ಗದಗ

ಪ್ಯಾಕೆಟ್ಮೇಲೆ ಹೆಸರು ಒಳಗೆ ಪೌಡರ್

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 20
ಸಿಡಿಪಿಒ ಕಚೇರಿಯಿಂದ ತಾಲೂಕಿನ ಅಂಗನವಾಡಿಗಳಿಗೆ ಪೂರೈಸುತ್ತಿರುವ ಫುಡ್(ಆಹಾರ ಧಾನ್ಯ) ಕಳಪೆ ಮಟ್ಟದ್ದಾಗಿದೆ. ತಾಲೂಕಿನ ಅತ್ತಿಕಟ್ಟಿ ಗ್ರಾಮದ ಅಂಗನವಾಡಿಗೆ ಆಕಸ್ಮಿಕ ಭೇಟಿ ನೀಡಿದಾಗ ಕಂಡುಬಂದಿತು. ಆಹಾರ ಪದಾರ್ಥಗಳ ದಿನಾಂಕ ಮುಗಿದಿದ್ದರೂ ಬಳಕೆ ಮಾಡಲಾಗುತ್ತಿದೆ. ಪ್ಯಾಕೆಟ್ ಮೇಲೆ ಹೆಸರು ಬೇಳೆ ಎಂದು ಬರದಿದ್ದರೆ ಒಳಗೆ ಯಾವುದೋ ಪೌಡರ್ ಪುಡಿ ಇದೆ. ಅದನ್ನ ತಿನ್ನುವ ಮಕ್ಕಳ ಗತಿ ಏನಾಗಬೇಕು ಎಂದು ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ ಸಿಡಿಪಿಒ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಮುಂಡರಗಿ ತಾಲೂಕು ಪಂಚಾಯ್ತಿ ಸಮರ್ಥಸೌಧದಲ್ಲಿ ಜರುಗಿದ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಪ್ರತಿ ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಆಹಾರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು. ಎಷ್ಟೋ ಫುಡ್ ಪ್ಯಾಕೇಟ್‌ಗಳ ಮೇಲೆ ಅವುಗಳನ್ನು ತಯಾರಿಸಿದ ದಿನಾಂಕವಿದೆ. ಆದರೆ, ಅದರ ಮುಕ್ತಾಯದ ದಿನಾಂಕ(ಎಕ್ಸ್‌ಪಾಯರ್ ದಿನಾಂಕ) ನಮೂದಿಸಿಲ್ಲ. ಒಂದು ವೇಳೆ ಅವಧಿ ಮುಗಿದ ಫುಡ್ ತಿಂದು ಮಕ್ಕಳಿಗೆ ತೊಂದರೆಯಾದರೆ ಇದಕ್ಕೆ ಹೊಣೆಯಾರು ಎಂದರು.
ಸಹಾಯಕಿಯರಿಗೆ ಸಂಬಳ ನೀಡಿಲ್ಲ: ತಾಲೂಕಿನಲ್ಲಿ 2 ವರ್ಷದಿಂದ 18 ರಿಂದ 20 ಜನ ಅಂಗನವಾಡಿ ಸಹಾಯಕಿಯರು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈವರೆಗೂ ಸಂಬಳ ನೀಡಿಲ್ಲ. ಸಂಬಳ ನೀಡದಿದ್ದರೆ ಅವರನ್ನೇಕೆ ದುಡಿಸಿಕೊಳ್ಳುತ್ತೀರಿ. ನಿಮಗೆ ಸಂಬಳ ಕೊಡಲು ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿ ಅವರೆಲ್ಲರನ್ನೂ ಕೆಲಸದಿಂದ ವಜಾ ಮಾಡಿ ಎಂದು ತಾಪಂ ಸದಸ್ಯ ಸಿದ್ದನಗೌಡ ಪಾಟೀಲ ಸಿಡಿಪಿಒ ಅಧಿಕಾರಿಗಳಿಗೆ ಹೇಳಿದರು.
ಸಿಡಿಪಿಒ ಎಸ್.ಎಸ್. ವಾರದ ಇದಕ್ಕೆ ಉತ್ತರ ನೀಡಿ ಈ ಸಹಾಯಕಿಯರಿಗೆ ಕೆಲಸ ಮಾಡುವಂತೆ ಇಲಾಖೆಯಿಂದ ಯಾವುದೇ ಮಾಹಿತಿ ನೀಡಿಲ್ಲ. ಅವರಿಗೆ ವೇತನ ನೀಡುವ ಯಾವುದೇ ಯೋಜನೆಯೂ ನಮ್ಮಲ್ಲಿಲ್ಲ ಎಂದರು. ಸಹಾಯಕಿಯರು ಇಂದಿಲ್ಲ ನಾಳೆ ನಮ್ಮ ಕೆಲಸ ಕಾಯಂ ಆಗಬಹುದು ಎಂಬ ಆಸೆಯಿಂದ ದುಡಿಯುತ್ತಿದ್ದಾರೆ. ನಿಮ್ಮಲ್ಲಿ ಆ ಯೋಜನೆ ಇಲ್ಲದೇ ಹೋದರೆ ಅವರಿಗೆ ಆಸೆ ತೋರಿಸಬೇಡಿ, ಖಂಡಿತವಾಗಿ ನಿಮ್ಮನ್ನು ಕಾಯಂ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಬಿಡಿ. ಅವರು ಜೀವನಕ್ಕಾಗಿ ದುಡಿಯುವ ಬೇರೆ ದಾರಿಯನ್ನಾದರೂ ಹುಡಕುತ್ತಾರೆ ಎಂದು ಸಿದ್ದನಗೌಡ ಪಾಟೀಲ ತಿಳಿಸಿದರು.
ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಹೊಂದಿದ ಮುಂಡರಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ರಾತ್ರಿ ಹಚ್ಚಿದ ಬೀದಿ ದೀಪಗಳ ಹಗಲು ಹೊತ್ತಿನಲ್ಲಿಯೂ ಉರಿಯುತ್ತವೆ. ಅದರ ಕುರಿತು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸದಸ್ಯ ಪಾಲಾಕ್ಷಗೌಡ ಪಾಟೀಲ ಹೆಸ್ಕಾಂ ಅಧಿಕಾರಿಯನ್ನು ಕೇಳಿದರು. ಅವರು ಈ ಕುರಿತು ಇಂದೇ ಸಂಬಂಧಪಟ್ಟ ಗ್ರಾಪಂಗಳಿಗೆ ಹಾಗೂ ಅಧಿಕಾರಿಗಳಿಗೆ ಮಾತನಾಡುವುದಾಗಿ ತಿಳಿಸಿದರು.
ರೈತರಿಗೆ ಉಪಯುಕ್ತ ಮಾಹಿತಿ ನೀಡಿ: ಕೃಷಿ ಇಲಾಖೆಯ ಅಧಿಕಾರಿ ಎಸ್.ಎಚ್. ಪಾಟೀಲ ಮಾಹಿತಿ ನೀಡುತ್ತಿರುವಾಗ ಸದಸ್ಯ ನಿಂಗಬಸಪ್ಪ ಪ್ಯಾಟಿ ಮಧ್ಯೆ ಪ್ರವೇಶಿಸಿ ವರ್ಷಕ್ಕೆ ರು. 5000 ಖರ್ಚು ಮಾಡಿ ಡಂಬಳ ಮತ್ತು ಮುಂಡರಗಿ ಜಾತ್ರೆಯಲ್ಲಿ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದೀರಿ, ಇದರಿಂದ ಎಷ್ಟು ಜನ ರೈತರು ಉಪಯೋಗ ಪಡೆದುಕೊಂಡಿದ್ದಾರೆ ಲೆಕ್ಕ ಕೊಡಿ ಎಂದರು. ರೈತರಿಗೆ ಕೃಷಿಗೆ ಸಂಬಂಧಪಟ್ಟ ಮಾಹಿತಿ ಕೈಪಿಡಿ ನೀಡುತ್ತಿಲ್ಲ. ಪ್ರದರ್ಶನದಲ್ಲಿ ಕೆಲವು ಕೃಷಿ ಸಾಮಗ್ರಿಗಳನ್ನು ಮತ್ತು ತೋಟಗಾರಿಕೆ ಇಲಾಖೆಯವರು ಕೆಲವು ಹಣ್ಣು ಎಳೆನೀರು ಕಾಯಿಗಳನ್ನು ತಂದು ಪ್ರದರ್ಶನ ಮಾಡಿದರೆ ಸಾಲದು, ಅದರಿಂದ ರೈತರಿಗೆ ಉಪಯುಕ್ತವಾದ ಮಾಹಿತಿ ನೀಡುವ ಕೆಲಸವಾಗಬೇಕು ಎಂದರು.
ಸದಸ್ಯೆ ನೂರಜಾನ ಮುಂಡರಗಿ ಮಾತನಾಡಿ, ಹಿರೇವಡ್ಡಟ್ಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದನ್ನು ಬಗೆಹರಿಸಿ ಎಂದು ಸಭೆಗೆ ತಿಳಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ ಅದನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಶಿಕ್ಷಣ, ತೋಟಗಾರಿಕೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿ 2014-15ರ ಬಜೆಟ್ ಮಂಡಿಸಲಾಯಿತು. ರಾಜಶೇಖರ ರಾಠೋಡ, ಹೇಮಾವತಿ ನಾಯಕ್, ಸದಸ್ಯರು ಹಾಜರಿದ್ದರು. ತಾಪಂ ಅಧ್ಯಕ್ಷ ತಾರೂಬಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಕ್ಕಮಹಾದೇವಿ ಹಾರೋಗೇರಿ ಇದ್ದರು. ಕಚೇರಿ ಸಿಬ್ಬಂದಿ ಇನಾಮದಾರ ಸ್ವಾಗತಿಸಿದರು. ಎಂ.ಎ. ರಡ್ಡೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.