ಮಳೆ ಹಾನಿ: ಪ್ರತಿ ತಾಲೂಕಿಗೆ ರು. 2 ಕೋಟಿ
ರೋಣ: ಕಳೆದ ತಿಂಗಳು ಸುರಿದ ಮಳೆಯಿಂದ ಹಾನಿಗೊಳಗಾದ ಮನೆಗಳ ಪರಿಹಾರ ವಿತರಣೆಗಾಗಿ ಜಿಲ್ಲೆಯ ಪ್ರತಿ ತಾಲೂಕಿಗೂ ರು. 2 ಕೋಟಿ ಬಿಡುಗಡೆ ಮಾಡಲಾಗಿದ್ದು, ಅದರಂತೆ ರೋಣ ತಾಲೂಕಿಗೆ ರು. 2 ಕೋಟಿ. ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಹೇಳಿದರು.
ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿನ ಸರ್ವೇ ಇಲಾಖೆಯ ಆಕಾರ ಬಂಧ ನಕಲು ಮತ್ತು ಪಹಣಿ ಪತ್ರಗಳ ಹೊಂದಾಣಿಕೆ (ತಾಳೆ) ಪರಿಶೀಲನೆ ಹಾಗೂ ವಿವಿಧ ಇಲಾಖೆ ಕಡತಗಳ ಪರಿಶೀಲನೆ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಳೆಯಿಂದ ಹಾನಿಗೊಳಗಾದ ಮನೆಗಳ ಸರ್ವೇಗೆ ಈಗಾಗಲೇ ಪಟ್ಟಿಯೊಂದನ್ನು ತಯಾರಿಸಲಾಗಿದ್ದು, ಅಂತಹ ಮನೆಗಳ ಹಾನಿ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇ 24ರಿಂದ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಮರು ಪರಿಶೀಲನೆಗೆ ಸೂಚನೆ: ತಹಸೀಲ್ದಾರ್ ಕಚೇರಿಯಲ್ಲಿನ ಸರ್ವೇ ಇಲಾಖೆಗೆ ಭೇಟಿ ನೀಡಿ, ಆಕಾರ ಬಂಧ ನಕಲು ಮತ್ತು ಪಹಣಿ ಪತ್ರ ವಿಭಾಗಕ್ಕೆ ತೆರಳಿ ಅಲ್ಲಿನ ಕಡತಗಳನ್ನು ಪರಿಶೀಲಿಸಿದರು. ಕೆಲವೊಂದು ಕಡತಗಳಲ್ಲಿನ ಎ ಖರಾಬ (ಸಾಗುವಳಿ ಪ್ರದೇಶ) ಮತ್ತು ಬಿ ಖರಾಬ (ಸಾಗುವಳಿ ಅಲ್ಲದ ಪ್ರದೇಶ)ಗಳು ಆಕಾರ ಬಂದ ನಕಲು ಮತ್ತು ಪಹಣಿ ಪತ್ರದಲ್ಲಿ ಹೊಂದಾಣಿಕೆ (ತಾಳೆ) ಆಗದಿದ್ದನ್ನು ಕಂಡು, ಕೂಡಲೇ ಎ ಖರಾಬ ಮತ್ತು ಬಿ ಖರಾಬ ಹೊಂದಾಣಿಕೆಯಾಗುವಂತೆ ಮತ್ತೊಮ್ಮೆ ಪರಿಶೀಲಿಸಿ ಸರಿಪಡಿಸುವಂತೆ ತಹಸೀಲ್ದಾರ್ ಎ.ಜಿ. ಪಂಡಿತ ಮತ್ತು ಕಂದಾಯ ನಿರೀಕ್ಷಕ ಜಿ.ಬಿ. ಕೊಪ್ಪದ ಅವರಿಗೆ ಸೂಚಿಸಿದರು.
