಪಡಿಸಿಕೊಂಡರು. ಆರೋಪಿ ಪರಾರಿಯಾಗಿದ್ದು, ಪತ್ತೆಗಾಗಿ ಬಲೆ ಬೀಸಿದ್ದೇವೆ ಎಂದರು. ಸ್ಥಳಕ್ಕೆ ಆಗಮಿಸಿದ ಗಜೇಂದ್ರಗಡ ಠಾಣೆ ಪಿಎಸ್ಐ ಎಚ್.ಆರ್. ನಡಗಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಇಂದು ರೇಣುಕಾಚಾರ್ಯರ ಜಯಂತಿ ಆಚರಣೆ
ಲಕ್ಷ್ಮೇಶ್ವರ: ಪಟ್ಟಣದ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಮಾ. 23ರಂದು ಬೆಳಗ್ಗೆ 9ಕ್ಕೆ ಜ. ರೇಣುಕಾಚಾರ್ಯರ ಜಯಂತ್ಯುತ್ಸವ ಆಚರಿಸಲಾಗುವುದು ಹಾಗೂ ಹಾಲೇವಾಡಿ ಮಠದ ರೇಣುಕಾಚಾರ್ಯರರ ಮಂದಿರದಿಂದ ಮೆರವಣಿಗೆ ಹೊರಡಲಿದೆ ಎಂದು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎ. ಮುಳಗುಂದಮಠ ಹೇಳಿದರು. ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಹಾಗೂ ಪಟ್ಟಣದ ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಶ್ರೀಗಳು ವಹಿಸಲಿದ್ದಾರೆ ಎಂದು ತಿಳಿಸಿದರು. ಉಪಾಧ್ಯಕ್ಷ ಆರ್.ಸಿ. ಬಾಳೇಹಳ್ಳಿಮಠ, ಸಿ.ಆರ್. ಲಕ್ಕುಂಡಿಮಠ, ಆರ್.ಎಫ್. ಪುರಾಣಿಕಮಠ, ಸಿ.ಎಸ್. ಹಿರೇಮಠ, ಸಿದ್ದಯ್ಯಜ್ಜ, ವೀರಯ್ಯ ಮಠಪತಿ, ಫಕ್ಕೀರಗೌಡ್ರ ಪಾಟೀಲ, ಫಕ್ಕೀರಯ್ಯ ಹಿರೇಮಠ ಇದ್ದರು.
ಧಾರವಾಡದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಂಡಾಯದ ಬಿಸಿ
ಧಾರವಾಡ: ಆಪ್ ಬಂಡಾಯ ಶನಿವಾರ ಬಯಲಾಗಿದೆ. ಪಕ್ಷದ ಅಧಿಕೃತ ಮತ್ತು ಬಂಡಾಯ ಅಭ್ಯರ್ಥಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಅಧಿಕೃತ ಅಭ್ಯರ್ಥಿಯಾಗಿ ಹೇಮಂತ್ಕುಮಾರ್ ಶನಿವಾರ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಸಮೀರ ಶುಕ್ಲಗೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷ ಅಸ್ತಿತ್ವ ಬಂದಾಗಿನಿಂದ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಜಿಲ್ಲಾ ಸಂಚಾಲಕ ಶೈಲೇಂದ್ರಕುಮಾರ ಪಾಟೀಲ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದಲ್ಲಿ ಸಕ್ರಿಯವಾಗಿರುವ ನನ್ನನ್ನು ಕಡೆಗಣಿಸಿ, ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ 1.50 ಲಕ್ಷ ಸದಸ್ಯರನ್ನು ಮಾಡಲು ಶ್ರಮಿಸಿದ್ದೇನೆ. ಬೆಂಗಳೂರಿನಲ್ಲಿ ನಡೆದ ಸಂದರ್ಶನದಲ್ಲಿ ಪಕ್ಷದ ಮುಖಂಡರು ಇದನ್ನು ಗುರುತಿಸಿದ್ದಾರೆ. ಆದರೆ ಜಿಲ್ಲೆಗೆ ಪರಿಚಿತರಲ್ಲದ ಹೇಮಂತ್ ಕುಮಾರ್ ಎಂಬುವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು ನಿರಾಸೆ ಮೂಡಿಸಿದೆ. ಕಾರ್ಯಕರ್ತರ ಸಲಹೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಪಾಟೀಲ ಹೇಳಿದರು.
ಬಿಜೆಪಿಗೆ ಸೇರ್ಪಡೆ
ಗದಗ: ನಗರದ ಶಿವು ಹಿರೇಮನಿಪಾಟೀಲ ತಮ್ಮ ನಿವಾಸದಲ್ಲಿ ಬೆಂಬಲಿಗರಜತೆ ಬಿಜೆಪಿ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ, ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಶ್ರೀಶೈಲಪ್ಪ ಬಿದರೂರ ಸಮ್ಮುಖ ಈಚೆಗೆ ಬಿಜೆಪಿ ಸೇರಿದರು. ಗುರುರಾಜಗೌಡ ಹಿರೇಮನಿಪಾಟೀಲ, ಗೋಪಾಲಗೌಡ ಹಿರೇಮನಿಪಾಟೀಲ, ನಾಗರಾಜ ಹಿರೇಮನಿಪಾಟೀಲ, ಪ್ರವೀಣ ಹಿರೇಮನಿಪಾಟೀಲ, ರವಿ ಮಡಿವಾಳರ, ಮಂಜುನಾಥ ಕುಂಬಾರ, ವಿಜಯ ಹಬೀಬ, ಗಿರೀಶ ಗಡಾದ, ಸುದೀರ ಕೊಡೆಕಲ್, ಅಂದಪ್ಪ ಮುಳ್ಳಾಳ, ಶಂಕರಗೌಡ ಹುಚ್ಚನಗೌಡ್ರ, ಆನಂದ ಕುಂಬಾರ, ನಿಂಗಪ್ಪ ಗದಗಿನ, ಸಂತೋಷ ಮಡಿವಾಳರ, ಸುರೇಶ ಭರಮಣ್ಣವರ, ಮಂಜುನಾಥ ಬೆಟಗೇರಿ, ಮಂಜುನಾಥ ಬಳ್ಳಾರಿ, ಈಶಪ್ಪ ಚಿಕ್ಕಣ್ಣವರ ಇತರರು ಬಿಜೆಪಿ ಸೇರಿದರು. ಮೋಹನ ಮಾಳಶೆಟ್ಟಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ ಇತರರು ಇದ್ದರು.
ದಿನಚರಿ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ
ನರೇಗಲ್ಲ: ವಿದ್ಯಾರ್ಥಿಗಳು ಈಗಿನಿಂದಲೇ ದಿನಚರಿ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಆದರೆ, ಈ ದಿನಚರಿ ಪ್ರಾಮಾಣಿಕತೆಯಿಂದ ಕೂಡಿರಬೇಕೆಂದು ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಹೇಳಿದರು. ಅವರು ಸಮೀಪದ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಜರುಗಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಎಫ್.ಎನ್. ಹುಡೇದ, ವಿದ್ಯಾಸಾಗರ ಮಾತನಾಡಿದರು. ಎಫ್.ಎಸ್. ಪೂಜಾರ ಇದ್ದರು. ಮುಖ್ಯೋಪಾಧ್ಯಾಯ ಎಂ.ವೈ. ಹಳೇಮನಿ ಸ್ವಾಗತಿಸಿ, ಎಸ್.ಆರ್. ಬಾಗಲಿ ನಿರೂಪಿಸಿದರು. ಬಿ.ವಿ. ಬಳಿಗೇರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

