ಸುರಪುರಕ್ಕೆ ನೈಜ ಸ್ವಾತಂತ್ರ್ಯ ಸಿಕ್ಕಿದ್ದೇ ರಾಜುಗೌಡ ಶಾಸಕರಾದ ಮೇಲೆ
ಸುರಪುರ: ಉಸಿರುಗಟ್ಟುವ ರಾಜಕೀಯ ವಾತಾವರಣದಿಂದಾಗಿ 2003ರವರಗೆ ಸುರಪುರ ತಾಲೂಕಿನಲ್ಲಿ ಅಭಿವೃದ್ಧಿಗೆ ಗ್ರಹಣ ಹಿಡಿದಿತ್ತು. 2004ರಲ್ಲಿ ರಾಜೂಗೌಡರು ಶಾಸಕರಾಗಿ ಆಯ್ಕೆಯಾದ ನಂತರವೇ ಸುರಪುರ ತಾಲೂಕಿಗೆ ಗ್ರಹಣ ಬಿಟ್ಟಿತು. ನಂತರವೇ ನೈಜ ಸ್ವಾತಂತ್ರ್ಯ ಸಿಕ್ಕಿದ್ದು ಎಂದರೆ ತಪ್ಪಾಗಲಾರದು ಎಂದು ಜೆಡಿಎಸ್ ಹಿರಿಯ ಮುಖಂಡ ಅಪ್ಪಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕಿಯವಾಗಿ, ಸಾಮಾಜಿಕವಾಗಿ ತಾಲೂಕಿಗೆ ಸ್ವಾತಂತ್ರ್ಯ ತಂದು ಕೊಟ್ಟು, ತಾಲೂಕನ್ನು ಅಭಿವೃದ್ಧಿ ಪಥದತ್ತ ಒಯ್ದ ಕೀರ್ತಿ ಮಾಜಿ ಸಚಿವ ರಾಜುಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.
ನೇರ ಹಣಾಹಣಿ: ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೂ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದೆ. ಇದರಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡರು ಸುಮಾರು 15 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ತಾಲೂಕಿನಲ್ಲಿ ಕೆಲವಡೆ ರಾಜುಗೌಡರ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ಹೇಳಿಕೆಗಳಿಗೆ ಯಾರೂ ತೆಲೆಕೆಡಿಸಿಕೊಳ್ಳಬಾರದು. ಈ ಮೊದಲು ಕಾಂಗ್ರೆಸ್ನಲ್ಲಿ ಇದ್ದವರು ಸಚಿವರಾದಾಗ ರಾಜುಗೌಡರು ಹತ್ತಿರ ಬಂದು ತಮ್ಮ ಬುತ್ತಿಗಂಟು ಕಟ್ಟಿಕೊಂಡು ಹೋಗಿದ್ದಾರೆಯೇ ಹೊರತು ರಾಜುಗೌಡರ ನಿಷ್ಠಾವಂತ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಅವರ ಜೊತೆಯಲ್ಲೇ ಇದ್ದು ಅವರ ಗೆಲವಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ.
ತಾಲೂಕಿನ ಸಾಮಾಜಿಕ ಕಳಕಳಿಯ ವ್ಯಕ್ತಿ ರಾಜುಗೌಡರು ಆಯ್ಕೆಯಾದ ಪ್ರಾರಂಭದಲ್ಲಿ ರೈತರ ಜೀವನಾಡಿಯಾದ ಬೋನಾಳ ಏತ ನೀರಾವರಿಗೆ ಪ್ರಥಮ ಆದ್ಯತೆ ನೀಡಿದ್ದಾರೆ. ಅಲ್ಲದೆ ಪ್ರತಿ ವರ್ಷ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಪಾಲು, ಸಮಬಾಳು: ಎಲ್ಲಾ ಜಾತಿ ಜನಾಂಗದವರಿಗೆ ಸಮಪಾಲು, ಸಮಬಾಳು ಎನ್ನುವ ತತ್ವದಡಿ ಎಲ್ಲರಿಗೂ ಅಧಿಕಾರ ಕೊಡಿಸಿದ್ದಾರೆ. ತಾಲೂಕಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಹಿಂದುಳಿದ ಕುರುಬ ಸಮಾಜದವರಿಗೆ ರಾಜಕೀಯದಲ್ಲಿ ಇದುವರೆಗೆ ಯಾವ ಪಕ್ಷದವರೂ ಸೂಕ್ತ ಸ್ಥಾನಮಾನ ಕೊಟ್ಟಿರಲಿಲ್ಲ. ಆದರೆ ರಾಜುಗೌಡರು ಗ್ರಾಪಂ, ತಾಪಂ, ಜಿಪಂಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ತಾಲೂಕಿನಲ್ಲಿ ಶಾಂತಿ ಸೌಹಾರ್ದತೆ, ನೆಮ್ಮದಿಯನ್ನು ತಂದು ಕೊಟ್ಟಿದ್ದಾರೆ ಎಂದು ಅಪ್ಪಾಸಾಹೇಬ ತಿಳಿಸಿದರು.
ರಾಜುಗೌಡರ ಅವಧಿಯಲ್ಲಿ ಪಟ್ಟಣದಲ್ಲಿ ಮಿನಿ ವಿಧಾನಸೌಧ, ಅಗ್ನಿ ಶಾಮಕ ಠಾಣೆ, ಬಸ್ ಘಟಕ, ಶಾದಿಮಹಲ್, ಕಲ್ಯಾಣ ಮಂಟಪ, ಅಂಬೇಡ್ಕರ್ ಭವನ, ಉಗ್ರಾಣ ನಿಗಮಗಳು, ಪ್ರೌಢಶಾಲೆ, ನೂತನ ವಸತಿ ನಿಲಯ, ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ನೀರು ಸೇರಿದಂತೆ ಅನೇಕ ಕಾಮಗಾರಿಗಳನ್ನು ಹಾಗೂ ವಿವಿಧ ವಸತಿ ಯೋಜನೆ ಅಡಿಯಲ್ಲಿ ಆಶ್ರಯ ಮನೆಗಳು ಮತ್ತು ಬಂಡೋಳಿ ತಿಂಥಣಿ ಉಪಲದಿನ್ನಿ ನಿರಾಶ್ರಿತರಿಗೆ ಮನೆ ಒದಗಿಸಿದ್ದು ಅವರ ಗೆಲವಿಗೆ ಶ್ರೀರಕ್ಷೆ ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

