ಗುಲ್ಬರ್ಗಾ

9 ತಿಂಗಳಿಂದ ಭ್ರಷ್ಟಾಚಾರ ರಹಿತ ಆಡಳಿತ

Published On :

ಗುಲ್ಬರ್ಗ/ಶಹಾಬಾದ್: ಕಳೆದ ಒಂಬತ್ತು ತಿಂಗಳಿನಿಂದ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ, ಪ್ರತಿಪಕ್ಷಗಳಿಂದ ಯಾವುದೇ ಆರೋಪ ಮುಕ್ತ, ಕಪ್ಪು ಚುಕ್ಕೆ ಇಲ್ಲದೆ ಆಡಳಿತವನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಪಕ್ಷದ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಸಚಿವ ರೇವುನಾಯಕ ಬೆಳಮಗಿ ಪರ ಅವರು ಭಾನುವಾರ ಸಂಜೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತ ಹೈದ್ರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಗುಲ್ಬರ್ಗದಲ್ಲಿ ಕ್ಯಾಬಿನೆಟ್ ಸಭೆ ನಡೆಸಿ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದ್ದೇನೆ ಎಂದರು.
ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇನೆ. ಇದರಿಂದ ಗುಲ್ಬರ್ಗ, ರಾಯಚೂರು, ಬೀದರ್, ಬಳ್ಳಾರಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.
ಜನರ ಹೋರಾಟದ ಫಲ: ಕಲಂ 371 ಜಾರಿಗೊಳಿಸಲು ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ. 371ಕಲಂ ಜಾರಿಗೊಳಿಸಿದ್ದು ಕೇಂದ್ರ ಸರ್ಕಾರವಲ್ಲ, ಅದು ಜಾರಿಗೊಳಿಸಿದ್ದು ಈ ಭಾಗದ ಜನ, ಅವರು ಮಾಡಿದ ಹೋರಾಟದ ಫಲ ಎಂದರು.
ಕೆಲವರು ಪಕ್ಷ ತಮ್ಮ ಬೆನ್ನಿಗೆ ಚೂರಿ ಹಾಕಿದೆ ಎಂದು ಹೇಳುತ್ತ ತಿರುಗುತ್ತಿದ್ದಾರೆ. ಆದರೆ ಪಕ್ಷ ಯಾರಿಗೂ ಚೂರಿ ಹಾಕಿಲ್ಲ ಎಂದು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಕುರಿತು ಮಾತನಾಡಿದ ಅವರು ಭ್ರಷ್ಟಾಚಾರದ ಆರೋಪದ ಮೇಲೆ ತಮ್ಮ ಬೆನ್ನಿಗೆ ತಾವೆ ಚೂರಿ ಹಾಕಿಕೊಂಡಿದ್ದಾರೆ ಮತ್ತು ತಮ್ಮನ್ನು ಬೆಳಸಿದ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು.
ರೇವುನಾಯಕ ಬೆಳಮಗಿ, ವಾಲ್ಮೀಕಿ ನಾಯಕರವರಿಗೆ ಎಷ್ಟೆ ಒತ್ತಡ ತಂದರು ತಮ್ಮ ಪಕ್ಷ ನಿಷ್ಟೆಯನ್ನು ಮೆರೆದಿದ್ದಾರೆ. ಇಂಥ ಪಕ್ಷ ನಿಷ್ಟರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕರೆ ನೀಡಿದರು.
ಬೆಳಮಗಿಗೆ 5 ಅಂಕಿಯ ಮಹತ್ವ: ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, ನಾನು 1994 ರಿಂದ ಒಟ್ಟು 5 ಬಾರಿ ವಿಧಾನಸಭೆ ಚುನಾವಣೆಗೆ ನಿಂತಿದ್ದೇನೆ, 5 ಬಾರಿ ಗೆಲವು ಸಾಧಿಸಿದ್ದೇನೆ, ಈ ಬಾರಿ ಚುನಾವಣೆ ದಿನಾಂಕವು ಸಹ 5 ರಂದೆ ಇದೆ ಎಂದು ತಮ್ಮ ರಾಜಕೀಯ ಜೀನವದಲ್ಲಿ 5ರ ಮಹತ್ವವನ್ನು ವಿವರಿಸಿ ಮಾತನಾಡಿದರು.
ಶಾಸಕ ವಾಲ್ಮೀಕಿ ನಾಯಕ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಸಣ್ಣ ಕೈಗಾರಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶರಣಪ್ಪ ತಳವಾರ, ಜಿಪಂ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ, ಬಿಜೆಪಿ ಮುಖಂಡರಾದ ಮುಕುಂದ ದೇಶಪಾಂಡೆ, ಬಿ.ಜಿ. ಪಾಟೀಲ್, ಶಶಿಕಲಾ ಟೆಂಗಳಿ, ಡಾ.ಇಂದಿರಾ ಶಕ್ತಿ, ನಗರ ಬಿಜೆಪಿ ಅಧ್ಯಕ್ಷ ಡಾ. ಅಶೋಕ ಜಿಂಗಾಡೆ, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬಾಲಕೃಷ್ಣ ವರ್ಮಾ, ಅರುಣಕುಮಾರ ಪಟ್ಟಣಕರ್, ನವನಾಥ ಕುಸಾಳೆ, ಕನಕಪ್ಪ ದಂಡಗುಲಕರ್, ಭೀಮರಾವ ಸಾಳೊಂಕೆ, ಶಾಂತರೆಡ್ಡಿ ದಂಡಗುಲಕರ್ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. ಶರಣು ವಸ್ತ್ರದ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಸುಭಾಷ ಚೌಧರಿ ಸಹಿತ ನೂರಾರು ಜನ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಮುಖ್ಯಂತ್ರಿಗಳು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.