ಕಾಂಗ್ರೆಸ್- ಬಿಜೆಪಿ ಅಂಗಳದಲ್ಲಿ ನಿರಂತರ ಒಳಜಗಳ: ಬಿಎಸ್ವೈ ವ್ಯಂಗ್ಯ
ಕನ್ನಡಪ್ರಭ ವಾರ್ತೆ, ಸೇಡಂ, ಏ.16
ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಂತ್ರಿಗಳಾಗಿದ್ದರೂ ರಾಜ್ಯಕ್ಕೆ ಮೂಲ ಸೌಕರ್ಯ, ಹೊಸ ಯೋಜನೆಗಳ ರೂಪದಲ್ಲಿ ಉಮ್ಮತ, ಜನ ಮೆಚ್ಚುವಂತಹ ಕೊಡುಗೆಗಳನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸೇಡಂ ಪಟ್ಟಣದಲ್ಲಿ ವೈಜನಾಥ ಪಾಟೀಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್- ಬಿಜೆಪಿಯಲ್ಲಿ ಬರಿ ಜಗಳಗಳ ಸಂತೆ ನಡೆಯುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ನಲ್ಲಿ ಎಸ್.ಎಂ. ಕೃಷ್ಣ ಅವರು ಸಹ ಹಿಂದೆ ಸರಿಯುತ್ತಿರುವುದು ಎರಡೂ ಪಕ್ಷಗಳಲ್ಲಿರುವ ಹುಳುಕು ತೋರಿಸುತ್ತದೆ. ಈ ಮೂಲಕ ಕೆಜೆಪಿಗೆ ಮತದಾರರು ಬೆಂಬಲಿಸುತ್ತಿದ್ದಾರೆ ಎಂದರು.
ಕರ್ನಾಟಕದ ಶಕ್ತಿ ದೇಶಕ್ಕೆ: ಗುಲ್ಬರ್ಗ ಜಿಲ್ಲೆಯಲ್ಲಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದ ಅವರು, ರಾಷ್ಟ್ರಮಟ್ಟದಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿ, ಕರ್ನಾಟಕದ ಶಕ್ತಿ ದೇಶಕ್ಕೆ ತೋರಿಸುವ ಕೆಲಸ ಮಾಡುತ್ತೇನೆ ಎಂದರು. ನಂಜುಂಡಪ್ಪ ವರದಿ ಕಸದ ಬುಟ್ಟಿಗೆ ಹಾಕಲಾಗಿತ್ತು, ಅದನ್ನು ಮತ್ತೆ ಎತ್ತಿ ಹಿಡಿಯುವ ಕೆಲಸ ಮಾಡುವ ಇಚ್ಚೆ ಇದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಲ್ಲರೂ ಶಿಕ್ಷಿತರಾಗಬೇಕು ಎಂದರು.
ಕೆಜೆಪಿ ಜಿಲ್ಲಾಧ್ಯಕ್ಷ ಸುನೀಲ್ ವಲ್ಯಾಪುರೆ, ಅಭ್ಯರ್ಥಿ ವೈಜನಾಥ ಪಾಟೀಲ್ ಮಾತನಾಡಿ, ಕೆಜೆಪಿ ಪರವಾಗಿ ಮತದಾರರು ಆಸಕ್ತಿ- ಕುತೂಹಲಿಗಳಾಗಿದ್ದಾರೆ. ಬರುವ ಚುನಾವಣೆಯಲ್ಲಿ ಕೆಜೆಪಿ ಜಯಭೇರಿ ಬಾರಿಸಲಿದೆ ಎಂದರು.
ಮೆಚ್ಚುಗೆ ವ್ಯಕ್ತ: ಯಡಿಯೂರಪ್ಪ ಸಿಎಂ ಆಗಿದ್ದಾಗ ಕಲಂ 371 ಅನುಷ್ಠಾನದ ಒಕ್ಕೊರಲಿನ ನಿರ್ಣಯ ಉಭಯ ಸದನಗಳಲ್ಲಿ ತೆಗೆದುಕೊಂಡು ಎಲ್ಲಾ ಸಿಎಂಗಳಿಗಿಂತ ಹೆಚ್ಚು ಬಿನ್ನವಾಗಿ ಹಾಗೂ ಸಂಪೂರ್ಣವಾಗಿ ಹೈ-ಕ ಜನರ ಬೇಡಿಕೆಗೆ ಸ್ಪಂದಿಸಿದವರು ಯಡಿಯೂರಪ್ಪ ಎಂದು ಇದೇ ಸಂದರ್ಭದಲ್ಲಿ ವೈಜನಾಥ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಪ್ರ. ಕಾರ್ಯದರ್ಶಿ ತಿಪ್ಪಣ್ಣಪ್ಪ ಕಮಕನೂರ, ಬಸವರಾಜ ಇಂಗಿನ್, ಸುಭಾಷ ಬಿರಾದಾರ, ಸಿ. ಗುರುನಾಥ, ಶ್ರೀನಾಥ ಪಿಲ್ಲಿ, ಶಿವಾನಂದ, ಕೈಲಾಸನಾಥ, ರವಿರಾಜ ಕೊರವಿ, ಪುರಸಭೆ ಸದಸ್ಯೆ ಮಲ್ಲಮ್ಮ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಸೇರ್ಪಡೆ: ಈ ಸಂದರ್ಭದಲ್ಲಿ ಜೆಡಿಎಸ್ ತೊರೆದ ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ಮದನಾ, ಮುಖಂಡ ನರೇಶ ಮಲಕೂಡ, ಶರಣರೆಡ್ಡಿ ಜಿಲ್ಲೇಡಪಲ್ಲಿ, ಶರಣಭೂಪಾಲರೆಡ್ಡಿ ಹಾಗೂ ಬಸವರಾಜ ಬೆಣ್ಣೂರ್, ಮಸ್ತಾನ್, ದಶರಥ ನಾಮದಾರ, ಪ್ರಕಾಶಶೆಟ್ಟಿ ಯಾನಾಗುಂದಿ, ಪರ್ವತರೆಡ್ಡಿ ನಾಮವಾರ, ಸೋಮಶೇಖರ ದೇವಣಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕೆಜೆಪಿ ಸೇರ್ಪಡೆಗೊಂಡರು.
'ಕೆಜೆಪಿ ಅನಿವಾರ್ಯ'
ಸೇಡಂ: ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿರುವ ಮಾಜಿ ಸಿಎಂ ಯಡಿಯೂರಪ್ಪ ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಕೆಜೆಪಿ ಸಹಾಯ ಸಹಕಾರ ಅನಿವಾರ್ಯ ಎಂದು ಹೇಳಿದ್ದಾರೆ.
ಸೇಡಂನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಪಕ್ಷಗಳು ಕಜಪ ಮಾಡಲೇಬೇಕಾದಂತಹ ವಾತಾವರಣ ಚುನಾವಣೆಯ ನಂತರ ಮೂಡಲಿದೆ ಎಂದರಲ್ಲದೆ ಸ್ಪಷ್ಟ ಬಹುಮತ ಯಾವ ಪಕ್ಷವೂ ಪಡೆಯಲಾಗದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

