ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಸ್ಥಗಿತಗೊಳಿಸಿ: ಮನವಿ
ಗದಗ: ಶಿಕ್ಷಣ ಇಲಾಖೆಯ ಕೆಲವೊಂದು ತಪ್ಪು ತಿಳಿವಳಿಕೆಯಿಂದ ಸದ್ಯಕ್ಕೆ ಚಾಲ್ತಿಯಲ್ಲಿರುವ ಅನುದಾನಿತ ಪ್ರೌಢಶಾಲಾ ಶಿಕ್ಷಕರನ್ನು ಹೆಚ್ಚುವರಿಯೆಂದು ಗುರುತಿಸಿದ್ದು, ಸರ್ಕಾರದ ಅವೈಜ್ಞಾನಿಕ ನೀತಿ ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಜಿಲ್ಲಾಧ್ಯಕ್ಷ ಧೀರಣ್ಣ ಹುಯಿಲಗೋಳ ನೇತೃತ್ವದಲ್ಲಿ ಸೋಮವಾರ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು. ತಾಲೂಕಿನ ಸಂಘದ ಎಲ್ಲ ಪದಾಧಿಕಾರಿಗಳಾದ ಎಂ.ಕೆ. ಲಮಾಣಿ, ಯಲವಗಿ, ಹೊಸಮನಿ ಎಸ್.ಎಂ. ಕೋರಿ. ಎಸ್.ಜಿ. ಕಿತ್ತೂರ. ಕೆ.ಬಿ. ಭಜಂತ್ರಿ, ಪಿ.ಎಫ್. ಆನಂದರಭಾವಿ, ಜಿ.ಎಸ್. ಪಾಟೀಲ, ಎನ್.ವಿ. ಪಾಟೀಲ, ಎಚ್.ಜಿ. ದೇಸಾಯಿ, ಎಸ್.ಬಿ. ಹೆಬ್ಬಾಳ, ವಿ.ಎ. ಪಾಟೀಲ, ಎನ್.ಎನ್. ನೆಗಳೂರ, ವಿ.ಎನ್. ಶೆಟ್ಟರ, ಬಿ.ಎಸ್. ಹೊನಗುಡಿ, ಬಿ.ಎಸ್. ನಿಪ್ಪಾಣಿ ಇನ್ನಿತರರಿದ್ದರು.
ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು
ಗದಗ: ತೋಟದಲ್ಲಿನ ಬೋರ್ವೆಲ್ ಪೈಪ್ಗಳನ್ನು ಮೇಲೆಕ್ಕೆತ್ತುವಾಗ ಹಾಯ್ದು ಹೋಗಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ಪೈಪ್ಗಳು ತಾಗಿದ ಪರಿಣಾಮ ಕೆಲಸದಲ್ಲಿ ನಿರತರಾಗಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಶಿರೋಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಮೃತನನ್ನು ಮಂಜುನಾಥ ಪೂಜಾರ (19) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಶಂಕರಗೌಡ್ರ ವಿರೂಪಾಕ್ಷಗೌಡ್ರ ಪಾಟೀಲ್ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾನೆ. ಘಟನೆಯ ಬಳಿಕ ಸ್ಥಳಕ್ಕೆ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ನರಗುಂದ ಮತ್ತು ಕೊಣ್ಣೂರು ಉಪವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಮೇ 27ರಂದು ಬೆಳಗ್ಗೆ 10 ಗಂಟೆಯಿಂಜ ಸಂಜೆ 5 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ 110 ಕೆವಿ ನರಗುಂದ ಮತ್ತು ಕೊಣ್ಣೂರು ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ 11 ಕೆವಿ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಒದಗಿಸಿ
ನರಗುಂದ: ತಾಲೂಕಿನ ಶಿರೋಳ ಗ್ರಾಮದಲ್ಲಿ ಸತತವಾಗಿ 4 ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದ್ದಕ್ಕೆ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳು ಮತ್ತು ಗ್ರಾಪಂ ವಿರುದ್ಧ ಆಕ್ರೋಶಗೊಂಡು ಸೋಮವಾರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸುದ್ದಿ ತಿಳಿದ ಹೆಸ್ಕಾಂ ಅಧಿಕಾರಿ ಎಂ.ಎ. ಸಗ್ರಿ, ಸಿಪಿಐ ಎಸ್.ಆರ್. ಪಾಟೀಲ ಸ್ಥಳಕ್ಕಾಗಮಿಸಿ ಪ್ರತಿಭಟನೆ ನಿರತ ಗ್ರಾಮಸ್ಥರನ್ನು ಸಮಾಧಾನಗೊಳಿಸಲು ಎಷ್ಟೆ ಪ್ರಯತ್ನ ಮಾಡಿದರೂ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಸಿಪಿಐ ಎಸ್.ಆರ್. ಪಾಟೀಲ ಮಾತನಾಡಿ, ನೀವು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಎಲ್ಲರೂ ಕೂಡಿ ಹೆಸ್ಕಾಂ ಅಧಿಕಾರಿಗಳ ಜತೆ ಚರ್ಚಿಸಿದರೆ ಮಾತ್ರ ಆಗಿರುವ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು. ಹೆಸ್ಕಾ ಅಧಿಕಾರಿ ಎಂ.ಎ. ಸಗ್ರಿ, ಶಿರೋಳ ಗ್ರಾಮಕ್ಕೆ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಸಂಪರ್ಕ ಪೂರೈಕೆ ಮಾಡುವುದು ತೊಂದರೆಯಾಗಿದೆ. ಅದಕ್ಕೆ ಗ್ರಾಮಸ್ಥರು ಪ್ರತಿಭಟನೆ ಕೈ ಬಿಡಿ ನಿಮ್ಮ ಗ್ರಾಮಕ್ಕೆ ಏನೇ ತೊಂದರೆ ಇದ್ದರೂ 2 ದಿನಗಳಲ್ಲಿ ವಿದ್ಯುತ್ ಪೂರೈಸಲಾಗುವುದು ಎಂದರು.
