ನಾಳೆ ದುಂದೂರು ಗ್ರಾಮದ ಶ್ರೀ ಫಕ್ಕೀರೇಶ್ವರ ರಥೋತ್ಸವ
ಕನ್ನಡಪ್ರಭ ವಾರ್ತೆ, ಗದಗ, ಮೇ 11
ಗದಗ ತಾಲೂಕಿನ ದುಂದೂರು ಗ್ರಾಮದ ಆರಾಧ್ಯದೈವ ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಗಳ ಜಾತ್ರಾ ರಥೋತ್ಸವ ಹಾಗೂ ನೂತನ ರಥ ಉದ್ಘಾಟನಾ ಕಾರ್ಯಕ್ರಮ ಮೇ 13ರಂದು ನಡೆಯಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಮೇ 12ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, 13ರಂದು ಬೆಳಗ್ಗೆಯಿಂದಲೇ ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ ಗ್ರಾಮದಲ್ಲಿ ಶ್ರೀ ಫಕ್ಕೀರೇಶ್ವರರ ಭಾವಚಿತ್ರದ ಮೆರವಣಿಗೆ ವಿವಿಧ ವಾದ್ಯಗಳೊಂದಿಗೆ ನಡೆಯಲಿದ್ದು, ಸಂಜೆ ರಥೋತ್ಸವ ಹಾಗೂ ನೂತನ ರಥ ಉದ್ಘಾಟನೆ ನೆರವೇರಲಿದೆ.
ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಯ ದರ್ಶನ ಮತ್ತು ಜಾತ್ರೆಯ ವೈಭವನನ್ನು ಸವಿಯಲು ಗದಗ ಹಾಗೂ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಪ್ರಸಕ್ತ ವರ್ಷದ ಜಾತ್ರೆಗೆ ಹೊಸ ರಥ ಸಿದ್ಧಪಡಿಸಿದ್ದು, ಇದಕ್ಕೆ ಚಾಲನೆ ನೀಡುವುದರಿಂದ ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ವಿಶೇಷವಾಗಿದೆ. ಶಿರಹಟ್ಟಿ ಫಕ್ಕೀರೇಶ್ವರ ಮಠದ ಆನೆ ಬರುತ್ತಿರುವುದರಿಂದ ಜಾತ್ರೆಗೆ ಮೆರಗು. ಮದುವೆಯಾಗಿ ಬೇರೆ ಗ್ರಾಮಗಳಿಗೆ ಹೋದ ದುಂದೂರು ಗ್ರಾಮದ ಮಹಿಳೆಯರು ಈ ಸಲದ ಜಾತ್ರಾ ಮಹೋತ್ಸವಕ್ಕೆ ಬರುತ್ತಿದ್ದು, ಹೀಗಾಗಿ ಈ ಸಲದ ಜಾತ್ರೆಯು ಪ್ರತಿ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿಸುತ್ತದೆ.
ಐತಿಹಾಸಿಕ ಹಿನ್ನೆಲೆ: ಕಾಜಾ ಅಮೀನುದ್ದೀನ ವರ ಸಂಜಾತರ ಭಾವೈಕ್ಯತೆಯ ಹರಿಕಾರರು, ಸರ್ವಧರ್ಮ ಸಮನ್ವಯ ಸಾರುವ ಶ್ರೀ ಜಗದ್ಗುರು ಕರ್ತೃ ಫಕ್ಕೀರೇಶ್ವರರು ಬಿಜಾಪುರದಿಂದ ಹೊರಟು ಸಂಚರಿಸುತ್ತಾ ಗದಗ ತಾಲೂಕಿನ ದುಂದೂರು ಗ್ರಾಮದಲ್ಲಿ ವಾಸ್ತವ್ಯ ಮಾಡಿದರು. ಗುರುವಿನ (ಕಾಜಾ ಅಮೀನುದ್ದೀನ) ಸಂಕಲ್ಪದ ಮೇರೆಗೆ ಶಿರಹಟ್ಟಿಗೆ ಹೊರಡುತ್ತಿರುವಾಗ ಸ್ಥಳೀಯ ಭಕ್ತರು ಶ್ರೀಗಳಿಗೆ ದುಂದೂರು ಗ್ರಾಮದಲ್ಲಿಯೇ ನೆಲೆಸಬೇಕೆಂದು ಅರಿಕೆ ಮಾಡಿಕೊಳ್ಳುತ್ತಾರೆ. ಆಗ ಶ್ರೀಗಳು ಗುರುವಿನ ಸಂಕಲ್ಪದಂತೆ ಶಿರಹಟ್ಟಿಗೆ ತೆರಳುತ್ತೇನೆ.
