ಗುಲ್ಬರ್ಗಾ

ನಾಸಿರ್ ವಿರುದ್ಧ ಖಮರುಲ್ ವಾಗ್ದಾಳಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.21
ನಾಮಪತ್ರ ಪರಿಶೀಲನೆ ಕಾಲಕ್ಕೆ ಉಂಟಾದಂತಹ ಬಿ ಫಾರ್ಮ್ ಗೊಂದಲಕ್ಕೆ ತಾವೇ ಕಾರಣ ಎಂದು ಗಂಭೀರ ಆರೋಪದೊಂದಿಗೆ ಸುದ್ದಿ ಮಾಡಿದ್ದ ಕೆಜೆಪಿ ಹುರಿಯಾಳು ನಾಸೀರ್ ಹುಸೇನ್ ಅವರ ವಿರುದ್ಧ ಗುಲ್ಬರ್ಗ ಉತ್ತರ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಖಮರುಲ್ ಇಸ್ಲಾಂ ವಾಗ್ದಾಳಿ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ಲಾಂ ತಾವು ನಾಲ್ಕು ಬಾರಿ ಶಾಸಕರಾಗಿ ಜನಸೇವೆ ಮಾಡಿರುವ ಅನುಭವ ಇರುವವರು. ಸಮಾಜ ಸೇವೆಯೇ ತಮ್ಮ ಉಸಿರು ಎಂದರಲ್ಲದೆ ಕೃಷ್ಣ ಸರ್ಕಾರದಲ್ಲಿ ವಸತಿ ಯೋಜನೆಗಳಿಗೆ ಹೊಸ ರೂಪ ನೀಡಿದ್ದು, ತಾವೇ ಎಂದು ಹೇಳುವ ಮೂಲಕ ಸಮಾಜ ಸೇವೆಯೇ ಗೊತ್ತಿಲ್ಲದ ನಾಸೀರ್ ಹುಸೇನ್ ಕೇವಲ ಆಧಾರ ರಹಿತ ಆರೋಪ ಮಾಡುತ್ತ ಎಲೆಕ್ಷನ್ ಎದುರಿಸಲು ಸಾಧ್ಯವಿಲ್ಲ, ಅವರಿಗೆ ಮತ ಕೇಳುವ ನೈತಿಕ ಹಕ್ಕೇ ಇಲ್ಲ ಎಂದು ದೂರಿದರು.
ಅವರ ಅಚಾತುರ್ಯಕ್ಕೆ ತಾವು ಹೇಗೆ ಹೊಣೆ: ಪಾಲಿಕೆಯಲ್ಲಿ ನಾಮಪತ್ರ ಪರಿಶೀಲನೆ ಕಾಲದಲ್ಲಿ ಆಗಿರುವ ಅಚಾತುರ್ಯಕ್ಕೆ ತಾವು ಹೇಗೆ ಹೊಣೆಯಾಗುತ್ತೇನೆ ಎಂದು ಪ್ರಶ್ನಿಸಿದ ಖಮರುಲ್ ಈ ವಿಷಯವನ್ನು ವಿನಾಕಾರಣ ರಾಜಕೀಯಕ್ಕೆ ತಂದು ತಳಕು ಹಾಕಿರುವ ನಾಸೀರ್ ಪ್ರಯತ್ನವನ್ನು ಖಂಡಿಸಿದರಲ್ಲದೆ, ಚುನಾವಣಾಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ. ಅದಕ್ಕೆ ಸುಮ್ಮನಾಗದೆ ಇಲ್ಲಸಲ್ಲದ ಆರೋಪ ಮಾಡುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ನಾಸೀರ್ ಮುಂದಾಗಿದ್ದು ದುರಂತ ಎಂದರು.
ಹಳೆಯ ಕಾಲದ ನೆನಪು ನಾಸೀರ್ ಹುಸೇನ್ ತಂದೆ ಸಾದತ್ ಹುಸೇನ್ ಅವರೊಂದಿಗೂ ತಾವು ಚುನಾವಣೆ ಎದುರಿಸಿದ್ದಾಗಿ ಹಳೆಯ ಕಾಲದ ನೆನಪುಗಳನ್ನು ಖಮರುಲ್ ಮೆಲಕು ಹಾಕಿದರು. ಸಾದತ್ ಹುಸೇನ್ ಅವರು ತಂಬ ಪ್ರತಿಷ್ಠೆಯಿಂದ, ಶಿಸ್ತಿನಿಂದ ಚುನಾವಣೆ ಮಾಡುತ್ತಿದ್ದರು. ಅದು ನನಗೆ ತುಂಬ ಹಿಡಿಸಿದ ಪದ್ಧತಿ. ಅದೇ ರೀತಿ ಅವರ ಪುತ್ರ ನಾಸೀರ್ ವರ್ತನೆ ಇರಬೇಕು ಎಂದು ಬಯಸುವವ ನಾನು. ಆದರೆ ನಾಸೀರ್ ಅದನ್ನೆಲ್ಲ ಬದಿಗೊತ್ತಿ ಕೀಳು ರಾಜಕೀಯಕ್ಕೆ ಮುಂದಾಗುತ್ತಿರುವುದು ಅವರ ಚಿಂತನೆಯ ಮಟ್ಟಕ್ಕೆ ಸಾಕ್ಷಿ ಎಂದು ಖಮರುಲ್ ಮಾತಿನಿಂದ ತಿರುಗೇಟು ನೀಡಿದರು.
ಸಿದ್ಧಾಂತ ಆಧಾರಿತ: ತಮ್ಮ ವಿರುದ್ಧ ಬಿ ಫಾರ್ಮ್ ನಾಪತ್ತೆ ಪ್ರಕರಣದ ಆರೋಪ ಹೊರಿಸಿ ಸಿಓಡಿ ತನಿಖೆಗೆ ಕೆಜೆಪಿ ಆಗ್ರಹಿಸಿದೆ. ಇದು ಹುರುಳಿಲ್ಲದ ಆರೋಪ. ಕೆಜೆಪಿ ಪ್ರಮುಖ ಯಡಿಯೂರಪ್ಪ ಬಂದರೂ ತಾವು ಚುನಾವಣೆಯಲ್ಲಿ ಅಂಜೋದಿಲ್ಲ. ಚುನಾವಣೆ ಎದುರಿಸಿ ಗೆಲ್ಲುತ್ತೇನೆ ಎಂದರಲ್ಲದೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಆಧಾರಿತ ರಾಜಕೀಯಕ್ಕೆ ಜನ ಮನಸೋತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ದುರಾಡಳಿತಕ್ಕೆ ವಿರುದ್ಧವಾದಂತಹ ಜನಾದೇಶ ಬರಲಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಏರುವುದು ನಿಶ್ಚಿತ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.