ಕಾರವಾರ ಉತ್ಸವದಲ್ಲಿ ಹರಿಯಿತು ಹಾಡು, ಹಾಸ್ಯದ ಹೊನಲು...
ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ಕಾರವಾರ ಉತ್ಸವ ಹಾಡು, ಹಾಸ್ಯ, ನೃತ್ಯದ ಮೂಲಕ ಬೆಳಗಿನ ಸೆಕೆಗೆ ತಂಪೆರೆಯುತ್ತಿದೆ. ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ರಂಜಿಸುತ್ತಿವೆ. ಸ್ಥಳೀಯ ಕಲಾವಿದರು, ಪುಟ್ಟ ಮಕ್ಕಳು ತಮ್ಮ ಪ್ರತಿಭೆಯನ್ನು ಮಯೂರ ವರ್ಮ ವೇದಿಕೆಯಲ್ಲಿ ಪ್ರದರ್ಶಿಸಿ ಎಲ್ಲರ ಮನ ಗೆಲ್ಲುತ್ತಿದ್ದಾರೆ.
ಶುಕ್ರವಾರ ಖ್ಯಾತ ಹಾಸ್ಯ ಕಲಾವಿದ ಹಾಗೂ ಚಲನಚಿತ್ರ ನಟ ಸಾಧು ಕೋಕಿಲ ತಮ್ಮ ತಂಡದೊಂದಿಗೆ ರಾತ್ರಿ 12.30ರಿಂದ 2 ಗಂಟೆ ವರೆಗೆ ಕಾರ್ಯಕ್ರಮ ನಡೆಸಿಕೊಟ್ಟರು. ನೆರೆದ ಪ್ರೇಕ್ಷಕರು ಸಾಧು ಕೋಕಿಲ ಹಾಸ್ಯಕ್ಕೆ ನಗುವಿನ ಮೂಲಕ ಶರಣಾದರು. ಜತೆಗೆ ಸಂಗೀತ ನಿರ್ದೇಶಕರೂ ಆಗಿರುವ ಕೋಕಿಲ ತಮ್ಮ ಸುಶ್ರಾವ್ಯ ಹಾಡಿನಿಂದ ಸಂಗೀತ ಪ್ರಿಯರ ಮನ ತಣಿಸಿದರು. ತಮ್ಮ ಕಾರ್ಯಕ್ರಮವನ್ನು ಕನ್ನಡದ ಜನಪ್ರಿಯ 'ಹಚ್ಚೆವು ಕನ್ನಡದ ದೀಪ' ಗೀತೆಯ ಮೂಲಕ ಆರಂಭಿಸಿದ ಸಾಧು, ಸ್ಥಳೀಯ ಘಟನಾವಳಿಗಳನ್ನೇ ತಮ್ಮ ಹಾಸ್ಯಕ್ಕೆ ಅಸ್ತ್ರವಾಗಿಸಿಕೊಂಡು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ ವೈಯಕ್ತಿಕವಾಗಿ ಹೆಚ್ಚಿನ ಕಾರ್ಯಕ್ರಮ ನೀಡದ ಹಾಸ್ಯನಟ ಕೋಕಿಲ ತಂಡದ ಕಲಾವಿದರು ಉತ್ತಮ ಕಾರ್ಯಕ್ರಮ ನೀಡಿದರು. ಕಳೆದ ಬುಧವಾರ ಚಲನಚಿತ್ರ ಶೂಟಿಂಗ್ ವೇಳೆ ಆದ ನೋವಿನ ಕಾರಣ ಹೆಚ್ಚಿನ ಕಾರ್ಯಕ್ರಮ ನೀಡಲಾಗುತ್ತಿಲ್ಲ ಎಂದು ಸಾಧು ಹೇಳಿಕೊಂಡರು.
ಸಾಧು ಕೋಕಿಲ ಕಾರ್ಯಕ್ರಮ ನಡುನಡುವೆ ಸ್ಥಳೀಯ ನೃತ್ಯ ತಂಡಗಳ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರವಾರ ಥಂಡರ್ ಗ್ರೂಪ್, ಕಲ್ಪನಾ ರಶ್ಮಿ ಕಲಾಲೋಕ, ಹಲವು ತಂಡಗಳು ಉತ್ತಮ ಪ್ರದರ್ಶನ ನೀಡಿ ನಿರ್ಣಾಯಕರ ಮೆಚ್ಚುಗೆ ಗಳಿಸಿದರು. ರಾತ್ರಿ 2.30ರ ವರೆಗೆ ನಡೆದ ಮನರಂಜನಾ ಕಾರ್ಯಕ್ರಮಗಳಿಗೆ ಜನರ ಕೊರತೆ ಇರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

