ಗದಗ

ಹೆಸ್ಕಾಂ ನಿರ್ಲಕ್ಷ್ಯಕ್ಕೆ ವೃದ್ಧೆ ಬಲಿ: ಆಕ್ರೋಶ

Published On :

ರೋಣ: ತುಂಡಾಗಿ ಬಿದ್ದಿದ್ದ ಬೀದಿ ದೀಪದ ಕಂಬವೊಂದರ ತಂತಿ ತಗುಲಿ ವೃದ್ಧೆ       ಸಾವನ್ನಪ್ಪಿದ ಘಟನೆ ಪಟ್ಟಣದ ಕಲ್ಯಾಣನಗರದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ್ದು, ವೃದ್ಧೆಯ ಸಾವಿಗೆ ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತಳ ಸಂಬಂಧಿಕರು, ಬಡವಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಅಮಾಮಬಿ ಅಬ್ದುಲಸಾಬ್ ತಾಂಬೋಟಿ (61) ಬೆಳಗ್ಗೆ 6ರ ಸುಮಾರಿಗೆ ಬಹಿರ್ದೆಸೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆಗೆ ಬೀದಿ ದೀಪಗಳಿಗೆ ಸಂಪರ್ಕ ಕಲ್ಪಿಸುವ ತಂತಿ ತುಂಡಾಗಿ   ಬಿದ್ದಿತ್ತು. ಅಲ್ಲಿನ ನಿವಾಸಿಗಳಿಗೆ ಈ ಕುರಿತು ಮಾಹಿತಿ ಇರಲಿಲ್ಲ ಎಂದು ಅಲ್ಲಿನ ನಿವಾಸಿಗಳು ತಿಳಿಸುತ್ತಾರೆ. ಮೃತಳು ಮೂಲತಃ ಗದಗ ನಗರದ ಜವಳಗಲ್ಲಿ ನಿವಾಸಿ. ವೀರಭದ್ರೇಶ್ವರ ಜಾತ್ರೆ ನಿಮಿತ್ತ ರೋಣದಲ್ಲಿರುವ ಮಗಳ ಮನೆಗೆ ಬಂದಿದ್ದಳೆನ್ನಲಾಗಿದೆ.
ಹೆಸ್ಕಾಂಗೆ ಹೇಳಲಾಗಿತ್ತು: ಕಲ್ಯಾಣ ನಗರದಲ್ಲಿ ಅನೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳು ಜೋತುಬಿದ್ದ ಕುರಿತು ರೋಣ ಹೆಸ್ಕಾಂ ಕಚೇರಿಗೆ ಅನೇಕ ಬಾರಿ ತಿಳಿಸಲಾಗಿತ್ತು. ಲಿಖಿತ ದೂರು ನೀಡಿದಲ್ಲಿ ಮಾತ್ರ ಸ್ಥಳಕ್ಕೆ ಬಂದು ದುರಸ್ತಿಗೊಳಿಸಲಾಗುವುದು ಎಂದು ಹೆಸ್ಕಾಂನವರು ಹೇಳುತ್ತಾ ಬಂದಿದ್ದಾರೆ. 2 ವರ್ಷಗಳ ಹಿಂದೆ ಇದೇ ಬಡಾವಣೆಯ ಬಾಲಕನೊಬ್ಬ ತಂತಿ ತಗುಲಿ ಸಾವನ್ನಪ್ಪಿದ್ದ. ಆ ವೇಳೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಇದೇ ರೀತಿ ವರ್ತಿಸಿದ್ದರು. ಈ ವೃದ್ಧೆಯ ಸಾವಿಗೆ ನೇರವಾಗಿ ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಇಲ್ಲಿನ ಸಮಸ್ಯೆಗೆ ಸ್ಪಂದಿಸಿದ್ದರೆ ಈ ಘಟನೆ ನಡೆಯುತ್ತಿದ್ದಿಲ್ಲ ಎಂದು ಕಲ್ಯಾಣ ನಗರದ ನಿವಾಸಿಗಳಾದ ಹುಸೇನಸಾಬ್ ಕೋಲ್ಕಾರ, ಇಸ್ಮಾಯಿಲ್ ನಾಲಬಂದ, ಎನ್.ಎಂ. ಸೈಯದ, ಶಿವಪ್ಪ ಕರೆಕಲ್ಲ ಆರೋಪಿಸಿದರು.  
ಹೆಸ್ಕಾಂ ಅಧಿಕಾರಿ ತರಾಟೆಗೆ: ಘಟನಾ ಸ್ಥಳಕ್ಕೆ ಆಗಮಿಸಿದ ರೋಣ ಹೆಸ್ಕಾಂ ಎಇಇ ಪ್ರಕಾಶ ಅವರನ್ನು ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಪುರಸಭೆ ಮಾಜಿ ಸ್ಥಾಯಿ ಸಮಿತಿ ಚೇರ್‌ಮನ್ ರಾಜಣ್ಣ ಹುಲಿ, ಸದಸ್ಯ ಶಫೀಕ ಮೂಗನೂರ ಅವರು ತರಾಟೆಗೆ ತೆಗೆದುಕೊಂಡು, ವೃದ್ಧೆಯ ಸಾವಿಗೆ ನಿಮ್ಮ ಹೆಸ್ಕಾಂ ನಿರ್ಲಕ್ಷ್ಯವೇ ಕಾರಣವಾಗಿದ್ದು, ಜೋತು ಬಿದ್ದಿರುವ ಇಲ್ಲಿನ ತಂತಿಗಳ ದುರಸ್ತಿಗೆ ಅನೇಕ ಬಾರಿ ಒತ್ತಾಯಿಸಲಾಗಿದ್ದರೂ ಸ್ಪಂದನೆ ನೀಡದ್ದರಿಂದ ಈ ಘಟನೆ ಸಂಭವಿಸುವಂತಾಯಿತು. ವೃದ್ಧೆಯ ಸಾವಿಗೆ ಸೂಕ್ತ ನ್ಯಾಯ ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿ ಸ್ಪಂದಿಸಿದ್ದರೆ ಬದುಕಿಸಬಹುದಿತ್ತು: ವೃದ್ಧೆ ಇಮಾಮಬಿ ತಾಂಬೋಟಿ ವಿದ್ಯುತ್ ತಂತಿ ತಗುಲಿ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ವೇಳೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಪಟ್ಟಣದ ಹೆಸ್ಕಾಂ ಕಚೇರಿಯ ಶಾಖಾಧಿಕಾರಿ ಹೊಸಳ್ಳಿ ಎಂಬುವರಿಗೆ 20ಕ್ಕೂ ಹೆಚ್ಚು ಬಾರಿ ಫೋನ್ (ರಿಂಗ್) ಮಾಡಿದರೂ ರೀಸಿವ್ ಮಾಡಲಿಲ್ಲ. ಕೂಡಲೇ ರೀಸಿವ್ ಮಾಡಿದ್ದಲ್ಲಿ ವೃದ್ಧೆ ಬದುಕಿಸಬಹುದಿತ್ತು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಹೆಸ್ಕಾಂ ಮುಖ್ಯ ಕಚೇರಿಗೆ ಲಿಖಿತ ದೂರು ನೀಡಲಾಗುವುದು ಎಂದು ಪುರಸಭೆ ಸದಸ್ಯ ಶಫೀಕ ಮೂಗನೂರ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಶೌಚಾಲಯಕ್ಕೆ ಆಗ್ರಹ: ಕಲ್ಯಾಣ ನಗರದಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಬಡವರು ವಾಸಿಸುತ್ತಿದ್ದು, ಇಲ್ಲಿನವರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಇಲ್ಲಿನ ಮಹಿಳೆ ಬಹಿರ್ದೆಸೆಗೆ ತೆರಳಲು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಕಾರಣ ಈ ಭಾಗದಲ್ಲಿ ಸುಸಜ್ಜಿತವಾದ ಮಹಿಳಾ ಶೌಚಾಲಯ ನಿರ್ಮಿಸಬೇಕು ಎಂದು ಕಲ್ಯಾಣ ನಗರದ ಮಹಿಳೆಯರು ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಸದಸ್ಯ ಶಫೀಕ ಮೂಗನೂರ ಅವರನ್ನು ಒತ್ತಾಯಿಸಿದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಭೇಟಿ ನೀಡಿ, ಮೃತ ಇಮಾಮಬಿ ತಾಂಬೋಟಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
2 ಲಕ್ಷ ಪರಿಹಾರ ಭರವಸೆ
ವಿದ್ಯುತ್ ಅವಘಡದಿಂದ ಇಮಾಮಬಿ ತಾಂಬೋಟಿ ಎಂಬುವರು ಮೃತಪಟ್ಟಿರುವ ಕುರಿತು ಗದಗ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ. ಮೃತ ಕುಟುಂಬಕ್ಕೆ ರು. 2 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಘಟನೆ ಕುರಿತು ವರದಿ ತಯಾರಿಸಿ ಮುಖ್ಯ ಕಚೇರಿಗೆ ಕಳಿಸಲಾಗುವುದು. ಆದಷ್ಟು ಬೇಗನೆ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಲಾಗುವುದು.
- ಪ್ರಕಾಶ, ಎಇಇ ಹೆಸ್ಕಾಂ,
ರೋಣ ತಾಲೂಕು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.