ಗಜೇಂದ್ರಗಡ ಸುತ್ತ ನಕಲಿ ವೈದ್ಯರ ಹಾವಳಿ
ಗಜೇಂದ್ರಗಡ: ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾದ ನಕಲಿ ವೈದ್ಯರ ಅಟ್ಟಹಾಸ ಪಟ್ಟಣದಲ್ಲಿ ಮಿತಿ ಮೀರಿದೆ. ಜನರ ಜೀವ ಜತೆ ಚೆಲ್ಲಾಟವಾಡುವ ನಕಲಿ ವೈದ್ಯರ ಜಾಲಕ್ಕೆ ಸಿಲುಕಿ ನಲುಗಿರುವ ಅಮಾಯಕ ಗ್ರಾಮೀಣ ಜನರ ಜೀವಕ್ಕೆ ಕುತ್ತು ಎದುರಾದರೂ ಯಾರೂ ಕೇಳೋರಿಲ್ಲದಂತಾಗಿದೆ.
ಪಟ್ಟಣದಲ್ಲಿ ಜನಸಂಖ್ಯೆ ಬೆಳೆದಂತೆ ನಕಲಿ ವೈದ್ಯರು ನಾಯಿ ಕೊಡೆಯಂತೆ ಲಂಗು ಲಗಾಮಿಲ್ಲದೆ ಪದವಿ, ಪರವಾನಗಿ ಹೊಂದದೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವುದು ಜನರ ಜೀವನ ಮೇಲೆ ದುಷ್ಪರಿಣಾಮ ಬೀರಿದೆ. ಅಕ್ರಮವಾಗಿ ವೈದ್ಯಕೀಯ ಚಿಕಿತ್ಸೆಯಿಂದ ಹಲವಾರು ಘಟನೆಗಳು ನಿತ್ಯ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಂಪೌಂಡರ್ ಬಳಿಕ ಡಾಕ್ಟರ್: ಪಟ್ಟಣದಲ್ಲಿ ಐಎಂಎ ಸಂಸ್ಥೆ ಸದಸ್ಯತ್ವ ಪಡೆದ ವೈದ್ಯರು ಕೇವಲ ಬೆರಳಿಣಿಕೆಯಷ್ಟು ಇದ್ದಾರೆ. ಆದರೆ, ಎಣಿಸಿದರೆ ಓಣಿಗೆ ಇಬ್ಬಿಬ್ಬರು ನಕಲಿ ವೈದ್ಯರು ಸಿಗುತ್ತಾರೆ. ಇವರಾರೂ ವೈದ್ಯಕೀಯ ಪದವಿ ಅಥವಾ ಸಮಾನ ಪ್ರಮಾಣ ಪತ್ರ ಸಹ ಹೊಂದಿಲ್ಲ. ಕಾನೂನು ಬಾಹಿರವಾಗಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಇಂಜಕ್ಷನ್ ಜತೆಗೆ ಆಪರೇಶನ್ ಮಾಡುವುದು ಇವರ ಮುಖ್ಯ ಟಾರ್ಗೆಟ್.
ಅಸಲಿಗಿಂತ ನಕಲಿ ವೈದ್ಯರೆ ಹೆಚ್ಚು: ಭಾರತಿಯ ವೈದ್ಯಕೀಯ ಸಂಘದಡಿ ಸೇವೆ ಸಲ್ಲಿಸುವ ವೈದ್ಯರ ಬಳಿ ಕೆಲ ತಿಂಗಳು ಕಂಪೌಂಡ್ರ ಕೆಲಸ ಮಾಡಿದ ಬಳಿಕ ಪಟ್ಟಣದಲ್ಲಿ ದವಾಖಾನೆ ತೆರದಿರುವ ನಕಲಿ ವೈದ್ಯರು ಅವಿದ್ಯಾವಂತ ಗ್ರಾಮೀಣ ಜನರ ಜೀವ ಜತೆ ಚೆಲ್ಲಾಟ ನಡೆಸಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿಗೆ ಐಎಂಎ ಸಾಕಷ್ಟು ಬಾರಿ ದೂರು ನೀಡಿದರೂ ನಿಷ್ಪ್ರಯೋಜಕವಾಗಿದೆ. ಜತೆಗೆ ಜಿಲ್ಲಾ ವೈದ್ಯಾಧಿಕಾರಿಗಳ ಮೌನ ಹಲವು ಗುಮಾನಿಗೆ ಕಾರಣವಾಗಿದೆ ಎಂದು ಜನ ಅಪಾದಿಸುತ್ತಾರೆ. ಐಎಂಎ ವೈದ್ಯರಿದ್ದರೂ ನಕಲಿ ವೈದ್ಯರ ಆಸ್ಪತ್ರೆಗೆ ಜನ ತಪಾಸಣೆಗೆ ಹೊಗುತ್ತಿದ್ದಾರೆ. ಜ್ವರಕ್ಕೆ ಸಂದು ನೋವಿಗೆ ನೋವು ನಿವಾರಕ ಔಷಧಿ ನೀಡಿ ಕಳಿಸಲಾಗುತ್ತಿದೆ. ಕಾಯಿಲೆಗೆ ತುತ್ತಾದವರಲ್ಲಿ ಬಹು ಪಾಲು ನಕಲಿ ವೈದ್ಯರ ಪರಿಣಾಮಕಾರಿ ಔಷಧಿ ಪಡೆದು ನಲುಗುತ್ತಿದ್ದರೂ ಯಾರೂ ಕೇಳುವರಿಲ್ಲದಂತಾಗಿದೆ.