ಸ್ವಚ್ಛತೆಗೆ ಆದ್ಯತೆ ನೀಡಿ: ತಹಸೀಲ್ದಾರ್ ಕಚೇರಿ ಹತ್ತಿರದ ಉಪ ನೋಂದಣಿ ಇಲಾಖೆ ಮತ್ತು ಪತ್ರಾಂಕಿತ ಉಪ ಖಜಾನೆ ಕಚೇರಿಗೆ ತೆರಳಿ ವಿವಿಧ ಕಡತಗಳ ಮಾಹಿತಿ ಪಡೆದರು. ಬಳಿಕ ಕಚೇರಿ ಸುತ್ತು ಹಾಕಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡ ಜಿಲ್ಲಾಧಿಕಾರಿಗಳು, ಕಚೇರಿಯನ್ನು ನಿಮ್ಮ ಮನೆಯಂತೆ ಸ್ವಚ್ಛವಾಗಿಡುವಲ್ಲಿ ಆದ್ಯತೆ ನೀಡಬೇಕು. ಇಲ್ಲಿನ ವಾತಾವರಣ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಕಾಳಜಿ ವಹಿಸಬೇಕು ಎಂದರು.
ಸಾರ್ವಜನಿಕರಿಂದ ದೂರು: ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ಕೈಗೊಂಡು ಬಳಿಕ ಜಿಲ್ಲಾಧಿಕಾರಿಗಳು ಹೊರ ಬರುತ್ತಿದಂತೆ ಸಾರ್ವಜನಿಕರು ವಿವಿಧ ಸಮಸ್ಯೆಗಳ ಪರಿಹಾರ ಕುರಿತು ಮನವಿ ಮಾಡಿದರು. ಈ ವೇಳೆ ತಾಲೂಕಿನ ಮುದೇನಗುಡಿ ಗ್ರಾಮದ ಈಶ್ವರ ಅಂಗಡಿ ಎಂಬುವರು, ಜಿಪಂ ಎಂಜಿನಿಯರಿಂಗ್ ಉಪ ವಿಭಾಗದವರು ನಮಗೆ ಹೇಳದೇ, ಕೇಳದೇ ನಮ್ಮ ಜಮೀನಿನಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಕೊಳವೆ ಬಾವಿ ಕೊರೆಯಿಸಿದ್ದಾರೆ. ಈ ಕುರಿತು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ನಂತರ ನಿವೃತ್ತ ಶಿಕ್ಷಕ ಎಂ.ಎಸ್. ಅಬ್ಬಿಗೇರಿ, ಪಟ್ಟಣದ ಎಂಆರ್ಬಿಸಿ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ನಿವೃತ್ತಿ ಹೊಂದಿ 4 ವರ್ಷಗಳಾದರೂ, ಈವರೆಗೂ ನನಗೆ ಜಿಎಎಸ್ (ಗುಂಪು ವಿಮಾ ಅನುದಾನ) ಮತ್ತು ಎಸ್ಎಲ್(ಗಳಿಗೆ ರಜೆ ಹಣ) ಹಣ ನೀಡುತ್ತಿಲ್ಲ. ನಿತ್ಯ ಕಚೇರಿಗೆ ಅಲೆದು ಸಾಕಾಗಿದೆ ಎಂದು ಅಳಲು ತೋಡಿಕೊಂಡರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಪೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು. ಬಳಿಕ ಆಯಾ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಕೂಡಲೇ ಸ್ಪಂದಿಸುವಂತೆ ಆದೇಶಿಸಿದರು. ಈ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
4 ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ತಾಲೂಕಿನ ಜಕ್ಕಲಿ, ಮುಗಳಿ ಸೇರಿ ಕೆಲ ಕಡೆಗಳಲ್ಲಿ ಪರಿಹಾರ ವಿತರಣೆಯಾಗಿರುವುದಿಲ್ಲ ಎಂದು ತಿಳಿದು ಬಂದಿದ್ದು, ಕೂಡಲೇ ಪರಿಹಾರ ಚೆಕ್ ವಿತರಿಸಲು ಕಂದಾಯ ಇಲಾಖೆ ವಿಷಯ ನಿರ್ವಾಹಕ ಬಿ.ಎಚ್. ಗುಡಿಮನಿ (ಕೇಸ್ ವರ್ಕರ್) ಮತ್ತು ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಆದೇಶಿಸಲಾಗಿದೆ. ಒಂದು ವೇಳೆ ವಿಳಂಬ ಮಾಡಿದಲ್ಲಿ ಅಂಥವರ(ತಪ್ಪಿತಸ್ಥರ) ಮೇಲೆ ಸೂಕ್ತ ಕ್ರಮ ಕೈಗೊಂಡು ಮೊಕದ್ದಮೆ ದಾಖಲಿಸಲಾಗುವುದು.
- ಎನ್.ಎಸ್. ಪ್ರಸನ್ನಕುಮಾರ್, ಡಿಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

