ಜಾಹೀರಾತು ಅನುಮೋದನೆ: ಕಾಸಿಗಾಗಿ ಸುದ್ದಿ ಪರಿಶೀಲನಾ ಸಮಿತಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.2
ಕರ್ನಾಟಕ ವಿಧಾನಸಭಾ ಚುನಾವಣೆ-2013ರ ವಿವಿಧ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೀಡುವ ಜಾಹೀರಾತು ಪರಿಶೀಲನೆಗಾಗಿ ಸುದ್ದಿಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಸಮಿತಿ ರಚಿಸಲು ಚುನಾವಣಾ ಆಯೋಗ ಸೂಚಿಸಿದೆ.
ಈ ಸಮಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಉಪವಿಭಾಗ ದಂಡಾಧಿಕಾರಿ ಮಟ್ಟದ ಒಬ್ಬ ಅಧಿಕಾರಿ, ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಅಧಿಕಾರಿ, ಭಾರತೀಯ ಪತ್ರಿಕಾ ಮಂಡಳಿ ಸೂಚಿಸುವ ಪತ್ರಕರ್ತ ಇಲ್ಲವೇ ಸ್ವಾತಂತ್ರ್ಯ ನಾಗರಿಕ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಇರುತ್ತಾರೆ.
ಪರಿಶೀಲನೆ: ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಮಟ್ಟದ ಅಧಿಕಾರಿಗಳೇ ಪರಿಶೀಲಿಸಿ ಅನುಮೋದನೆ ನೀಡಬಹುದಾಗಿದೆ. ಆದರೆ ಕಾಸಿಗಾಗಿ ಸುದ್ದಿ ಪ್ರಕಟವಾಗುವ ಸಂದರ್ಭದಲ್ಲಿ ಸಮಿತಿಯ ಎಲ್ಲ ಸದಸ್ಯರು ಪರಿಶೀಲಿಸಬೇಕಾಗಿದೆ. ಸಮಿತಿಯು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೇಬಲ್ ನೆಟ್ವರ್ಕ್, ಇಂಟರ್ನೆಟ್, ಮೊಬೈಲ್ ನೆಟ್ವರ್ಕ್ಗಳು ಸೇರಿದಂತೆ ಎಲ್ಲ ಮಾಧ್ಯಮಗಳ ಮೇಲೆ ನಿಗಾ ಇಟ್ಟು ಕಾಸಿಗಾಗಿ ಸುದ್ದಿ ಎಂದು ಅನುಮಾನಿಸಲಾದ ಸುದ್ದಿಗಳನ್ನು ಪರಿಶೀಲಿಸಬೇಕಾಗಿದೆ ಹಾಗೂ ಸಂಬಂಧಿಸಿದವರಿಗೆ ನೋಟೀಸ್ ನೀಡಿ ವಿವರಣೆ ಪಡೆಯಬೇಕಾಗುತ್ತದೆ.
ಕಾಸಿಗಾಗಿ ಸುದ್ದಿ ಪ್ರಕಟವಾದ ಸಂದರ್ಭದಲ್ಲಿ ಅಭ್ಯರ್ಥಿಯು ಹಣ ಪಾವತಿಸಿರಲಿ ಅಥವಾ ಇಲ್ಲದಿರಲಿ, ವಾರ್ತಾ ಇಲಾಖೆ ನಿಗದಿಪಡಿಸಿದ ಜಾಹೀರಾತು ದರ ಇಲ್ಲವೇ ಆಯಾ ಮಾಧ್ಯಮಗಳ ವಾಸ್ತವ ಜಾಹೀರಾತು ದರವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲು ಚುನಾವಣಾ ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿರುತ್ತದೆ.
ಮಾಹಿತಿ: ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಅನುಮೋದನೆ ಪಡೆಯಲಾಗಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸಬೇಕಾಗಿರುತ್ತದೆ. ಇತರೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ಪರಿಶೀಲನಾ ದೃಷ್ಟಿಯಿಂದ ಸಲಹೆಯು ಗಮನಿಸಬೇಕಾಗುತ್ತದೆ. ಅಭ್ಯರ್ಥಿಯ ಪರವಾಗಿ ಅಭ್ಯರ್ಥಿಯ ಒಪ್ಪಿಗೆ ಪಡೆದು ಅಥವಾ ಪಡೆಯದೆಯೂ ಪ್ರಕಟವಾಗುವ ಜಾಹೀರಾತುಗಳನ್ನು ಪರಿಶೀಲಿಸಿ ಚುನಾವಣಾಧಿಕಾರಿಗಳಿಗೆ ಮಾಹಿತಿಯನ್ನು ಸಮಿತಿ ನೀಡಬೇಕಾಗಿದೆ. ಅಭ್ಯರ್ಥಿ ಒಪ್ಪಿಗೆಯಿಂದ ಪ್ರಕಟವಾಗುವ ಜಾಹೀರಾತುಗಳ ವೆಚ್ಚವನ್ನು ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿಯ ಒಪ್ಪಿಗೆ ಇಲ್ಲದಿದ್ದಲ್ಲಿ ಜಾಹೀರಾತು ನೀಡಿದವರ ವಿರುದ್ಧ ಕ್ರಮ ವಹಿಸಲಾಗುತ್ತದೆ.
ಇತರೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಲ್ಲಿ ಕರಪತ್ರ, ಪೋಸ್ಟರ್, ಮತ್ತಿತರ ಚುನಾವಣಾ ಸಾಮಗ್ರಿಯಲ್ಲಿ ಮುದ್ರಕರ ಮತ್ತು ಪ್ರಕಾಶಕರ ಹೆಸರು ನಮೂದಿಸುವುದು ಕಡ್ಡಾಯವಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