ಜಿಲ್ಲಾ ವೈದ್ಯಾಧಿಕಾರಿ ನಿರ್ಲಕ್ಷ್ಯ: ಆರೋಪ
ನಕಲಿ ವೈದ್ಯರ ಅಟ್ಟಹಾಸ ಮಟ್ಟ ಹಾಕುವಲ್ಲಿ ಜಿಲ್ಲಾ ವೈದ್ಯಾಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಜನ ದೂರುತ್ತಾರೆ. ಮಲೇರಿಯಾ ರೋಗಕ್ಕೆ ಈಡಾಗಿರುವ ಮಕ್ಕಳು, ಮಹಿಳೆಯರು, ವೃದ್ಧರು ಕೈ ಕಾಲು, ತಲೆ ನೋವು, ಜ್ವರದಿಂದ ಬಳಲುತ್ತಿರುವುದು ಈಗ ಸಾಮಾನ್ಯವಾಗಿದೆ. ಪಟ್ಟಣ ಸುತ್ತಲಿನ ಗ್ರಾಮಗಳ ಬಡ ಜನತೆ ಗೋವಾ, ಮಂಗಳೂರು ಇತರ ಭಾಗಗಳಿಗೆ ದುಡಿಯಲು ಹೋಗಿ ಬಂದವರಲ್ಲಿ ಮಲೇರಿಯಾ ಈಗಾಗಲೇ ಹೆಚ್ಚಾಗಿ ಕಂಡು ಬಂದಿದೆ. ಚರಂಡಿ ನೀರು ಹೆಚ್ಚಾಗಿ ಸೊಳ್ಳೆಗಳು ಅಧಿಕವಾಗಿ ಕಚ್ಚುವುದರಿಂದ ರೋಗ ಬಾಧಿತರು ಕೈ, ಕಾಲು, ಕೀಲು ನೋವಿನಿಂದ ಬಳಲುತ್ತಿದ್ದಾರೆ. ಇದನ್ನೆ ಬಂಡವಾಳವಾಗಿಸಿಕೊಂಡಿರುವ ನಕಲಿ ವೈದ್ಯರ ವಿರುದ್ಧ ಸಾರ್ವಜನಿರನ್ನು ಕೆರಳಿಸಿದೆ.
ಗಜೇಂದ್ರಗಡ ಪಟ್ಟಣ ಸುತ್ತಲಿನ ಗ್ರಾಮಗಳಲ್ಲಿ ನಕಲಿ ವೈದ್ಯರ ಹಾವಳಿ ಬಗ್ಗೆ ಸಾರ್ವಜನಿಕರು, ಮಾಧ್ಯಮಗಳಿಂದ ತಿಳಿದು ಬಂದಿದ್ದು, ಈ ಕುರಿತು ರಾಜ್ಯ ನಕಲಿ ವೈದ್ಯರ ಹಾವಳಿ ನಿಯಂತ್ರಣಾ ತಂಡ ರಾಜ್ಯಾದ್ಯಾಂತ ಕಾರ್ಯಾಚರಣೆ ಮೂಲಕ ನಕಲಿ ವೈದ್ಯರ ಜಾಲ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಗೂ ಶೀಘ್ರ ನಕಲಿ ವೈದ್ಯ ನಿಯಂತ್ರಣ ತಂಡ ಆಗಮಿಸಲಿದೆ. ಶೀಘ್ರ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
- ಡಿ.ಬಿ. ಚನ್ನಶೆಟ್ಟಿ,
ಜಿಲ್ಲಾ ವೈದ್ಯಾಧಿಕಾರಿ
ಗಜೇಂದ್ರಗಡ ಸುತ್ತಲಿನ ಗ್ರಾಮಗಳಲ್ಲಿ ಮಲೇರಿಯಾ ರೋಗ ನಿಯಂತ್ರಿಸುವ ಆಡಳಿತ ಕ್ರಮಗಳು ಡಕೋಟಾ ವಾಹನದಂತಾಗಿವೆ. ಇದು ನಕಲಿ ವೈದ್ಯರಿಗೆ ವರವಾಗಿದೆ. ಪಟ್ಟಣದಲ್ಲಿ ಮಿತಿಮೀರಿದ ನಕಲಿ ವೈದ್ಯರ ಹಾವಳಿಗೆ ಕಠಿಣ ಕಾನೂನು ಕ್ರಮಗಳಿಂದ ಕಡಿವಾಣ ಹಾಕಬೇಕಾದ ಜಿಲ್ಲಾ ವೈದ್ಯಾಧಿಕಾರಿ ಮೌನ ಹಲವು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ. ಈಗಲಾದರೂ ಎಚ್ಚೆತ್ತುಕೊಂಡು ದಾಳಿ ಮಾಡಲು ಮುಂದಾಗಬೇಕು.
- ಪ್ರಜ್ಞಾವಂತ ನಾಗರಿಕರು, ಗಜೇಂದ್ರಗಡ
-ಡಿ.ಜಿ. ಮೋಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

