ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ಗಜೇಂದ್ರಗಡ: ರೋಣ ಮತಕೇತ್ರದ ಗಡಿ ಗ್ರಾಮ ಸಮೀಪದ ನಾಗರಸಕೊಪ್ಪ ತಾಂಡಾದ ನಿವಾಸಿಗಳಿಗೆ ಮೂಲ ಸೌಲಭ್ಯ ನೀಡುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಬರುವ ಲೋಕಸಭಾ ಚುನಾವಣೆಯ ಮತದಾನ ಸಾಮೂಹಿಕವಾಗಿ ಬಹಿಷ್ಕರಿಸಲು ಶುಕ್ರವಾರ ನಿರ್ಧರಿಸಿದರು.
ಚುನಾವಣೆ ಬಂದಾಗ ಗ್ರಾಮದತ್ತ ಮುಖಮಾಡುವ ರಾಜಕಾರಣಿಗಳು ಭರವಸೆಯ ಸೌಧ ಕಟ್ಟಿ ಹೋಗುತ್ತಾರೆ. ಮತ್ತೆ ಅವರು ಬರುವುದು ಮತ ಕೇಳುವ ಸಮಯದಲ್ಲಿಯೇ. ಆಗ ಮತ್ತೆ ಅದೇ ತರಹದ ಭರವಸೆ. ಹೀಗಾಗಿ ನಾಗರಸಕೊಪ್ಪ ತಾಂಡಾ ಸೌಲಭ್ಯ ವಂಚಿತ ತಾಂಡಾವಾಗಿಯೇ ಉಳಿದಿದೆ. ಆದ್ದರಿಂದ ಈ ಹಿಂದಿನ ಎಲ್ಲ ಸರ್ಕಾರಗಳು ನಮ್ಮ ಅಳಲಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅಜಯ ರಾಠೊಡ ತಿಳಿಸಿದರು.
ಕುಂದಿದ ಉತ್ಸಾಹ: ಸದ್ಯ ಲೋಕಸಭೆ ಚುನಾವಣೆ ಬಂದಿದೆಯಾದರೂ ತಾಂಡಾದ ಜನರಿಗೆ ಆ ಬಗ್ಗೆ ಅಷ್ಟೇನೂ ಉತ್ಸಾಹವಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿರುವ ಯಾವುದೇ ಪಕ್ಷದ ಅಭ್ಯರ್ಥಿಯು ಇದುವರೆಗೆ ಅಲ್ಲಿನ ಜನರ ಬಳಿ ತೆರಳಿ ಮತ ಕೇಳಿಲ್ಲ. ಉಳಿದಂತೆ ಚುನಾವಣಾ ಕಣದಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಇದ್ದಾರೆ ಎನ್ನುವ ಮಾಹಿತಿ ಕೂಡಾ ತಿಳಿದಿಲ್ಲ. ಅಂದಾಜು 100 ಕುಟುಂಬಗಳಿದ್ದು 370ರಷ್ಟು ಮತದಾರರಿದ್ದಾರೆ. ಮೊದಲು ಗ್ರಾಮದಲ್ಲಿ ಮತಗಟ್ಟೆಯೇ ಇರಲಿಲ್ಲ. ಮತದಾನ ಮಾಡಲು 2.4 ಕಿಮೀ. ದೂರದ ನಾಗರಸಕೊಪ್ಪ ಗ್ರಾಮಕ್ಕೆ ತೆರಳಬೇಕು. ಕಳೆದ ವಿಧಾನಸಭಾ ಚುನಾವಣೆಯಿಂದ ತಾಂಡಾದ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿತ್ತು.
ದುರ್ಗಮ ಹಾದಿ: ಪ್ರತಿ ವರ್ಷ ಗ್ರಾಮದ ಜನರು ಗುಳೆ ಹೋಗುವುದು ಇಲ್ಲಿ ಸಾಮಾನ್ಯ. ಈ ಗ್ರಾಮ ಇದುವರೆಗೂ ಡಾಂಬರ್ ರಸ್ತೆ ಕಂಡಿಲ್ಲ. ಸಾರಿಗೆ ಸಂಸ್ಥೆಯ ವಾಹನ ಓಡಾಟವಂತೂ ಇಲ್ಲವೇ ಇಲ್ಲ. ಕಿರಿಯ ಪ್ರಾಥಮಿಕ ಶಾಲೆ ಮಾತ್ರವಿದ್ದು, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹೋಗುವ ಮಕ್ಕಳು ಪಕ್ಕದ ಗೋಗೇರಿ ಗ್ರಾಮಕ್ಕೆ ನಿತ್ಯ 4 ಕಿಮೀ. ನಡೆದುಕೊಂಡೇ ಹೋಗಬೇಕು. ಹೀಗೆ ಬಹುತೇಕ ಮೂಲ ಸೌಲಭ್ಯಗಳು ಇಲ್ಲದೆ ಗ್ರಾಮ ನರಳುತ್ತಿದೆ. ತಾಂಡಾದಲ್ಲಿ ಒಂದು ಮನೆಗೂ ನಲ್ಲಿ ಇಲ್ಲ. ಸಾಮೂಹಿಕವಾಗಿ ಬೊರ್ವೆಲ್ದಿಂದ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಳೆದ 6 ತಿಂಗಳಿಂದ ತಾಂಡಾಕ್ಕೆ ವಿದ್ಯುತ್ ಸ್ಥಗಿತವಾದಾಗ ತಾಂಡಾದ ನಿವಾಸಿಗಳು ಪಕ್ಕದ ತೋಟಗಳಿಂದ ನೀರು ಹೊತ್ತುಕೊಂಡು ಬಂದು ಜೀವನ ಸಾಗಿಸುತ್ತಿದ್ದಾರೆ.
ಹಾಗಾಗಿ, ಈ ಬಾರಿ ಯಾವುದೇ ಕಾರಣಕ್ಕೂ ಮತದಾನ ಮಾಡದಿರಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ತಾಂಡಾ ನಿವಾಸಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

