ಗದಗ

ನದಿಗಳಿದ್ರೂ ಕುಡಿವ ನೀರಿಗೆ ಬರ

Published On :

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀರಿಗಾಗಿ ಜನರ ಅಲೆದಾಟ ಜೋರಾಗಿದೆ. ಮಳೆಗಾಗಿ ಜನತೆ ಪ್ರಾರ್ಥಿಸುತ್ತಿದ್ದಾರೆ.
ಕರಾವಳಿಯ ಕಾರವಾರ, ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಹೀಗೆ ಎಲ್ಲೆಡೆ ಕುಡಿಯುವ ನೀರಿಗಾಗಿ ಜನತೆ ಪರದಾಡುತ್ತಿದ್ದಾರೆ.
ಕಣ್ಣು ಹಾಯಿಸುವಷ್ಟು ಉದ್ದಕ್ಕೂ ಕಾಣುವ ವಿಶಾಲವಾದ ಅರಬ್ಬಿ ಸಮುದ್ರ, ಸಾಲದೆಂಬಂತೆ ಕಾಳಿ, ಅಘನಾಶಿನಿ, ಗಂಗಾವಳಿ, ಶರಾವತಿ, ವೆಂಕಟಾಪುರ ಮತ್ತಿತರ ನದಿಗಳು ಕರಾವಳಿಯಲ್ಲಿ ಸಮುದ್ರವನ್ನು ಸೇರುತ್ತವೆ. ಆದರೂ ಕುಡಿಯುವ ನೀರಿಗೆ ಇಲ್ಲಿ ಬರ. ಅದರಲ್ಲೂ ಕಾರವಾರ ತಾಲೂಕಿನ ತೊಡೂರು, ಅಮದಳ್ಳಿ, ಕಿನ್ನರ, ಕುಮಟಾ ತಾಲೂಕಿನ ಮಾಸೂರು, ಲುಕ್ಕೇರಿ, ಅಘನಾಶಿನಿ, ದೇವರಬೋಳೆ, ಅಂಕೋಲಾ ತಾಲೂಕಿನ ಭಾಸಗೋಡ ಮತ್ತಿತರ ಪ್ರದೇಶ, ಹೊನ್ನಾವರ ತಾಲೂಕಿನ ಕೆಲ ಗ್ರಾಮಗಳು ಹಾಗೂ ಭಟ್ಕಳ ತಾಲೂಕಿನ ಹಲವೆಡೆ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಕೆಲವೆಡೆ ನೀರಿನ ಯೋಜನೆಯನ್ನೇನೋ ರೂಪಿಸಿದೆ. ಆದರೆ ನೀರು ಪೂರೈಕೆ ಮಾಡುವುದು ವಾರದಲ್ಲಿ ಎರಡು ದಿನಗಳು ಮಾತ್ರ. ಹೀಗಾಗಿ ಗ್ರಾಮಾಂತರ ಪ್ರದೇಶದಲ್ಲೂ ಜನತೆ ನೀರಿನ ಬವಣೆ ಅನುಭವಿಸುವಂತಾಗಿದೆ. ನಗರ ಪ್ರದೇಶದಲ್ಲಿ ಅಂದರೆ ಅಂಕೋಲಾ, ಕುಮಟಾ, ಭಟ್ಕಳಗಳಲ್ಲಿ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ಜನರ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಬಾವಿಯಲ್ಲಿ ಉಪ್ಪು ನೀರು: ಸಮುದ್ರಕ್ಕೆ ಸಮೀಪ ಇರುವ ಕೆಲ ಗ್ರಾಮಗಳ ಬಾವಿಗಳಲ್ಲಿ ಉಪ್ಪು ನೀರು ಕಾಣಿಸಿಕೊಂಡಿದೆ. ಮೇ ತಿಂಗಳು ಅಡಿ ಇಡುತ್ತಿದ್ದಂತೆ ಇಲ್ಲಿನ ಬಾವಿಗಳಲ್ಲಿನ ಸಿಹಿ ನೀರು ಕೂಡ ಮಾಯವಾಗಿ ಉಪ್ಪು ನೀರು ನುಗ್ಗುತ್ತದೆ. ಈ ನೀರನ್ನು ಕುಡಿಯುವುದಿರಲಿ ಮತ್ತೆ ಯಾವುದೆ ಅಗತ್ಯಕ್ಕೂ ಬಳಸಲು ಸಾಧ್ಯವಾಗದು. ಸುತ್ತಮುತ್ತಲಿನ ಬಾವಿಗಳಲ್ಲೂ ಇದೆ ರೀತಿ ಆಗುವುದರಿಂದ ಇಲ್ಲಿನ ಜನರ ಬವಣೆ ಹೇಳತೀರದು. ಸೈಕಲ್, ಬೈಕ್ಗಳಿಗೆ ಕೊಡಗಳನ್ನು ಕಟ್ಟಿ ಅಲ್ಲಿಂದಿಲ್ಲಿ, ಇಲ್ಲಿಂದಿಲ್ಲ ಅಲೆಯಬೇಕಾದ ಪರಿಸ್ಥಿತಿ ಇದೆ.
