ಸಮಾಜದ ಒಳಿತು ಎಲ್ಲರಿಂದ ಸಾಧ್ಯ: ಚಿತ್ರದುರ್ಗ ಮುರುಘಾಶ್ರೀ
ಲಕ್ಷ್ಮೇಶ್ವರ: ಸಮಾಜಕ್ಕೆ ಕಲ್ಯಾಣ ಮಾಡುವ ಕಾರ್ಯ ಕೇವಲ ಸ್ವಾಮಿಗಳಿಂದ, ಮಠ-ಮಾನ್ಯಗಳಿಂದ, ಧರ್ಮ ಗುರುಗಳಿಂದ ಮಾತ್ರ ಸಾಧ್ಯವಿಲ್ಲ. ಒಳಿತು ಮಾಡುವ ಕಾರ್ಯ ಸಮಾಜದ ಪ್ರತಿಯೊಬ್ಬರಿಂದಲೂ ಸಾಧ್ಯ ಎಂದು ಚಿತ್ರದುರ್ಗದ ಮುರುಘಾಮಠದ ಡಾ, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.
ಸಮೀಪದ ಬಾಲೆಹೊಸೂರಿನ ದಿಂಗಾಲೇಶ್ವರಮಠದ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂಸಾರಿಯಾಗಿದ್ದುಕೊಂಡು ಶರಣರ ತತ್ವಗಳನ್ನು ಅರಿತುಕೊಂಡು ಬಾಳುವುದುನ್ನು ಕಲಿತುಕೊಳ್ಳಬೇಕಾಗಿದೆ. ನಾವು ಪ್ರತಿದಿನವು ಒಳ್ಳೆಯ ಆಲೋಚನೆ ಮಾಡಬೇಕು. ಇದರಿಂದ ನಮ್ಮ ಮನಸ್ಸು ಕೂಡಾ ಒಳ್ಳೆದಾಗಿ ಯೋಚಿಸುತ್ತದೆ. ನಮ್ಮ ಬದುಕು ಹಸನಾಗುತ್ತದೆ. ಕಲ್ಯಾಣ ನಮ್ಮೊಳಿಗಿನ ಭಾವನೆಯಾಗಿದೆ. ಯಾರಿಗೂ ಮೋಸ ಮಾಡದೆ, ಮನೆ ಮುರುಕುತನ ಮಾಡದೆ ಸಮಾಜಕ್ಕೆ ಒಳ್ಳೆಯದು ಮಾಡುವ ಗುಣ ಬೆಳೆಸಿಕೊಳ್ಳಬೇಕಾಗಿದೆ. ನಾಡಿನ ತುಂಬ ಪ್ರವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಮಾಜವನ್ನು ಕಟ್ಟುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಜಂಗಮಶಕ್ತಿಯು ಅದ್ಭುತವಾದ ಶಕ್ತಿಯಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಂತಾಗಬೇಕಾಗಿದೆ. ಮಠ-ಮಾನ್ಯಗಳ ಸ್ವಾಮಿಗಳು ತಮ್ಮ ರಕ್ತ ಸಂಬಂಧಿಗಳನ್ನು ಮಠ-ಮಾನ್ಯಗಳಿಗೆ ಪೀಠಾಧಿಪತಿಗಳನ್ನಾಗಿ ಮಾಡುತ್ತಿರುವ ಕೆಟ್ಟ ಸಂಪ್ರದಾಯ ನಿಲ್ಲಬೇಕು ಎಂದರು.
ಶಿರಹಟ್ಟಿಯ ಫಕ್ಕೀರಸಿದ್ದರಾಮ ಸ್ವಾಮೀಜಿ ಮಾತನಾಡಿ, ಹೊಸ ಬಾಳಿಗೆ ಹೆಜ್ಜೆ ಹಾಕುವ ನೀವು ನಿಮ್ಮ ಮನೆಯವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ಮನೆ ಹಾಗೂ ಮನಸ್ಸು ಕಟ್ಟುವ ಕಾರ್ಯವನ್ನು ಯುವ ಜೋಡಿಗಳು ಮಾಡಬೇಕಾಗಿದೆ ಎಂದರು.
ಜಮಖಂಡಿಯ ಓಲೆಮಠದ ಡಾ. ಚೆನ್ನಬಸವ ಸ್ವಾಮೀಜಿ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು, ಹೂವಿನ ಹಿಪ್ಪರಗಿಯ ಶ್ರೀಗಳು, ಬಿಜಕಲ್ ಶ್ರೀಗಳು, ಕೋಡಿಹಳ್ಳಿಮಠದ ಶಿವಾನಂದ ರಾಜೇಂದ್ರ ಸ್ವಾಮಿಗಳು, ಸಂಶಿಯ ಬೃಹನ್ಮಠದ ಶ್ರೀಗಳು, ಶಾಸಕ ರಾಮಕೃಷ್ಣ ದೊಡ್ಡಮನಿ ಹಾಜರಿದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 80ಕ್ಕೂ ಹೆಚ್ಚು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 40 ಸಾವಿರಕ್ಕಿಂತ ಹೆಚ್ಚಿನ ಜನಸಮೂಹ ವಿವಾಹ ಕಾರ್ಯವನ್ನು ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