ಈ ಗ್ರಾಮದಲ್ಲಿ ಒಂದು ಕುರುಹುನ್ನು ಅನುಗ್ರಹಿಸಿ ಹೊರಡುತ್ತೇವೆ. ಕುರುಹಿನ ಸಂಕೇತವಾಗಿ ಅನುಷ್ಠಾನಗೈದ ಸ್ಥಳದಲ್ಲಿ ಮಲ್ಲಿಗೆಯ ಬಳ್ಳಿಯನ್ನು ಹಚ್ಚಿ ಹಾಗೂ ದುಂದೂರು-ಶ್ಯಾಗೋಟಿ ಗ್ರಾಮಗಳ ಮಾರ್ಗ ಮಧ್ಯೆದಲ್ಲಿ ಒಂದು ಬಾವಿಯನ್ನು ಸ್ಥಾಪಿಸಿದರು. ಮಲ್ಲಿಗೆಯ ವನ ಬಾಡುವುದಿಲ್ಲ, ಬಾವಿಯು ಬತ್ತುವುದಿಲ್ಲ. ಮಲ್ಲಿಗೆಯ ವನ ಬಾಡಿ, ಬಾವಿಯು ಜಲ ಬತ್ತಿದರೆ ನಾವು ಸ್ಥಾಪಿಸಿರತಕ್ಕಂತಹ ಗದ್ದುಗೆಯಲ್ಲಿ ನಿಮ್ಮ ಪಾಲಿಗೆ ಇರುವುದಿಲ್ಲವೆಂದೇ ಭಾವಿಸಬೇಕು ಎಂದು ಹೇಳಿದ್ದಾರೆ. 16ನೇ ಶತಮಾನದಿಂದ ಇಂದಿನ ವರೆಗೂ ದುಂದೂರು ಗ್ರಾಮದಲ್ಲಿ ಮಲ್ಲಿಗೆಯ ವನ ಬಾಡಿಲ್ಲ, ಬಾವಿಯ ಜಲ ಬತ್ತಿಲ್ಲ. ಶ್ರೀಗಳ ಆಸೆಯಂತೆ ಭಕ್ತರು ಮುಖ್ಯಮಠವಾದ ಶಿರಹಟ್ಟಿಯ ಫಕ್ಕೀರೇಶ್ವರ ಮಠ ಜಾತ್ರೆಗೆ ಮುನ್ನಾದಿನ ದುಂದೂರು ಗ್ರಾಮದಲ್ಲಿ ಶಾಖಾಮಠದಲ್ಲಿ ಪ್ರತಿ ವರ್ಷ ಫಕ್ಕೀರೇಶ್ವರರ ಜಾತ್ರಾ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ.
ಮಠದ ಸದ್ಯದ ಪೀಠಾಧ್ಯಕ್ಷರಾದ ಶಿವಪುತ್ರ ಮಹಾಸ್ವಾಮಿಗಳು ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆನಿಮರಿ ಸ್ವಾಮಿಗಳೂ ಶ್ರೀಗಳಿಗೆ ಸಾಥ್ ನೀಡುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷದ ಜಾತ್ರಾ ಮಹೋತ್ಸವದ ರಥೋತ್ಸವ ಮೇ 13ರಂದು ನಡೆಯಲಿದೆ. ಪ್ರತಿವರ್ಷವೂ ಶ್ರೀಗಳ ಭಾವಚಿತ್ರದ ಮೆರವಣಿಗೆಗೆ ಸೀಮಿತವಾಗಿತ್ತು. ದುಂದೂರು ಗ್ರಾಮದ ಹಾಗೂ ಇನ್ನಿತರ ಗ್ರಾಮಗಳ ಭಕ್ತರು ಸೇರಿ ಒಂದು ರಥ ಮಾಡಿಸಿದ್ದು, ಹೀಗಾಗಿ ಈ ವರ್ಷ ರಥೋತ್ಸವ ನಡೆಯಲಿದೆ. ಈ ಎಲ್ಲ ಕಾರಣಗಳಿಂದ ಈ ಸಲದ ಜಾತ್ರೆಗೆ ಹೊಸ ಮೆರಗು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