ಪ್ರತೀವರ್ಷ ನೀರಿನ ಬರ: ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಪ್ರತಿ ವರ್ಷ ನೀರಿನ ಬರ ಕಾಣಿಸಿ ಕೊಳ್ಳುತ್ತದೆ. ಮಳೆ ಆಗಲಿ, ಬಿಡಲಿ ಇಲ್ಲಿನ ಬರವಂತೂ ಬರುತ್ತದೆ. ಇಂತಹ ಊರುಗಳನ್ನು ಪಟ್ಟಿ ಮಾಡಿ, ಅಲ್ಲಿ ಶಾಶ್ವತ ನೀರಿನ ಯೋಜನೆಯನ್ನು ಕಲ್ಪಿಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡುವ ಅಗತ್ಯತೆ ಇದೆ. ಇನ್ನು ಉಪ್ಪು ನೀರು ನುಗ್ಗುವ ಪ್ರದೇಶದಲ್ಲೂ ಪೈಪ್ಲೈನ್ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಬೇಕಾಗಿದೆ. ನೀರಿಗೆ ಬರ ಕಾಣಿಸುತ್ತಿದ್ದಂತೆ ಪ್ರತಿ ವರ್ಷ ಟ್ಯಾಂಕರ್ಗಳಲ್ಲಿ ನೀರನ್ನು ಪೂರೈಕೆ ಮಾಡಲಾಗುತ್ತದೆ. ಇದೂ ಕೂಡ ಸಮರ್ಪಕವಾಗಿ ನಡೆಯದು. ಆದರೆ ಶಾಶ್ವತ ಯೋಜನೆ ರೂಪಿಸಿದಲ್ಲಿ ಜನತೆ ನೆಮ್ಮದಿಯಿಂದ ಇರಬಹುದಾಗಿದೆ.
ಇಲ್ಲಿ ನದಿಗಳಿಗೇನು ಬರವಿಲ್ಲ: ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿಗಳು ಸಾಕಷ್ಟಿವೆ. ಕಾಳಿ ನದಿಗೆ ಸುಪಾ, ಕೊಡಸಳ್ಳಿ, ಕದ್ರಾಗಳಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ. ಶರಾವತಿ ನದಿಗೆ ಗೇರಸೊಪ್ಪದಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ. ಇನ್ನು ಬೊಮ್ಮನಳ್ಳಿಯಲ್ಲೂ ಜಲಾಶಯ ಇದೆ. ಆದರೆ ಈ ಎಲ್ಲ ಜಲಾಶಯಗಳಲ್ಲಿ ಒಂದೂ ಕುಡಿಯುವ ನೀರು ಅಥವಾ ನೀರಾವರಿಗೆ ಬಳಕೆಯಾಗುತ್ತಿಲ್ಲ. ಎಲ್ಲವೂ ಜಲ ವಿದ್ಯುತ್ ಯೋಜನೆಗಳಿಗಾಗಿ ರೂಪಿತವಾಗಿವೆ. ನೀರಾವರಿ ಯೋಜನೆಗಳನ್ನು ರೂಪಿಸಿದಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಲು ಸಾಧ್ಯ. ಆದರೆ ಈ ಬಗ್ಗೆ ಸಾರ್ವಜನಿಕರು, ಮುಖಂಡರು ಅದೆಷ್ಟು ಬಾರಿ ಮನವಿ ನೀಡಿದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಜನತೆಯ ನೀರಿನ ಬವಣೆ ನೀಗುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.