ಗದಗ

ಜೆಡಿಎಸ್ ಅಭ್ಯರ್ಥಿ ಮೆಣಸಿನಕಾಯಿ ನಾಳೆ ನಾಮಪತ್ರ ಸಲ್ಲಿಕೆ

Published On :

ಹಾನಗಲ್ಲ:  ಹಾವೇರಿ ಲೋಕಸಭಾ ಕ್ಷೇತ್ರದದಿಂದ ಸ್ಪರ್ಧಿಸಲು ಹಾವೇರಿಯಲ್ಲಿ ಮಾ. 25 ರಂದು ಬೆಳಗ್ಗೆ 11 ಗಂಟೆಗೆ ತಮ್ಮ ನಾಮಪತ್ರ ಸಲ್ಲಿಸುವುದಾಗಿ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ತಿಳಿಸಿದರು.
ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಮಗೆ ಜೆಡಿಎಸ್ ಮುಖಂಡರು ಬಿ. ಫಾರ್ಮ್ ನೀಡಿದ್ದು, ಮಂಗಳವಾರ ಹಾವೇರಿಯ ಪುರಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಟು ಮಹಾತ್ಮಾಗಾಂಧಿ ವೃತ್ತದ ಮೂಲಕ ವೀರಭದ್ರೇಶ್ವರ ದೇವಸ್ಥಾನ ತಲುಪಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಧಾರವಾಡ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಮ್ಮ ತಂದೆ  ಬಿ.ಎಂ. ಮೆಣಸಿನಕಾಯಿ ಅವರು ಅಭಿವೃದ್ಧಿ ದಿಸೆಯಲ್ಲಿ ಕಂಡ ಕನಸುಗಳನ್ನು ನನಸು ಮಾಡುವುದೇ ನನ್ನ ಗುರಿ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಡಳಿತದಲ್ಲಿನ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸಿ ಮತಯಾಚಿಸಿ ಗೆಲುವು ಸಾಧಿಸಲಾಗುವುದು ಎಂದರು. ಹಾಲಿ ಸಂಸದ ಶಿವಕುಮಾರ ಉದಾಸಿ ಅವರ ಅವಧಿಯ ವೈಫಲ್ಯಗಳನ್ನು ಜನತೆಗೆ ತಿಳಿಸಲಾಗುವುದು. ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಲಭ್ಯವಿದ್ದರೂ ಅಭಿವೃದ್ಧಿ ಕಾಣಲಿಲ್ಲ. ಕುಡಿಯುವ ನೀರಿನ ಬವಣೆ ಹಾಗೆಯೇ ಇದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ, ಕುಂದು-ಕೊರತೆಗಳಿಗೆ ಸ್ಪಂದಿಸಿಲ್ಲ ಎಂದರು.
ಬಿಜೆಪಿ ದುಡ್ಡಿನ ಪಕ್ಷ, ಅಭ್ಯರ್ಥಿಗಳೂ ಕೋಟ್ಯಧೀಶರಿದ್ದಾರೆ. ಹಲವು ಉಧ್ಯಮಗಳಲ್ಲಿ, ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ಇವರಿಂದ ಜನಸೇವೆ ಮಾಡಲು ಹೇಗೆ ಸಾಧ್ಯ ಎಂದರು. ಇನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನೇ ಘೋಷಿಸಿಲ್ಲ. ತನ್ನ ಅಭ್ಯರ್ಥಿ ಆಯ್ಕೆ ಗೊಂದಲದಲ್ಲೇ ಮುಳುಗಿದೆ. ಸದ್ಯ ತಮಗೆ ಬಿಜೆಪಿಯೇ ನೇರ ಪ್ರತಿಸ್ಪರ್ಧಿ ಎಂದ ಅವರು, ಈ ಬಾರಿ ಮತದಾರ ಹೊಸ ಮುಖವನ್ನು ಬಯಸುತ್ತಿದ್ದು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೇವಿನಮರದ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಡುಗೆ ಅನಿಲದ ವಿತರಣೆ ಹಾಗೂ ಸಹಾಯಧನದ ವಿತರಣೆಯಲ್ಲಿ ಅವಾಂತರ ಸೃಷ್ಟಿಸಿದ್ದರಿಂದ ಮಹಿಳೆಯರು ಈ ಬಾರಿ ಕಾಂಗ್ರೆಸ್ ಕೈಬಿಟ್ಟು ತಮ್ಮ ಪಕ್ಷಕ್ಕೇ ಮತ ನೀಡಲಿದ್ದಾರೆ ಎಂದರು. ಪಕ್ಷದ ತಾಲೂಕಾಧ್ಯಕ್ಷ ಶಿವಲಿಂಗಪ್ಪ ಈಶಪ್ಪನವರ ಮಾತನಾಡಿದರು. ಮಾರ್ತಾಡ ಪಾರಗಾಂವಕರ, ಎಸ್.ಎಲ್. ಬಣಕಾರ, ರವೀಂದ್ರಗೌಡ ಪಾಟೀಲ, ಆರ್.ಬಿ. ಪಾಟೀಲ, ರಮೇಶ ಪಾಟೀಲ, ಬಸವರಾಜ ಶಿವಣ್ಣನವರ, ಮಲ್ಲೇಶಪ್ಪ ಕೋಣನಕೇರಿ, ಶಂಭನಗೌಡ ಪಾಟೀಲ, ನಿಂಗನಗೌಡ ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.