ಟಿಸಿ ರಿಪೇರಿ ಮಾಡಿಸಿ
ಗದಗ: ತಾಲೂಕಿನ ಲಕ್ಕುಂಡಿ ಹಾಗೂ ಸಂಭಾಪುರ, ಪಾಪನಾಶಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಪರಿವರ್ತಕ ಸುಟ್ಟು ಬಹಳ ದಿನಗಳಾಗಿದ್ದು. ರಿಪೇರಿ ಮಾಡಬೇಕು ಎಂದು ಹಲವಾರು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಸ್ಥರು ಗದಗ ನಗರದ ಹೆಸ್ಕಾಂ ಕಚೇರಿ ಮುಂಭಾಗ ಅರ್ಧ ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಪರಿವರ್ತಕ ಸುಟ್ಟು 25 ದಿನಗಳಾಗಿವೆ. ಇದರಿಂದ ರೈತರು ಅಪಾರ ಹಣ ಖರ್ಚು ಮಾಡಿ ಬೆಳೆದಿದ್ದ ನೀರಾವರಿ ಬೆಳೆಗಳು ಒಣಗುತ್ತಿವೆ. ನಮ್ಮ ಸಮಸ್ಯೆ ಗಮನಿಸಿ, ಕೂಡಲೇ ಪರಿವರ್ತಕ ಕಲ್ಪಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮಾತ್ರ ರೈತರ ಸಮಸ್ಯೆಗೆ ಸ್ಪಂದಿಸದೇ, ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಎಂದು ಸಾಗ ಹಾಕುತ್ತಲೇ ಬಂದಿದ್ದಾರೆ. ಗದಗ ಎಪಿಎಂಸಿ ಉಪಾಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಕೆ.ಎಚ್. ನಾಗನೂರ, ಯಲ್ಲಪ್ಪ, ಚಂದಪ್ಪ, ಎಂ.ಡಿ. ಪಾಟೀಲ, ಅಂದಪ್ಪ ಮಾಗಡಿ, ಶೇಖಪ್ಪ ಹಟ್ಟಿ, ಪಿ.ಪಿ. ನರಗುಂದ, ಸುರೇಶ ಯಾವಗಲ್ಲ, ಪಂಚಯ್ಯ ನರಗುಂದ ಇದ್ದರು.
ಬಂಡಾಯ ಸ್ಪರ್ಧೆಗೆ ಚಿಂತನೆ
ರೋಣ: ಜೂನ್ 20ರಂದು ಜರುಗಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ನಿಂದ ಸ್ಪರ್ಧಿಸುವಲ್ಲಿ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಈಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ರಾಜ್ಯ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ, ಜೆಡಿಎಸ್ ನರಗುಂದ ವಿಧಾನಸಭೆ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ಎಚ್.ಆರ್. ಕಲ್ಮನಿ ಹೇಳಿದರು. ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪದವೀಧರರ ಜ್ವಲಂತ ಸಮಸ್ಯೆಗಳ ಕುರಿತು 10 ವರ್ಷಗಳಿಂದ ವಿವಿಧ ಸಂಘಟನೆಗಳ ಮೂಲಕ ಸಂಪರ್ಕ ಹೊಂದಿ ಮತ್ತು ನಾನಾ ಭಾಗಗಳಲ್ಲಿ ಪ್ರವಾಸ ಮಾಡಿ ಅರಿತಿದ್ದೇನೆ. ಅಲ್ಲದೇ ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತನಾಗಿ 8 ವರ್ಷಗಳಿಂದ ಅವಿರತ ಶ್ರಮಿಸಿದ್ದೇನೆ. ಈಗಾಗಲೇ ಸರ್ಕಾರಿ ಅತಿಥಿ ಉಪನ್ಯಾಸಕರ ಕುಂದು-ಕೊರತೆ ಹೋಗಲಾಡಿಸುವಲ್ಲಿ ಅನೇಕ ಹೋರಾಟ ನಡೆಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸೆಕೆಂಡರಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಿ.ಎನ್. ಅಮಾತಿಗೌಡ್ರ, ಆರ್.ವಿ.ಪವಾಡಶೆಟ್ಟಿ, ಮಲ್ಲು ಗೊಲ್ಲ್ಲೂರ, ಪ್ರಭುರಾಜಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

