ಗದಗ

11 ಜನರಿಗೆ ಹುಚ್ಚು ನಾಯಿ ಕಡಿತ, ಗಾಯ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 1
ತಾಲೂಕಿನ ಹೊಳೆ-ಇಟಗಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ 7.30ರ  ಸುಮಾರಿಗೆ ಕೃಷಿ ಕೆಲಸಕ್ಕೆ ತೆರಳುತ್ತಿದ್ದ ಕೃಷಿ ಕೂಲಿ ಕಾರ್ಮಿಕರ ಮೇಲೆ ಹುಚ್ಚು ನಾಯಿಯೊಂದು ದಾಳಿ ಮಾಡಿ 11 ಜನರಿಗೆ ಕಚ್ಚಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಏಕಾಏಕಿ ಊರ ಹೊರವಲಯದ ಅರಣ್ಯ ಪ್ರದೇಶದ ಕಡೆಯಿಂದ ಬಂದ ನಾಲ್ಕು ನಾಯಿಗಳಲ್ಲಿ ಒಂದು ಹುಚ್ಚು ಹಿಡಿದ ನಾಯಿ ಕಂಡ ಕಂಡವರಿಗೆ ಕಚ್ಚುತ್ತಾ ಓಡುತ್ತಿರುವುದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದು, ತಪ್ಪಿಸಿಕೊಳ್ಳುವಷ್ಟರಲ್ಲಿ ಮೈಮೇಲೆ ಎರಗಿ ಕಚ್ಚುತ್ತಾ ಸಾಗಿ ಗ್ರಾಮ ಪ್ರವೇಶಿಸಿದೆ. ಗ್ರಾಮಸ್ಥರೆಲ್ಲರೂ ಸೇರಿ ಹುಚ್ಚು ಹಿಡಿದ ನಾಯಿ ಹೊಡೆಯಲು ಪ್ರಯತ್ನಿಸಿದರೂ ನಾಯಿ ಸಿಗದೇ ಪರಾರಿಯಾಗಿದೆ.
ರಾಮವ್ವ ಸೋಮಣ್ಣ ಡೊಂಬರ ಎಂಬ ಮಹಿಳೆಯ ಕೈಬೆರಳಿಗೆ ಕಚ್ಚಿದ್ದು, ಬೆರಳು ತುಂಡಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಶಂಕರಗೌಡ ಬಸವಗೌಡ ಪಾಟೀಲ ಎಂಬವರಿಗೂ ಗಂಭೀರ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕೃಷ್ಣರಡ್ಡಿ ತಾರಿಕೊಪ್ಪ, ಕೆಂಚವ್ವ ಶಿವಪ್ಪ ಡೊಂಕಬಳ್ಳಿ, ಶಾಂತವ್ವ ದಯಾನಂದ ಗುಮ್ಮಗೋಳಮಠ, ಮೈಲೆಪ್ಪ ಹನುಮಪ್ಪ ಕಂದಾರಿ ಮತ್ತಿತರರಿಗೆ ಕಣ್ಣಿನ ಮೇಲ್ಭಾಗ, ಕೈ ಮತ್ತು ಕಾಲಿಗೆ ಕಚ್ಚಿ ಗಾಯಗೊಳಿಸಿದ್ದು, ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಿಮ್ಸ್‌ನಲ್ಲಿ ತಪಾಸಣೆ: ಸದ್ಯ ಹುಚ್ಚು ನಾಯಿ ಕಡಿತಕ್ಕೆ ಒಳಗಾದ 11 ಜನರಲ್ಲಿ 7 ಜನರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಚ್ಚು ನಾಯಿ ಕಡಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲರನ್ನು ತಪಾಸಣೆಗೆ ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಲಾಗುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ ದಾಖಲಾದವರ ಪೈಕಿ ಹೆಚ್ಚಿನ ಗಾಯಗೊಂಡವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಬಸವರಾಜ ಹಳ್ಳೆಮ್ಮನವರ ತಿಳಿಸಿದ್ದಾರೆ.
ಗುರುವಾರ ಬೆಳಗಿನ ಜಾವ 11 ಜನರಿಗೆ ಹುಚ್ಚುನಾಯಿ ಕಡಿದಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಹಿಂದೆಯೂ ಶೆಟ್ಟಿಕೇರಿ ನರಸರಿಯಲ್ಲಿ ಓರ್ವ ಅರಣ್ಯ ಸಿಬ್ಬಂದಿಗೂ ಹುಚ್ಚುನಾಯಿ ಕಡಿದಿದ್ದು, ತಾಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಒಮ್ಮೆಲೆ ನಾಯಿ ಸಿಗಲು ಸಾಧ್ಯವಿಲ್ಲ. ಜನರಿಗೆ ಕಡಿದ ಅನಂತರ ಅದೇ ಸಾಯುವ ಸಾಧ್ಯತೆ ಹೆಚ್ಚಾಗಿದ್ದು, ಜನರು ಬಡಿದು ಕೊಲ್ಲುವ ಸಾಧ್ಯತೆಯೂ ಇದೆ. ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ವಲಯ ಅರಣ್ಯ ಇಲಾಖೆ ಅಧಿಕಾರಿ ಪಿ.ಸಿ. ಹಿರೇಮನಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.